ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ‘ದಲಿಯನ ಡೋಲು’ ನಾಟಕ ಯಶಸ್ವಿ ಪ್ರದರ್ಶನ

ಬೆಂಗಳೂರು: ಸೂರ್ಯ ಕಲಾವಿದರು ಬೆಂಗಳೂರು ಆಯೋಜಿಸಿದ ‘ರಂಗಸಂಭ್ರಮ 2026’ ಕಾರ್ಯಕ್ರಮದ ಅಂಗವಾಗಿ ನಗರದ ಪ್ರಸಿದ್ಧ ರಂಗಭೂಮಿ ವೇದಿಕೆ ರವೀಂದ್ರ ಕಲಾಕ್ಷೇತ್ರದಲ್ಲಿ ‘ದಲಿಯನ ಡೋಲು’ ನಾಟಕ ಯಶಸ್ವಿಯಾಗಿ ಪ್ರದರ್ಶನಗೊಂಡು ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಯಿತು.

ಉದಯ ಸಾರಂಗ ರಚಿಸಿ ನಿರ್ದೇಶಿಸಿದ ಈ ನಾಟಕವನ್ನು ಸ್ವರ್ಗ ಭೂಮಿಕಾ ಸಂಡೇ ಥಿಯೇಟರ್ ತಂಡ ಪ್ರದರ್ಶಿಸಿತು. ಗ್ರಾಮೀಣ ರಂಗಭೂಮಿಯನ್ನು ಪೋಷಿಸುತ್ತಿರುವ ಈ ತಂಡದಲ್ಲಿ ವಿವಿಧ ವಲಯಗಳ ಪ್ರತಿಭಾನ್ವಿತ ಕಲಾವಿದರು ಒಟ್ಟಾಗಿ ಕಾರ್ಯನಿರ್ವಹಿಸುತ್ತಿರುವುದು ಇದರ ವಿಶೇಷತೆಯಾಗಿದೆ.

ಜಾನಪದ ಸೊಗಡಿನ ಸಂಸ್ಕೃತಿ ಹಾಗೂ ಜಾಗತೀಕರಣದ ಮಾಯಾಲೋಕದ ನಡುವೆ ಹೋರಾಡುವ ಗ್ರಾಮೀಣ ಬದುಕಿನ ಕಥಾಹಂದರವನ್ನು ಒಳಗೊಂಡಿರುವ ಈ ನಾಟಕ ಪ್ರೇಕ್ಷಕರ ಮನಗೆದ್ದಿತು. ಪ್ರತಿಯೊಂದು ದೃಶ್ಯವೂ ಕೌತುಕ ಮೂಡಿಸುವ ರೀತಿಯಲ್ಲಿ ನಿರೂಪಣೆಗೊಂಡು ನಾಟಕದ ಪ್ರಮುಖ ಆಕರ್ಷಣೆಯಾಯಿತು.

ನಾಟಕದಲ್ಲಿ ದಲಿಯ ಪಾತ್ರದಲ್ಲಿ ಪ್ರಸ್ತುತ ಪಂಚಾಯತ್ ಸದಸ್ಯರಾದ ರಾಮಚಂದ್ರ ಮೊಳಕ್ಕಾಲ್, ಮಾಯಾವಿ ಪಾತ್ರದಲ್ಲಿ ಯುವ ಉದ್ಯಮಿ ರಾಜೇಶ್ ಸ್ವರ್ಗ, ಊರಿನ ಜಮೀನ್ದಾರಿಯಾಗಿ ಉಪನ್ಯಾಸಕಿ ಹಾಗೂ ಕವಯತ್ರಿ ನವ್ಯಾಶ್ರೀ ಸ್ವರ್ಗ, ಮಂಜನಾಗಿ ಬ್ಯಾಡ್ಮಿಂಟನ್ ಕೋಚ್ ಕೃಷ್ಣ ಮೋಹನ ಪೊಸೊಳ್ಯ, ಊರಿನ ಜನರ ಪಾತ್ರದಲ್ಲಿ ರಂಗಕರ್ಮಿ ಅಶೋಕ್ ಕೊಡ್ಲಮೊಗರು, ಗುಣಾಜೆ ಅಂಗನವಾಡಿ ಅಧ್ಯಾಪಕಿ ಸುಮತಿ, ಕು. ವೈಷವಿ ಪೊಸೊಳ್ಯ ಮತ್ತು ಪೂರ್ಣಿಮಾ ಅಭಿನಯಿಸಿದರು.

ನಾಟಕಕ್ಕೆ ಕಾರ್ತಿಕ್ ಪೆರಿಕ್ಕಾನ, ವೈಷವ್ ಮತ್ತು ಮೋಕ್ಷಿತ್ ಸಂಗೀತ ನೀಡಿದರು. ರಂಗಪರಿಕರ ಹಾಗೂ ಪ್ರಸಾಧನವನ್ನು ಕಿರಣ್ ಕಲಾಂಜಲಿ ನಿರ್ವಹಿಸಿದರು. ನಾಟಕ ತಂಡದ ಸಂಯೋಜಕರಾಗಿ ಕವಿ ಶ್ರೀನಿವಾಸ ಪೆರಿಕ್ಕಾನ ಕಾರ್ಯನಿರ್ವಹಿಸಿದರು. ಶಂಕರ ಸ್ವಾಮಿ ಕೃಪಾ ಸಹಕಾರ ನೀಡಿದರು.

ಈ ಪ್ರದರ್ಶನ ಗಡಿನಾಡ ಕನ್ನಡಿಗರ ಸಂಸ್ಕೃತಿ ಮತ್ತು ಕಲೆಗಳ ಧ್ವನಿಯನ್ನು ಬೆಂಗಳೂರಿನ ರಂಗಭೂಮಿಯಲ್ಲಿ ಪ್ರತಿಧ್ವನಿಸುವಂತೆ ಮಾಡಿತು.

SHARE
Loading spinner

Leave a Reply

Your email address will not be published. Required fields are marked *

error: Content is protected !!