ಮಂಗಳೂರು: ಕುಡ್ಲದ ಮಹಿಳಾ ಉದ್ಯಮಿಗಳಿಗೆ ಸಮರ್ಪಕ ವೇದಿಕೆ ಕಲ್ಪಿಸುವ ನಿಟ್ಟಿನಲ್ಲಿ ಆರಂಭವಾದ ‘ಇವೂಲ್ಟ್’ ಸಂಘಟನೆಯು ಇಂದು ಯಶಸ್ವಿ ಐದು ವರ್ಷಗಳನ್ನು ಕ್ರಮಿಸಿದೆ . ಈ ಸಂಭ್ರಮವನ್ನು ಅರ್ಥಪೂರ್ಣವಾಗಿಸಲು ಫೆಬ್ರವರಿ 28ರಂದು ನಗರದ ಹೋಟೆಲ್ ಓಷನ್ ಪರ್ಲ್ನಲ್ಲಿ ‘ಬಿಜ್ ಇನ್ಸೆಟ್’ ಉದ್ಯಮ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ” ಎಂದು ಸಂಘಟನೆಯ ಅಧ್ಯಕ್ಷರಾದ ಅಮೃತಾ ನಾಯಕ್ ತಿಳಿಸಿದರು.
ಅವರು ನಗರದ ಪತ್ರಿಕಾಭವನದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಈ ಬಾರಿಯ ಸಮಾವೇಶದ ಪ್ರಮುಖ ಆಕರ್ಷಣೆಯಾಗಿ ‘ಮಂಗಳೂರಿನಲ್ಲಿ ಉದ್ಯಮಶೀಲತೆ – ಸದ್ಯದ ಸ್ಥಿತಿ ಮತ್ತು ಮುಂದಿನ ಹಾದಿ’ ಎಂಬ ವಿಷಯದ ಕುರಿತು ತಜ್ಞರಿಂದ ಸಂವಾದ ನಡೆಯಲಿದೆ. ಇದರಲ್ಲಿ ನಗರದ ಪ್ರಮುಖ ಉದ್ಯಮ ಸಂಸ್ಥೆಗಳಾದ ರೋಹನ್ ಕಾರ್ಪೋರೇಷನ್, ಎನ್ಟಿಟಿ ಡೇಟಾ, ಮತ್ತು ಗರೋಡಿ ಸ್ಟೀಲ್ಸ್ ಸೇರಿದಂತೆ ವಿವಿಧ ಸಂಸ್ಥೆಗಳ ಪ್ರತಿನಿಧಿಗಳು ಪಾಲ್ಗೊಳ್ಳಲಿದ್ದಾರೆ ಎಂದು ವಿವರಿಸಿದರು.
ವಿಶಿಷ್ಟ ಪ್ರಯತ್ನವಾಗಿ, ಈ ಬಾರಿ ಖ್ಯಾತ ಇನ್ಸ್ಟ್ರಾಗ್ರಾಮ್ ಇನ್ನುಯೆನ್ಸರ್ ಧೀರಾಜ್ ಶೆಟ್ಟಿ ಮಿಜಾರ್ ಅವರು ಮಾರ್ಕೆಟಿಂಗ್ ತಂತ್ರಗಳನ್ನು ಕಾಮಿಡಿ ರೂಪದಲ್ಲಿ ಪ್ರಸ್ತುತಪಡಿಸಲಿದ್ದಾರೆ. ಇದು ಹೊಸ ಉದ್ಯಮಿಗಳಿಗೆ ಕಥೆಗಳ ಮೂಲಕ ಉದ್ಯಮದ ಒಳನೋಟಗಳನ್ನು ಪಡೆಯಲು ಸಹಕಾರಿಯಾಗಲಿದೆ ಎಂದು ಅವರು ಆಶಯ ವ್ಯಕ್ತಪಡಿಸಿದರು. ನಗರದ ನೋಂದಾಯಿತ ಮಹಿಳಾ ಉದ್ಯಮಿಗಳಿಗಾಗಿಯೇ ಇರುವ ಪ್ರಥಮ ಹಾಗೂ ಏಕೈಕ ಸಂಘಟನೆ ಎಂಬ ಹೆಗ್ಗಳಿಕೆ ‘ಇವೊಲ್ಟ್’ ಗೆ ಇದೆ. ಮಹಿಳೆಯರ ನಾಯಕತ್ವ ಗುಣ ಮತ್ತು ಉದ್ಯಮದ ಬೆಳವಣಿಗೆಗೆ ಪೂರಕವಾದ ಪರಿಸರ ನಿರ್ಮಿಸಲು ನಾವು ಬದ್ಧರಾಗಿದ್ದೇವೆ ಎಂದು ಅಮೃತಾ ನಾಯಕ್ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಸಂಘಟನೆಯ ಉಪಾಧ್ಯಕ್ಷರಾದ ಗ್ಯಾನ್ಸಿ ಫರ್ನಾಂಡಿಸ್, ಕಾರ್ಯದರ್ಶಿ ನಂದಿತಾ ರಾವ್, ಕೋಶಾಧಿಕಾರಿ ಪೂರ್ಣಿಮಾ ಶೆಟ್ಟಿ ಹಾಗೂ ಜಂಟಿ ಕಾರ್ಯದರ್ಶಿ ಯಶೋದಾ ಪ್ರಭು ಅವರು ಉಪಸ್ಥಿತರಿದ್ದರು.