ಪುತ್ತೂರು: ಪುತ್ತೂರಿನಲ್ಲಿ ಗುರುವಾರ ಸಂಜೆ ವಿಮಾನವೊಂದು ಭೂಮಿ ಮಟ್ಟಕ್ಕೆ ಅತೀ ಸಮೀಪದಲ್ಲಿ ಹಾರಾಟ ನಡೆಸಿದ ದೃಶ್ಯ ಕಂಡುಬಂದಿದ್ದು, ಸ್ಥಳೀಯರಲ್ಲಿ ಆತಂಕ ಮೂಡಿಸಿತು. ಬಳಿಕ ಇದು ಭೂ ವಿಜ್ಞಾನಕ್ಕೆ ಸಂಬಂಧಿಸಿದ ಸಮೀಕ್ಷಾ ಕಾರ್ಯವೆಂದು ತಿಳಿದು ಬಂದ ಹಿನ್ನೆಲೆಯಲ್ಲಿ ಜನರು ನಿಟ್ಟುಸಿರು ಬಿಟ್ಟರು. ಪುತ್ತೂರು ಮಹಾಲಿಂಗೇಶ್ವರ ದೇವಾಲಯದ ವಠಾರದ ಗದ್ದೆ ಪ್ರದೇಶದ ಮೇಲ್ಭಾಗದಲ್ಲಿ ನೆಲ ಮಟ್ಟಕ್ಕೆ ಬಹಳ ಸಮೀಪದಲ್ಲಿ ವಿಮಾನ ಹಾರಾಡುತ್ತಿರುವುದನ್ನು ಸ್ಥಳೀಯರು ಗಮನಿಸಿದರು. ಈ ವಿಮಾನವು ನಗರದ ವಿವಿಧ ಭಾಗಗಳ ಮೇಲೂ ಸುಮಾರು 10 ರಿಂದ 15 ಸುತ್ತು ಹಾರಾಟ ನಡೆಸಿದುದಾಗಿ ತಿಳಿದು ಬಂದಿದೆ.
ಆರಂಭದಲ್ಲಿ ಈ ವಿಮಾನ ಯಾರದ್ದು, ಏಕೆ ಹಾರಾಟ ನಡೆಸುತ್ತಿದೆ ಎಂಬ ಬಗ್ಗೆ ಸ್ಪಷ್ಟ ಮಾಹಿತಿ ಲಭ್ಯವಾಗದ ಹಿನ್ನೆಲೆಯಲ್ಲಿ ಜನರಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಕೆಲವರು ಇದನ್ನು ಡ್ರೋನ್ ಅಥವಾ ಅನುಮಾನಾಸ್ಪದ ಹಾರಾಟವೆಂದು ಭಾವಿಸಿದ್ದರು. ಬಳಿಕ ಲಭ್ಯವಾದ ಮಾಹಿತಿಯ ಪ್ರಕಾರ, ಇದು ಭೂಮಿಯ ರಚನೆ ಹಾಗೂ ಭೌಗೋಳಿಕ ಅಧ್ಯಯನಕ್ಕೆ ಸಂಬಂಧಿಸಿದ ಸರ್ವೇ ಕಾರ್ಯವಾಗಿದ್ದು, ಪಶ್ಚಿಮ ಘಟ್ಟ ಪ್ರದೇಶಗಳಲ್ಲಿ ಭೂ ಭೌತಿಕ ಸಮೀಕ್ಷೆ ನಡೆಸಲಾಗುತ್ತಿದೆ ಎಂದು ತಿಳಿದುಬಂದಿದೆ.
ಈ ವಿಮಾನವು ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹಾರಾಟ ನಡೆಸಿದ್ದು, ಖನಿಜ ಸಂಪತ್ತು, ಭೂಗರ್ಭ ಜಲಸಂಪನ್ಮೂಲ ಹಾಗೂ ಭೂಮಿಯ ಚುಂಬಕ ಕ್ಷೇತ್ರದ ಬದಲಾವಣೆಗಳ ಬಗ್ಗೆ ಮಾಹಿತಿ ಸಂಗ್ರಹಿಸುವ ಉದ್ದೇಶ ಹೊಂದಿದೆ. ಈ ಸಮೀಕ್ಷೆಯನ್ನು ಗಾಳಿಯಿಂದ ಭೂಮಿಯ ಒಳಭಾಗವನ್ನು ಮ್ಯಾಪಿಂಗ್ ಮಾಡುವ ‘ಕ್ಯಾಲಿಬರ್ ಏರ್‌ಬೋನ್ ಜಿಯೋಫಿಸಿಕ್ಸ್’ ಕಂಪನಿಯ ವಿಮಾನದಿಂದ ನಡೆಸಲಾಗುತ್ತಿದೆ ಎಂದು ತಿಳಿದು ಬಂದಿದೆ.