ಪುತ್ತೂರಿನಲ್ಲಿ ಸರ್ಕಾರಿ ಬಾವಿ, ಕೆರೆ ಒತ್ತುವರಿ ಆರೋಪ: ಸಾರ್ವಜನಿಕ ಹಿತಾಸಕ್ತಿ ದೂರು ಸಲ್ಲಿಕೆ

ಪುತ್ತೂರು: ಪುತ್ತೂರು ನಗರಸಭೆ ಕಟ್ಟಡದ ಸಮೀಪ ನಿರ್ಮಾಣವಾಗುತ್ತಿರುವ ಕಟ್ಟಡ ಕಾಮಗಾರಿಯಲ್ಲಿ ಭೂ ಅತಿಕ್ರಮಣ ಹಾಗೂ ಸಾರ್ವಜನಿಕ ಕೆರೆಯನ್ನು ಒತ್ತುವರಿ ಮಾಡಲಾಗಿದೆ ಎಂದು ಆರೋಪಿಸಿ ಜಿಲ್ಲಾಧಿಕಾರಿ, ಸಹಾಯಕ ಆಯುಕ್ತ, ತಹಸೀಲ್ದಾರ್, ನಗರಸಭೆ ಹಾಗೂ ನಗರ ಯೋಜನಾ ಪ್ರಾಧಿಕಾರಕ್ಕೆ ದೂರು ನೀಡಿರುವುದಾಗಿ ನೆಹರುನಗರ ನಿವಾಸಿ ಸಂತೋಷ್ ಶೆಟ್ಟಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಪುತ್ತೂರು ಹೋಬಳಿಯ ಪುತ್ತೂರು ಕಸಬಾ ಗ್ರಾಮದ ಸರ್ವೆ ನಂ. 133/9ಎ ವ್ಯಾಪ್ತಿಯ ಸುಮಾರು 0.02 ಎಕರೆ ಸರ್ಕಾರಿ ಜಾಗದಲ್ಲಿ ಅನಾದಿ ಕಾಲದಿಂದ ಬಾವಿಯೊಂದು ಇದ್ದು, ಸ್ಥಳೀಯ ದೇವಿಯ ಆರಾಧನೆಗೆ ನೀರು ಹಾಗೂ ಪುತ್ತೂರು ಮಹಾಲಿಂಗೇಶ್ವರ ದೇವರ ಪೇಟೆ ಸವಾರಿಗೆ ಅಗತ್ಯವಾದ ನೀರನ್ನು ಈ ಬಾವಿಯಿಂದ ಬಳಸಲಾಗುತ್ತಿತ್ತು ಎಂದು ಅವರು ಹೇಳಿದರು. ಅಲ್ಲದೆ ಸ್ಥಳೀಯ ನಿವಾಸಿಗಳ ಗೃಹೋಪಯೋಗಿ ಹಾಗೂ ಪಶುಗಳಿಗೆ ಸಹ ಈ ಬಾವಿಯ ನೀರು ಬಳಕೆಯಾಗುತ್ತಿತ್ತು ಎಂದು ತಿಳಿಸಿದ್ದಾರೆ. ಸುಮಾರು 800 ವರ್ಷಗಳ ಇತಿಹಾಸ ಹೊಂದಿದೆ ಎನ್ನಲಾದ ಈ ಬಾವಿ ಮತ್ತು ಅದರ ಸಮೀಪ ಸುಮಾರು 900 ಚದರ ಅಡಿ ವಿಸ್ತೀರ್ಣದ ಆಯತಾಕಾರದ ಕೆರೆ ಇದ್ದು, ಅದರ ಸುತ್ತ ಸುಮಾರು 15 ಅಡಿ ಅಗಲದ ಕಲ್ಲಿನ ತಡೆಗೋಡೆಯೂ ಇತ್ತು ಎಂದು ಸಂತೋಷ್ ಶೆಟ್ಟಿ ವಿವರಿಸಿದರು.

