ಉಡುಪಿ: ಕಾಪು ಕ್ಷೇತ್ರದ 80 ಬಡಗಬೆಟ್ಟು ಗ್ರಾಮದಲ್ಲಿ ಇತ್ತೀಚೆಗೆ ಉಡುಪಿ ಕಂಬಳಕ್ಕೆ ಶಂಕುಸ್ಥಾಪನೆ ನಡೆದಿರುವುದು ರಾಜಕೀಯ ವಾದ–ವಿವಾದಕ್ಕೆ ಕಾರಣವಾಗಿದೆ. ಅದೇ ದಿನ ಜಿಲ್ಲಾಡಳಿತ ಆ ಪ್ರದೇಶದಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿದ್ದ ಹಿನ್ನೆಲೆ, ಈ ವಿಚಾರ ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಮತ್ತು ಮಾಜಿ ಶಾಸಕ ವಿನಯ್ ಕುಮಾರ್ ಸೊರಕೆ ಅವರ ನಡುವೆ ತೀವ್ರ ಆರೋಪ–ಪ್ರತ್ಯಾರೋಪಗಳಿಗೆ ವೇದಿಕೆಯಾಗಿದೆ.
ಈ ಹಿನ್ನೆಲೆಯಲ್ಲಿ, ಮಾಜಿ ಶಾಸಕ ವಿನಯ್ ಕುಮಾರ್ ಸೊರಕೆ ಅವರು ದುರುದ್ದೇಶಪೂರಿತವಾಗಿ ರಾಜಕೀಯ ಸುಳ್ಳು ಆರೋಪಗಳನ್ನು ಮಾಡುತ್ತಿದ್ದಾರೆ ಎಂದು ಆರೋಪಿಸಿದ ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಅವರು ಇಂದು ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನಕ್ಕೆ ಭೇಟಿ ನೀಡಿದರು. ಬಳಿಕ ಕಟಪಾಡಿ ಪೇಟೆಬೆಟ್ಟು ಬಬ್ಬುಸ್ವಾಮಿ ಹಾಗೂ ಕೊರಗಜ್ಜ ಸನ್ನಿಧಿಗೂ ಭೇಟಿ ನೀಡಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.
ಈ ಘಟನೆಗಳೊಂದಿಗೆ “ಉಡುಪಿ ಕಂಬಳ” ಕುರಿತ ರಾಜಕೀಯ ವಾದ–ವಿವಾದ ದೈವಸ್ಥಾನದ ಅಂಗಳವನ್ನೂ ತಲುಪಿದಂತಾಗಿದೆ.
ರಾಜಕೀಯ ನಾಯಕರ ಪರಸ್ಪರ ಆರೋಪ–ಪ್ರತ್ಯಾರೋಪಗಳ ನಡುವೆ ಕಂಬಳ ವಿಚಾರವು ಸ್ಥಳೀಯ ರಾಜಕೀಯದಲ್ಲಿ ಮತ್ತಷ್ಟು ಚರ್ಚೆಗೆ ಕಾರಣವಾಗುತ್ತಿದೆ.