ಬಂಟ್ವಾಳ: ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ನಿರ್ದೇಶನದಂತೆ ಮಾರ್ಚ್ 14ರಂದು ರಾಷ್ಟ್ರೀಯ ಲೋಕ ಅದಾಲತ್ ಕಾರ್ಯಕ್ರಮವು ಬಂಟ್ವಾಳ ತಾಲೂಕು ಕಾನೂನು ಸೇವೆಗಳ ಸಮಿತಿ ಆಶ್ರಯದಲ್ಲಿ ಬಂಟ್ವಾಳ ನ್ಯಾಯಾಲಯದಲ್ಲಿ ನಡೆಯಲಿದೆ. ಈ ಹಿನ್ನೆಲೆಯಲ್ಲಿ ನ್ಯಾಯಾಲಯದ ಸಭಾಂಗಣದಲ್ಲಿ ಪೂರ್ವಭಾವಿ ಸಭೆ ನಡೆಯಿತು.ರಾಜಿ ಸಂಧಾನದ ಮೂಲಕ ಬಗೆಹರಿಸಿಕೊಳ್ಳಬಹುದಾದ ಆಸ್ತಿ ವಿವಾದಗಳು, ವಿಭಾಗ ಮೊಕದ್ದಮೆಗಳು, ಹಣ ವಸೂಲಿ ಪ್ರಕರಣಗಳು, ನಿರ್ದಿಷ್ಟ ಪರಿಹಾರ ಕಾಯ್ದೆಯಡಿ ದಾಖಲಾದ ಮೊಕದ್ದಮೆಗಳು, ಮೋಟಾರು ವಾಹನ ಪ್ರಕರಣಗಳು, ಎಂಎಂಆರ್‌ಡಿ ಪ್ರಕರಣಗಳು, ವಿವಾಹ ಸಮನ್ವಯ ಪ್ರಕರಣಗಳು, ಚೆಕ್ ಬೌನ್ಸ್ ಪ್ರಕರಣಗಳು ಹಾಗೂ ಇತರ ರಾಜಿಯೋಗ್ಯ ಕ್ರಿಮಿನಲ್ ಪ್ರಕರಣಗಳನ್ನು ಈ ಲೋಕ ಅದಾಲತ್‌ನಲ್ಲಿ ಪರಿಹರಿಸಲು ಪ್ರಯತ್ನಿಸಲಾಗುತ್ತದೆ.
ಇದೇ ವೇಳೆ ನ್ಯಾಯಾಲಯಗಳಲ್ಲಿ ಬಾಕಿ ಇರುವ ಪ್ರಕರಣಗಳ ಜೊತೆಗೆ ಬ್ಯಾಂಕ್ ವಸೂಲಾತಿ ಪ್ರಕರಣಗಳು, ವಿದ್ಯುತ್ ಹಾಗೂ ನೀರಿನ ಶುಲ್ಕಗಳಿಗೆ ಸಂಬಂಧಿಸಿದ ವಿವಾದಗಳು, ಕಾರ್ಮಿಕ ವಿವಾದಗಳು ಸೇರಿದಂತೆ ದಾವಾ ಪೂರ್ವ ಪ್ರಕರಣಗಳನ್ನೂ ಇತ್ಯರ್ಥಪಡಿಸಲು ಅವಕಾಶ ಕಲ್ಪಿಸಲಾಗಿದೆ.ವಕೀಲರ ಮೂಲಕ ಅಥವಾ ಸ್ವತಃ ಕಕ್ಷಿದಾರರು ಸಮಿತಿಗೆ ಭೇಟಿ ನೀಡಿ ಪ್ರಕರಣಗಳನ್ನು ರಾಜಿ ಮೂಲಕ ಬಗೆಹರಿಸಿಕೊಳ್ಳಬಹುದು ಎಂದು ಬಂಟ್ವಾಳ ತಾಲೂಕು ಕಾನೂನು ಸೇವೆಗಳ ಸಮಿತಿಯ ಅಧ್ಯಕ್ಷ ಅನಿಲ್ ಪ್ರಕಾಶ್ ಎಂ.ಪಿ ಹಾಗೂ ಸದಸ್ಯ ಕಾರ್ಯದರ್ಶಿ ರಾಜೇಂದ್ರ ಪ್ರಸಾದ್ ಕೆ.ಎಸ್ ತಿಳಿಸಿದ್ದಾರೆ. ನ್ಯಾಯಾಂಗ ಅಧಿಕಾರಿಗಳು, ವಕೀಲರು, ವಿವಿಧ ಇಲಾಖೆಗಳ ಅಧಿಕಾರಿಗಳು, ವಿಮಾ ಸಂಸ್ಥೆಗಳು ಹಾಗೂ ಬ್ಯಾಂಕ್ ಪ್ರತಿನಿಧಿಗಳನ್ನು ಒಳಗೊಂಡ ಸಮಿತಿ ವಿಚಾರಣೆ ನಡೆಸಿ ವಿವಾದಗಳನ್ನು ಇತ್ಯರ್ಥಪಡಿಸುವಲ್ಲಿ ಮಾರ್ಗದರ್ಶನ ನೀಡಲಿದೆ.
ಲೋಕ ಅದಾಲತ್ ಬಗ್ಗೆ ಜನರಿಗೆ ಹೆಚ್ಚಿನ ಮಾಹಿತಿ ನೀಡುವ ಉದ್ದೇಶದಿಂದ ಪುರಸಭೆಯ ಕಸ ವಿಲೇವಾರಿ ವಾಹನಗಳಿಗೆ ಲೋಕ ಅದಾಲತ್ ಸಂಬಂಧಿತ ಆಡಿಯೊ ಸಂದೇಶವನ್ನು ನೀಡಲಾಗಿದ್ದು, ಪ್ರತಿ ವಾರ್ಡ್‌ನಲ್ಲಿ ಕಸ ಸಂಗ್ರಹಿಸಲು ತೆರಳುವಾಗ ಆಡಿಯೊ ಪ್ರಸಾರ ಮಾಡಿ ಮನೆ ಮನೆಗೆ ಮಾಹಿತಿ ತಲುಪಿಸುವ ಕ್ರಮ ಕೈಗೊಳ್ಳಲಾಗಿದೆ.ಜನಸಾಮಾನ್ಯರು ಹಾಗೂ ಕಕ್ಷಿದಾರರು ತಮ್ಮ ದಾವಾ ಪ್ರಕರಣಗಳು ಮತ್ತು ದಾವಾ ಪೂರ್ವ ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ಇತ್ಯರ್ಥಪಡಿಸಿಕೊಳ್ಳಲು ನ್ಯಾಯಾಲಯಕ್ಕೆ ಹಾಜರಾಗಿ ರಾಷ್ಟ್ರೀಯ ಲೋಕ ಅದಾಲತ್‌ನ ಸದುಪಯೋಗ ಪಡೆಯಬಹುದು ಎಂದು ಪೂರ್ವಭಾವಿ ಸಭೆಯಲ್ಲಿ ತಿಳಿಸಲಾಯಿತು.