ಕಡಬ, ಮಾ.6: ನಮ್ಮ ಸಂಸ್ಕಾರ ಹಾಗೂ ಸಂಸ್ಕೃತಿಯ ಉಳಿವಿಗೆ ಭಜನಾ ಮಂದಿರಗಳು ಮಹತ್ತರ ಕೊಡುಗೆ ನೀಡುತ್ತಿದ್ದು, ಸಮಾಜದಲ್ಲಿ ಧರ್ಮಜಾಗೃತಿ ಮೂಡಿಸುವ ಕಾರ್ಯವನ್ನು ನಿರಂತರವಾಗಿ ಮಾಡುತ್ತಿವೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಡಬ ತಾಲೂಕು ಯೋಜನಾಧಿಕಾರಿ ಪ್ರಕಾಶ್ ಕುಮಾರ್ ಹೇಳಿದರು.
ಅವರು ಶುಕ್ರವಾರ ಕಡಬ ತಾಲೂಕಿನ ಕೊಯಿಲ ಗ್ರಾಮದ ಸಬಳೂರು ಅಯೋಧ್ಯಾನಗರದ ಶ್ರೀರಾಮ ಭಜನಾ ಮಂದಿರದ ಅಭಿವೃದ್ಧಿಗಾಗಿ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ಬಿಡುಗಡೆಯಾದ ₹1 ಲಕ್ಷ ಅನುದಾನದ ಚೆಕ್ ವಿತರಣಾ ಸಮಾರಂಭದಲ್ಲಿ ಅತಿಥಿಯಾಗಿ ಮಾತನಾಡಿದರು.
ಮಕ್ಕಳಿಗೆ ಸಂಸ್ಕಾರ ಮತ್ತು ಧಾರ್ಮಿಕ ಶಿಕ್ಷಣ ದೊರೆಯಲು ಭಜನಾ ಮಂದಿರಗಳು ಪ್ರಮುಖವಾಗಿದ್ದು, ಇಂತಹ ಶ್ರದ್ಧಾ ಕೇಂದ್ರಗಳು ಸಮಾಜದಲ್ಲಿ ಧಾರ್ಮಿಕ ನಂಬಿಕೆಗಳನ್ನು ಬಲಪಡಿಸಿ ಸಾಮರಸ್ಯವನ್ನು ಬೆಳೆಸುತ್ತವೆ. ಈ ಉದ್ದೇಶದಿಂದಲೇ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಅನುದಾನ ನೀಡಿ ಪ್ರೋತ್ಸಾಹಿಸುತ್ತಿದ್ದಾರೆ. ಸಬಳೂರಿನ ಶ್ರೀರಾಮ ಭಜನಾ ಮಂದಿರ ಮಾದರಿಯಾಗಿದ್ದು, ಮುಂದಿನ ದಿನಗಳಲ್ಲಿ ಇದರ ಅಭಿವೃದ್ಧಿಗೆ ಇನ್ನಷ್ಟು ಆರ್ಥಿಕ ಸಹಕಾರ ನೀಡಲು ಪ್ರಯತ್ನಿಸಲಾಗುವುದು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಭಜನಾ ಪರಿಷತ್‌ನ ಜಿಲ್ಲಾ ಸಮನ್ವಯಾಧಿಕಾರಿ ಸಂತೋಷ್ ಪಿ. ಅಳಿಯೂರು ಮಾತನಾಡಿ, ಕಳೆದ ಎರಡು ವರ್ಷಗಳಲ್ಲಿ ಜಿಲ್ಲೆಯಲ್ಲಿ ಅನೇಕ ಭಜನಾ ಮಂದಿರಗಳು ನಿರ್ಮಾಣವಾಗಿದ್ದು, ಅವುಗಳ ಜೀರ್ಣೋದ್ಧಾರ ಕಾರ್ಯಗಳಿಗೆ ಹೆಗ್ಗಡೆಯವರು ಅನುದಾನ ನೀಡಿ ಉತ್ತೇಜನ ನೀಡಿದ್ದಾರೆ. ಈಗ ಭಜನಾ ಪರಿಷತ್ ಮೂಲಕ ಭಜನಾ ಮಂದಿರಗಳಿಗೆ ಅನುದಾನ ಮಂಜೂರು ಮಾಡಲಾಗುತ್ತಿದ್ದು, ಪ್ರಪ್ರಥಮವಾಗಿ ಈ ಮಂದಿರಕ್ಕೆ ಅನುದಾನ ನೀಡುವ ಅವಕಾಶ ನನಗೆ ದೊರೆತಿದೆ ಎಂದು ಹೇಳಿದರು.
ಶ್ರೀರಾಮ ಭಜನಾ ಮಂದಿರದ ಅಧ್ಯಕ್ಷ ಕೆ.ಎಸ್. ಬಾಲಕೃಷ್ಣ ಗೌಡ ಚೆಕ್ ಸ್ವೀಕರಿಸಿ ಕೃತಜ್ಞತೆ ಸಲ್ಲಿಸಿದರು. ಕಾರ್ಯಕ್ರಮದಲ್ಲಿ ಭಜನಾ ಮಂದಿರದ ಉಪಾಧ್ಯಕ್ಷ ಸುಪ್ರಿತ್ ರೈ ಕೊಯಿಲ, ಗೌರವ ಸಲಹೆಗಾರರಾದ ರಾಜೀವ ಗೌಡ ಪಟ್ಟೆದಮೂಲೆ, ರಾಮಯ್ಯ ಗೌಡ ಬುಡಲೂರು, ಕುಶಾಲಪ್ಪ ಗೌಡ ಕಡೆಂಬ್ಯಾಲ್, ಜತೆ ಕಾರ್ಯದರ್ಶಿ ಪ್ರವೀಣ್ ರಾಜ್ ಕೆ.ಎಸ್., ಸೇವಾ ಪ್ರತಿನಿಧಿ ಪ್ರೇಮಾವತಿ ಮಹಾಬಲ ನಾಯ್ಕ, ಒಕ್ಕೂಟದ ಅಧ್ಯಕ್ಷ ಪುರಂದರ ತುಂಬೆತಡ್ಕ, ಶ್ರೀರಾಮ ಗೆಳೆಯರ ಬಳಗದ ಸದಸ್ಯ ಮುಖೇಶ್ ಕಡೆಂಬ್ಯಾಲ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಗೋಳಿತೊಟ್ಟು ವಲಯ ಮೇಲ್ವಿಚಾರಕಿ ಜಯಶ್ರೀ ಸ್ವಾಗತಿಸಿ, ವಂದಿಸಿದರು.