ಪವಿತ್ರ ರಂಜಾನ್ ಮಾಸ ಆರಂಭವಾಗುತ್ತಿದ್ದಂತೆ ಎಲ್ಲೆಡೆ ಸಂಭ್ರಮದ ವಾತಾವರಣ ಮನೆಮಾಡಿದೆ. ಈ ನಡುವೆ ಮಂಗಳೂರಿನ ದೇರಳಕಟ್ಟೆಯ ಪ್ರಸಿದ್ಧ ಬದ್ರಿಯಾ ಜುಮಾ ಮಸೀದಿಯಲ್ಲಿ ಪ್ರತಿ ವರ್ಷದಂತೆ ಈ ಬಾರಿಯೂ ಸಾರ್ವಜನಿಕರಿಗಾಗಿ ಬೃಹತ್ ಇಫ್ತಾರ್ ವ್ಯವಸ್ಥೆಯನ್ನು ಮಾಡಲಾಗಿದೆ.
ಮಂಗಳೂರು ತಾಲೂಕಿನ ದೇರಳಕಟ್ಟೆ ಅಂದ್ರೆ ಅದೊಂದು ಪ್ರಮುಖ ಸಿಟಿ ಭಾಗ. ಇಲ್ಲಿ ನಿತ್ಯವೂ ಸಾವಿರಾರು ಜನ ಓಡಾಡುತ್ತಿರುತ್ತಾರೆ. ಇದನ್ನೇ ಗಮನದಲ್ಲಿಟ್ಟುಕೊಂಡು, ಇಲ್ಲಿನ ದೇರಳಕಟ್ಟೆ ಬದ್ರಿಯಾ ಜುಮಾ ಮಸೀದಿ ಸಮಿತಿಯವರು ಕಳೆದ ಹಲವಾರು ವರ್ಷಗಳಿಂದ ಅತ್ಯಂತ ವ್ಯವಸ್ಥಿತವಾಗಿ ಇಫ್ತಾರ್ ಕೂಟವನ್ನು ಆಯೋಜಿಸುತ್ತಾ ಬಂದಿದ್ದಾರೆ.
ಇಲ್ಲಿ ಪ್ರತಿದಿನ ಕನಿಷ್ಠ 600 ರಿಂದ 1,000 ಜನರಿಗೆ ಇಲ್ಲಿ ಇಫ್ತಾರ್ ವ್ಯವಸ್ಥೆ ಮಾಡಲಾಗುತ್ತದೆ. ಮಸೀದಿಯು ಸಿಟಿ ಭಾಗದಲ್ಲಿ ಇರುವುದರಿಂದ ಸುತ್ತಮುತ್ತಲಿನ ಅಂಗಡಿ ಮಾಲೀಕರು, ರಿಕ್ಷಾ ಚಾಲಕರು, ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಇಲ್ಲಿ ಸೇರುತ್ತಾರೆ. ಉಪವಾಸ ಬಿಡುವವರಿಗೆ ಯಾವುದೇ ತೊಂದರೆಯಾಗದಂತೆ ಮಸೀದಿ ವತಿಯಿಂದ ಸುಸಜ್ಜಿತ ಮತ್ತು ಅಚ್ಚುಕಟ್ಟಾದ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ.
ಈ ಬಗ್ಗೆ ಮಾಹಿತಿ ನೀಡಿರುವ ಬದ್ರಿಯಾ ಜುಮಾ ಮಸೀದಿಯ ಅಧ್ಯಕ್ಷರಾದ ಅಬ್ದುಲ್ ಆರ್. ಅಹ್ಮದ್ ಶೇಟ್ ಅವರು, “ಸುತ್ತಮುತ್ತಲಿನ ಸಾರ್ವಜನಿಕರು ಮತ್ತು ಪ್ರಯಾಣಿಕರು ಈ ಇಫ್ತಾರ್ ಕೂಟದ ಸದುಪಯೋಗ ಪಡೆದುಕೊಳ್ಳಬೇಕು” ಎಂದು ಆರೀಫ್ ಯು.ಆರ್ ಉಳ್ಳಾಲ್ ಪ್ರೀತಿಯಿಂದ ಆಮಂತ್ರಿಸಿದ್ದಾರೆ.