ಪುತ್ತೂರು: ಪುತ್ತೂರು ನಗರದ ಹೃದಯಭಾಗದಲ್ಲಿ ಇರುವ ಹಾಲಿ ಸರಕಾರಿ ಸಾರ್ವಜನಿಕ ಆಸ್ಪತ್ರೆಯ ೫.೧೬ ಎಕರೆ ಜಾಗದಲ್ಲೇ ಸುಸಜ್ಜಿತವಾಗಿ ೩೦೦ ಹಾಸಿಗೆ ಸಾಮರ್ಥ್ಯದ ಸರಕಾರಿ ಮೆಡಿಕಲ್ ಆಸ್ಪತ್ರೆ ಆಗಲಿ ಎಂದು ಸರಕಾರಿ ಆಸ್ಪತ್ರೆಯ ರಕ್ಷಾ ಸಮಿತಿ ನಿಕಟಪೂರ್ವ ಸದಸ್ಯರು ಆಗ್ರಹ ವ್ಯಕ್ತಪಡಿಸಿದ್ದಾರೆ.
ಸೋಮವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ರಕ್ಷಾ ಸಮಿತಿ ನಿಕಟಪೂರ್ವ ಸದಸ್ಯರಾದ ರಫೀಕ್ ದರ್ಬೆ, ರಾಜೇಶ್ ಬನ್ನೂರು ಹಾಗೂ ವಿದ್ಯಾ ಆರ್. ಗೌರಿ, ಕಳೆದ ಬಾರಿಯ ಬಿಜೆಪಿ ಸರಕಾರದ ಅವಧಿಯಲ್ಲಿ ಪುತ್ತೂರಿನಲ್ಲಿ ಸರಕಾರಿ ಮೆಡಿಕಲ್ ಕಾಲೇಜು ಆಗಬೇಕೆಂಬುದು ಜನರ ಆಗ್ರಹ ಆಗಿತ್ತು.ಅದಕ್ಕಿಂತ ಹಿಂದಿನ ಸರಕಾರ ಇದ್ದಾಗ ಆಗಿನ ಶಾಸಕರಾದ ಶಕುಂತಲಾ ಶೆಟ್ಟಿಯವರು ಬನ್ನೂರು ಗ್ರಾಮಪಂಚಾಯತ್ ವ್ಯಾಪ್ತಿಯ ಸೇಡಿಯಾಪುವಿನಲ್ಲಿ ಮೆಡಿಕಲ್ ಕಾಲೇಜಿಗಾಗಿ ಸ್ಥಳ ಕಾಯ್ದಿರಿಸುವ ಮೂಲಕ ಮೆಡಿಕಲ್ ಕಾಲೇಜಿಗೆ ಪ್ರಸ್ತಾವನೆಯನ್ನು ಆಗ ಸಲ್ಲಿಸಿದ್ದರು.
ಪುತ್ತೂರಿನ ಜನರ ಬೇಡಿಕೆಯಂತೆ ಪುತ್ತೂರಿನಲ್ಲಿ ಮೆಡಿಕಲ್ ಕಾಲೇಜಿಗಾಗಿ ಪುತ್ತೂರಿನ ಕಳೆದ ಸಾಲಿನ ಶಾಸಕರಾದ ಸಂಜೀವ ಮಠಂದೂರು ಅವರು ಕೂಡ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದರು. ಆ ಸಂದರ್ಭದಲ್ಲಿ ರಾಜ್ಯ ಆರೋಗ್ಯ ಇಲಾಖೆಯು ಪುತ್ತೂರಲ್ಲಿ ಮೆಡಿಕಲ್ ಕಾಲೇಜು ಆಗಬೇಕಾದರೆ ೩೦೦ ಬೆಡ್ನ ಸರಕಾರಿ ಆಸ್ಪತ್ರೆ ಇರಬೇಕು ಎಂಬುದನ್ನು ಮನಗಂಡು ೩೦೦ ಬೆಡ್ ನ ಸರಕಾರಿ ಆಸ್ಪತ್ರೆಯು ೧೦೦ ಬೆಡ್ನ ಆಸ್ಪತ್ರೆ ಇರುವ ಜಾಗದಲ್ಲಿ ಆಗಬೇಕಾದರೆ ಸರಿಸುಮಾರು ಐದು ಎಕರೆಗಿಂತ ಹೆಚ್ಚು ಸ್ಥಳ ಬೇಕು ಎಂಬ ಆರೋಗ್ಯ ಇಲಾಖೆಯ ಮಾಹಿತಿಯನ್ನು