2022ರಲ್ಲಿ ಮುಲ್ಕಿಯಲ್ಲಿ ನಡೆದಿದ್ದ ವ್ಯಕ್ತಿಯ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲಾ ನ್ಯಾಯಾಲಯ ಆರೋಪಿಗೆ ಜೀವಾವಧಿ ಶಿಕ್ಷೆ ವಿಧಿಸಿ ಮಹತ್ವದ ತೀರ್ಪು ನೀಡಿದೆ.
2022ರ ಮಾರ್ಚ್ 19ರಂದು ರಾತ್ರಿ ಸುಮಾರು 9.45ರ ಸುಮಾರಿಗೆ ಬಪ್ಪನಾಡು ಗ್ರಾಮದ ಮುಲ್ಕಿ ಪೇಟೆಯ ಟೂರಿಸ್ಟ್ ಕಾರು ಪಾರ್ಕಿಂಗ್ ಸಮೀಪ ಈ ಘಟನೆ ನಡೆದಿತ್ತು. ಉಲ್ಲಂಜೆ ನಿವಾಸಿ ಹರೀಶ್ ಸಾಲ್ಯಾನ್ (47) ಅವರನ್ನು ಹಣಕಾಸಿನ ವೈಷಮ್ಯದಿಂದ ಆರೋಪಿ ಮುರುಗನ್ ಕ್ರೂರವಾಗಿ ಹತ್ಯೆ ಮಾಡಿದ್ದನು. ಹರೀಶ್ ಸಾಲ್ಯಾನ್ ಅವರ ಮುಖಕ್ಕೆ ಸಿಮೆಂಟ್ ಕಾಂಕ್ರಿಟ್ ಅಂಟಿದ್ದ ಕೆಂಪು ಕಲ್ಲಿನಿಂದ ಜಜ್ಜಿ ಕೊಲೆ ಮಾಡಿರುವುದಾಗಿ ಆರೋಪಿಸಲಾಗಿದೆ. ಈ ಕುರಿತು ಮುಲ್ಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಕರಣದ ಸಂಪೂರ್ಣ ತನಿಖೆಯನ್ನು ಪಿಐ ಕುಸುಮಧರ್ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ತನಿಖಾ ಸಹಾಯಕರಾಗಿ ಎಎಸ್ಐ ಸಂಜೀವ್ ಅವರು ಸಹಕರಿಸಿದ್ದರು.
ಪ್ರಕರಣದ ವಿಚಾರಣೆ ನಡೆಸಿದ 2ನೇ ಹೆಚ್ಚುವರಿ ಜಿಲ್ಲಾ ನ್ಯಾಯಾಲಯದ ನ್ಯಾಯಾಧೀಶರಾದ ಜಗದೀಶ್ ವಿ.ಎನ್. ಅವರು ಆರೋಪಿ ಮುರುಗನ್ಗೆ ಭಾರತೀಯ ದಂಡ ಸಂಹಿತೆಯ ಕಲಂ 302ರಡಿ ಜೀವಾವಧಿ ಶಿಕ್ಷೆ ಹಾಗೂ 10,000 ರೂ. ದಂಡ ವಿಧಿಸಿ ತೀರ್ಪು ನೀಡಿದ್ದಾರೆ. ಸರ್ಕಾರದ ಪರವಾಗಿ ಸಾರ್ವಜನಿಕ ಅಭಿಯೋಜಕರಾದ ಪಿಪಿ ಜ್ಯೋತಿ ಪ್ರಮೋದ್ ನಾಯಕ್ ವಾದ ಮಂಡಿಸಿದರು.