ಯಾದಗಿರಿಯಲ್ಲಿ ಸ್ವಯಂಘೋಷಿತ ದೇವಮಾನವ ಮಲ್ಲಿಕಾರ್ಜುನ ಮುತ್ಯಾ ವಿರುದ್ಧ ಪೋಕ್ಸೋ ಪ್ರಕರಣ

ಯಾದಗಿರಿ : ಕರ್ನಾಟಕದ ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ಮಹಲ್ ರೋಜಾ ಗ್ರಾಮದ ಯಮನೂರಪ್ಪ ಮುತ್ಯಾ ಮಠದ ಸ್ವಯಂ ಘೋಷಿತ ದೇವಮಾನವ ಮಲ್ಲಿಕಾರ್ಜುನ ಮುತ್ಯಾ ಅವರ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ಅಪ್ರಾಪ್ತ ಬಾಲಕಿಯೊಂದಿಗೆ ಅನುಚಿತವಾಗಿ ವರ್ತಿಸಿದ ಆರೋಪದ ಮೇಲೆ ಗೋಗಿ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದ್ದು, ಫೆಬ್ರವರಿ 26, 2026 ರಂದು ಈ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ನಂತರ ತಕ್ಷಣ ಪೊಲೀಸರು ಮಧ್ಯಪ್ರವೇಶಿಸಿದರು.

ಸ್ವಯಂ ಘೋಷಿತ ದೇವಮಾನವ ಎಂದು ಹೇಳಿಕೊಳ್ಳುವ ಮಲ್ಲಿಕಾರ್ಜುನ ಮುತ್ಯಾ ಅವರು ಅಪ್ರಾಪ್ತ ಬಾಲಕಿಯೋರ್ವಳ ಕುತ್ತಿಗೆ ಹಿಡಿದು ಎತ್ತಿ ಮಂಚದ ಮೇಲೆ ನಿಲ್ಲಿಸುವುದು ಸೇರಿದಂತೆ ಆಕೆಗೆ ಚಿವುಟುವುದರ ಜೊತೆಗೆ ಬಾಲಕಿಯನ್ನು ತೊಡೆ ಮೇಲೆ ಕೂರಿಸಿಕೊಂಡು ಮುದ್ದಿಸುವಂತ ಅಸಭ್ಯವಾಗಿ ವರ್ತಿಸಿರುವ ದೃಶ್ಯಗಳನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ. ಇನ್ನು ಈ ಕ್ಲಿಪ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದೇ ತಡ ಮುತ್ಯಾ ನಡೆಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು, ಮತ್ತು ಜನರ ಆಕ್ರೋಶ ಗುರಿಯಾಗಿತ್ತು, ಈ ಬಗ್ಗೆ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷ ಶಶಿಧರ ಕೋಸುಂಬೆ ಅವರು ದೂರು ದಾಖಲಿಸಲು ಸೂಚಿಸಿದ್ದರು. ಶಹಾಪುರ ತಾಲೂಕು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಮಲ್ಲಣ್ಣ ಉಮಾಪತಿ ಅವರ ದೂರಿನ ಮೇರೆಗೆ ಪೊಲೀಸರು ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಿದ್ದಾರೆ.

26 ವರ್ಷ ಆಸುಪಾಸಿನ ಮುತ್ಯಾ ಇತ್ತೀಚಿನ ವರ್ಷಗಳಲ್ಲಿ ಸಾಮಾಜಿಕ ಜಾಲತಾಣಗಳ ಮೂಲಕ ಬಹಳ ಪ್ರಸಿದ್ಧಿ ಪಡೆದಿದ್ದಾರೆ. ಉತ್ತರ ಕರ್ನಾಟಕದ ಅನೇಕ ಭಕ್ತರು ಇವರನ್ನು ಅಪ್ಪಾಜಿ ಅಥವಾ ನಡೆದಾಡುವ ದೇವರು ಎಂದು ನಂಬಿ ಗೌರವಿಸುತ್ತಾರೆ. ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್‌ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿರುವ ಮುತ್ಯಾ,ಅಪಾರ ಅನುಯಾಯಿಗಳನ್ನು ಹೊಂದಿದ್ದಾರೆ.ಇದೀಗ ಪೋಕ್ಸೋ ಕೇಸ್ ದಾಖಲಾಗುತ್ತಿದ್ದಂತೆಯೇ ದೇವಮಾನವ ಮುತ್ಯಾ ಹೈದರಾಬಾದ್‌ಗೆ ಪರಾರಿಯಾಗಿ ತಲೆಮರೆಸಿ ಕೊಂಡಿದ್ದಾರೆ. ಅವರನ್ನು ಯಾವುದೇ ಕ್ಷಣದಲ್ಲಿ ಬಂಧಿಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!