ಆಧರಿಸಿ, ಎರಡುವರೆ ಎಕರೆಯಷ್ಟು ಜಾಗ ಇದ್ದ ಈ ಸರಕಾರಿ ಆಸ್ಪತ್ರೆಗೆ ಆಸ್ಪತ್ರೆ ಸುತ್ತಮುತ್ತಲು ರಿಜಿಸ್ಟರ್ ಆಫೀಸು, ತಾಲೂಕು ಕಚೇರಿ, ಕಾರಾಗ್ರಹ, ಇನ್ನಿತರ ಉಳಿದ ಸರಕಾರಿ ಆಸ್ಪತ್ರೆಯ ಸುತ್ತುಮುತ್ತಲ ಸರಕಾರಿ ಸ್ಥಳಗಳನ್ನು ಸೇರಿಸಿ ೫ ಎಕ್ರೆ ೧೬ ಸೆನ್ಸ್ ಸ್ಥಳ ಬರ್ತಿ ಮಾಡಿಸಿ ಅಂದಿನ ಸರಕಾರಿ ಆರೋಗ್ಯ ಇಲಾಖಾಧಿಕಾರಿಗಳ ಶಿಫಾರಸ್ಸಿನ ಮೂಲಕ ೩೦೦ ಬೆಡ್ ಸರಕಾರಿ ಆಸ್ಪತ್ರೆಗಾಗಿ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಅದಾಗಿ ತಮ್ಮ ಆಡಳಿತದ ಅವಧಿಯಲ್ಲಿ ಶಾಸಕ ಮಠಂದೂರು ಅವರು ೩೦೦ ಬೆಡ್ ಸರಕಾರಿ ಆಸ್ಪತ್ರೆಗೆ ಸರಕಾರದ ಕದ ತಟ್ಟಿದ್ದರು ಎಂಬುದು ಪತ್ರಿಕೆಗಳಲ್ಲೂ ವರದಿಯಾಗಿದೆ. ಈ ನಿಟ್ಟಿನಲ್ಲಿ ಮೆಡಿಕಲ್ ಕಾಲೇಜು ಸೇಡಿಯಾಪುವಿನಲ್ಲಿ ಆಗಬೇಕೆಂಬುದು ಎಲ್ಲರ ಆಗ್ರಹ. ಆದರೆ ಪುತ್ತೂರು ಸರಕಾರಿ ಆಸ್ಪತ್ರೆಯ ಭಾಗದಲ್ಲಿ ನಿಯೋಜನೆಗೊಂಡ ೫.೧೬ ಎಕರೆ ಜಾಗದಲ್ಲಿಯೇ ಸುಸಜ್ಜಿತವಾಗಿ ೩೦೦ ಬೆಡ್ನ ಸರಕಾರಿ ಮೆಡಿಕಲ್ ಆಸ್ಪತ್ರೆ ಆಗಬೇಕು ಎಂದು ಹೇಳಿದರು.
ಪುತ್ತೂರು ಪೇಟೆಯಿಂದ ಬಹು ದೂರದಲ್ಲಿರುವ ಬನ್ನೂರು ಪಂಚಾಯತ್ ವ್ಯಾಪ್ತಿಯ ಸೇಡಿಯಾಪುವಿನಲ್ಲಿ ೩೦೦ ಬೆಡ್ನ ಸರಕಾರಿ ಆಸ್ಪತ್ರೆ ಮಾಡಿದಲ್ಲಿ ಜನರಿಗೆ ಅತೀ ಕಷ್ಟವಾಗುವ ಸಾಧ್ಯತೆ ಇದೆ.
ಜನರ ಆರೋಗ್ಯದ ಮತ್ತು ಪ್ರಯಾಣ ಅನುಕೂಲದ ದೃಷ್ಟಿಯಲ್ಲಿ ಜನರ ಬೇಡಿಕೆಗಣುಗುಣವಾಗಿ ೩೦೦ ಬೆಡ್ನ ಸರಕಾರಿ ಆಸ್ಪತ್ರೆಯು ಯಾವ ಕಾರಣಕ್ಕೂ ಬನ್ನೂರು ಗ್ರಾ.ಪಂ. ವ್ಯಾಪ್ತಿಯ ಸೇಡಿಯಾಪುಗೆ ಹೋಗಕೂಡದು. ಒಂದು ವೇಳೆ ಸರಕಾರಿ ಆಸ್ಪತ್ರೆ ಸೇಡಿಯಾಪುವಿಗೆ ಹೋದಲ್ಲಿ ಬಡ ಹೊರರೋಗಿಗಳು ಅತೀ ಹೆಚ್ಚು ಪರದಾಡುವ ಪರಿಸ್ಥಿತಿಯನ್ನು ಎದುರಿಸಬೇಕಾಗುತ್ತದೆ ಎಂದು ಹೇಳಿದರು.