ಈ ಕೆರೆಗೆ ತಾಗಿಕೊಂಡಿರುವ ಸರ್ವೆ ನಂ. 133/9ಬಿ ವ್ಯಾಪ್ತಿಯ ಸುಮಾರು 0.06 ಎಕರೆ ಜಾಗವನ್ನು ಸ್ಥಳೀಯ ನಿವಾಸಿ ಹಾಗೂ ವಕೀಲರಾದ ಅರುಣಾ ದಿನಕರ ರೈ ಅವರು ಕ್ರಯಪತ್ರದ ಮೂಲಕ ಖರೀದಿ ಮಾಡಿದ್ದು, ಬಳಿಕ ಬಾವಿಯನ್ನು ಮುಚ್ಚಿ ಜಾಗವನ್ನು ಸಮತಟ್ಟುಗೊಳಿಸಲಾಗಿದೆ ಎಂದು ಅವರು ಆರೋಪಿಸಿದರು. ಬಳಿಕ ಖರೀದಿಸಿದ ಜಾಗವನ್ನು ಆಧಾರವನ್ನಾಗಿ ಮಾಡಿಕೊಂಡು ಪುತ್ತೂರು ನಗರಸಭೆಯಿಂದ 6 ಸೆಂಟ್ಸ್ ಪ್ರದೇಶಕ್ಕೆ ಕಟ್ಟಡ ನಕ್ಷೆ ಪರವಾನಿಗೆ ಪಡೆದು ‘ಎಡಿಆರ್ ಹೈಟ್ಸ್’ ಎಂಬ ಬೃಹತ್ ವಾಣಿಜ್ಯ ಕಟ್ಟಡ ನಿರ್ಮಾಣ ನಡೆಯುತ್ತಿದೆ ಎಂದು ಹೇಳಿದರು.

ಕಟ್ಟಡ ನಿರ್ಮಾಣದ ವೇಳೆ ಕೆರೆಯ ಭಾಗಶಃ ಜಾಗವನ್ನು ಒತ್ತುವರಿ ಮಾಡಲಾಗಿದ್ದು, ಉಳಿದಿರುವ ಸರ್ಕಾರಿ ಬಾವಿಯ ಜಾಗವನ್ನು ಪಾರ್ಕಿಂಗ್ ಸ್ಥಳವಾಗಿ ಬಳಸುವ ಉದ್ದೇಶವಿದೆ ಎಂದು ಅವರು ಆರೋಪಿಸಿದರು. ಈ ಹಿನ್ನೆಲೆಯಲ್ಲಿ ಸೆಟ್‌ಬ್ಯಾಕ್ ನಿಯಮ ಉಲ್ಲಂಘನೆಯೊಂದಿಗೆ ನಡೆಯುತ್ತಿರುವ ಕಟ್ಟಡ ಕಾಮಗಾರಿಯನ್ನು ತಕ್ಷಣ ನಿಲ್ಲಿಸಿ, ಸರ್ಕಾರಿ ಬಾವಿಯನ್ನು ಸಾರ್ವಜನಿಕರ ಬಳಕೆಗೆ ಉಳಿಸಬೇಕು ಎಂದು ಸಂಬಂಧಿಸಿದ ಅಧಿಕಾರಿಗಳಿಗೆ ದೂರು ನೀಡಿರುವುದಾಗಿ ತಿಳಿಸಿದ್ದಾರೆ.

