ಮಂಗಳೂರು: ಮಂಗಳೂರಿನಲ್ಲಿ ಮತ್ತೆ ಬಾಂಬ್ ಬೆದರಿಕೆ ಬಂದಿದೆ.ಲೂರ್ಡ್ಸ್ ಸ್ಕೂಲಿಗೆ ಬಾಂಬ್ ಬೆದರಿಕೆ ಇಮೇಲ್ ಮೂಲಕ ಬಂದಿದ್ದು , ಪೊಲೀಸರು ತಪಾಸಣೆ ನಡೆಸಿದ್ದಾರೆ.
ನಗರದ ಪ್ರತಿಷ್ಠಿತ ಬಿಜೈ ಲೂರ್ಡ್ಸ್ ಸ್ಕೂಲಿಗೆ ಬಾಂಬ್ ಬೆದರಿಕೆ ಇಮೇಲ್ ಬಂದಿದೆ. ಶಾಲೆಯ ಇಮೇಲ್ ವಿಳಾಸಕ್ಕೆ ಬೆದರಿಕೆ ಬಂದಿದ್ದು ಪೊಲೀಸರಿಗೆ ದೂರು ನೀಡಲಾಗಿದೆ.
ಕದ್ರಿ ಪೊಲೀಸರು ಮತ್ತು ಬಾಂಬ್ ನಿಷ್ಕ್ರಿಯ ದಳದವರು ಸ್ಥಳಕ್ಕೆ ಬಂದಿದ್ದು ಪರಿಶೀಲನೆ ಕೈಗೊಂಡಿದ್ದಾರೆ. ಇತ್ತೀಚೆಗೆ ಮಂಗಳೂರಿನ ಕೋರ್ಟಿನಲ್ಲಿ ಬಾಂಬ್ ಇಡಲಾಗಿದೆ ಎಂದು ಬೆದರಿಕೆ ಇಮೇಲ್ ಬಂದಿತ್ತು. ಪೊಲೀಸರು ಪರಿಶೀಲನೆ ಕೈಗೊಂಡು ಹುಸಿ ಬೆದರಿಕೆ ಎಂದು ಹೇಳಿದ್ದರು. ತಮಿಳುನಾಡು ಮೂಲದಿಂದ ರಾಜ್ಯದ ಹಲವು ಕಡೆಯ ಕೋರ್ಟು ಕಚೇರಿಗಳಿಗೆ ಬಾಂಬ್ ಬೆದರಿಕೆ ಬಂದಿದ್ದು ಪತ್ತೆಯಾಗಿತ್ತು. ಇದೇ ವೇಳೆ, ಬೆಂಗಳೂರಿನ ಹಲವು ಶಾಲೆಗಳಿಗೆ ಬಾಂಬ್ ಬೆದರಿಕೆ ಬಂದಿತ್ತು.
ಇದೀಗ ಮಂಗಳೂರಿನ ಪ್ರತಿಷ್ಠಿತ ಲೂರ್ಡ್ಸ್ ಶಾಲೆಗೆ ಬೆದರಿಕೆ ಬಂದಿದ್ದು ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ. ಯಾರು ಬಾಂಬ್ ಬೆದರಿಕೆ ಒಡ್ಡಿದ್ದಾರೆ ಎನ್ನುವುದರ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ಈವರೆಗಿನ ತಪಾಸಣೆಯಲ್ಲಿ ಯಾವುದೇ ಅಸಹಜ ವಸ್ತು ಪತ್ತೆಯಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.