ಅರುಣಾ ದಿನಕರ ರೈ ಅವರ ವಿರುದ್ಧ ಸರ್ಕಾರಿ ಜಮೀನಿನಲ್ಲಿದ್ದ ಬಾವಿಯನ್ನು ಮುಚ್ಚಿ ಒತ್ತುವರಿ ಮಾಡಿದ ಆರೋಪದ ಮೇಲೆ ಕ್ರಿಮಿನಲ್ ಪ್ರಕರಣ ದಾಖಲಿಸಿ ಕಾನೂನು ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ಮನವಿ ಮಾಡಲಾಗಿದೆ ಎಂದು ಸಂತೋಷ್ ಶೆಟ್ಟಿ ಹೇಳಿದರು. ಆದರೆ ಇದುವರೆಗೆ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ ಎಂಬುದರಿಂದ ಸಾರ್ವಜನಿಕ ಹಿತಾಸಕ್ತಿ ದೂರುವನ್ನು ವಕೀಲರಾದ ಚಿದಾನಂದ ರೈ ಕೋಡಿಂಬಾಡಿ ಹಾಗೂ ಹೈಕೋರ್ಟ್ ವಕೀಲರಾದ ಗೋವಿಂದರಾಜ್ ಅವರ ಮೂಲಕ ಸಲ್ಲಿಸಲಾಗಿದೆ. ಈ ಕುರಿತು ನ್ಯಾಯಾಧೀಶರು ತನಿಖೆಗೆ ಆದೇಶ ನೀಡಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ಸುಳ್ಳು ಆರೋಪಗಳ ಬಗ್ಗೆ ಪ್ರತಿಕ್ರಿಯೆ

ಇದೇ ವೇಳೆ ತಮ್ಮ ವಿರುದ್ಧ ಕೇಳಿಬರುತ್ತಿರುವ ಆರೋಪಗಳ ಬಗ್ಗೆ ಪ್ರತಿಕ್ರಿಯಿಸಿದ ಸಂತೋಷ್ ಶೆಟ್ಟಿ, ತಾವು ಯಾರಿಂದಲೂ ರೂ.65 ಲಕ್ಷ ಹಣ ಸ್ವೀಕರಿಸಿಲ್ಲ ಎಂದು ಸ್ಪಷ್ಟಪಡಿಸಿದರು. ತಮ್ಮ ವಿರುದ್ಧ ದಿನಕರ ರೈ ಸುಳ್ಳು ಆರೋಪ ಮಾಡುತ್ತಿದ್ದಾರೆ ಎಂದು ಅವರು ಆರೋಪಿಸಿದರು.

ಅಶ್ಮಿ ಕಂಪಾರ್ಟ್‌ಮೆಂಟ್‌ನಲ್ಲಿ ಬಾರ್ ಲೈಸನ್ಸ್‌ಗೆ ಸಂಬಂಧಿಸಿದಂತೆ 2019ರ ಜುಲೈನಲ್ಲಿ ತಾವು ಹಣ ಕಟ್ಟಿದ್ದು, ಬಳಿಕ ಸೆಪ್ಟೆಂಬರ್ ನಂತರ ಹಣ ಸಂಗ್ರಹಿಸಿರುವುದು ದಿನಕರ ರೈ ಅವರೇ ಎಂದು ಹೇಳಿದರು. ದಿನಕರ ರೈ ಅವರ ಪುತ್ರ ಅಧೀಕ್ಷ್ ರೈ ಅವರೊಂದಿಗೆ ಮಾಡಿಕೊಂಡ ಒಪ್ಪಂದದ ಪ್ರಕಾರ ನೀರಿನ ಬಿಲ್, ವಿದ್ಯುತ್ ಬಿಲ್ ಹಾಗೂ ನಗರಸಭೆಯ ವ್ಯಾಪಾರ ಶುಲ್ಕಗಳನ್ನು ಅವರು ಪಾವತಿಸಬೇಕಾಗಿತ್ತು. ಅವನ್ನು ಪಾವತಿಸದೆ ಹಣ ಕೇಳುವುದು ಸರಿಯೇ ಎಂದು ಪ್ರಶ್ನಿಸಿದರು.

ಪ್ರಕರಣ ಈಗ ನ್ಯಾಯಾಲಯದಲ್ಲಿರುವುದರಿಂದ ನ್ಯಾಯಾಲಯದ ತೀರ್ಮಾನಕ್ಕೆ ತಾವು ಬದ್ಧರಾಗಿದ್ದೇವೆ ಎಂದು ಸಂತೋಷ್ ಶೆಟ್ಟಿ ತಿಳಿಸಿದ್ದಾರೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!