ಬೆಂಚ್ ಮಾರ್ಕ್ ಶಕುಂತಳಾ ಶೆಟ್ಟಿಯಿಂದ
ಪುತ್ತೂರಿನ ಬೆಂಚ್ ಮಾರ್ಕ್ ಅಭಿವೃದ್ಧಿ ಪ್ರಯತ್ನದ ಹೆಗ್ಗಳಿಕೆ ಮಾಜಿ ಶಾಸಕ ಶಕುಂತಳಾ ಶೆಟ್ಟಿ ಅವರಿಗೆ ಹೋಗಬೇಕು. ಅವರ ಅವಧಿಯಲ್ಲಿ ಸರಕಾರಿ ಮೆಡಿಕಲ್ ಕಾಲೇಜಿಗೆ ಜಾಗ ಗುರುತಿಸಿಡುವಲ್ಲಿ ಶಕುಂತಳಾ ಶೆಟ್ಟಿ ಯಶಸ್ವಿಯಾಗಿದ್ದರು. ಮೆಡಿಕಲ್ ಕಾಲೇಜು ವೈದ್ಯಕೀಯ ಶಿಕ್ಷಣ ಪಡೆಯುವವರಿಗೆ ಅನುಕೂಲವಾದರೆ, ಸರಕಾರಿ ಆಸ್ಪತ್ರೆಯ ಉನ್ನತೀಕರಣ ಬಡ ರೋಗಿಗಳಿಗೆ ಪ್ರಯೋಜನವಾಗುತ್ತದೆ. ಆದ್ದರಿಂದ ನಗರದಲ್ಲಿನ ಅನುಕೂಲ ಸ್ಥಿತಿಯಲ್ಲಿರುವ ವಿಶಾಲ ಜಾಗದಲ್ಲೇ ಹಂತ ಹಂತವಾಗಿ ೩೦೦ ಹಾಸಿಗೆ ಸಾಮರ್ಥ್ಯದ ಆಸ್ಪತ್ರೆ ಅಭಿವೃದ್ಧಿ ಕೆಲಸಗಳು ಆಗಲಿ ಎಂದು ರಾಜೇಶ್ ಬನ್ನೂರು ಅಭಿಪ್ರಾಯಿಸಿದರು.
೪೦ ಎಕ್ರೆ ಎಲ್ಲಿದೆ ?
೩೦೦ ಹಾಸಿಗೆಯ ಸರಕಾರಿ ಆಸ್ಪತ್ರೆ ಹಾಗೂ ಸರಕಾರಿ ಮೆಡಿಕಲ್ ಕಾಲೇಜಿಗೆ ಹಾಲಿ ಸೇಡಿಯಾಪಿನಲ್ಲಿ ಗುರುತಿಸಿರುವ ಜಾಗದಲ್ಲಿ ೧೯-೨೦ ಎಕರೆ ಜಾಗ ರಕ್ಷಿತಾರಣ್ಯಕ್ಕೆ ಸೇರಿದೆ. ಸರ್ವೋಚ್ಛ ನ್ಯಾಯಾಲಯದ ಆದೇಶದಂತೆ ಆ ಜಾಗವನ್ನು ನೀಡಬೇಕಿದ್ದರೆ ಅವರಿಗೆ ಇನ್ನೊಂದು ಕಡೆ ಜಾಗವನ್ನು ರಕ್ಷಿತಾರಣ್ಯಕ್ಕಾಗಿ ನೀಡಬೇಕಾಗುತ್ತದೆ. ಈ ಪ್ರಕ್ರಿಯೆಯೇ ಇನ್ನೂ ಪೂರ್ಣಗೊಂಡಿಲ್ಲ. ಬಜೆಟ್ ನಲ್ಲೂ ಮೆಡಿಕಲ್ ಕಾಲೇಜಿಗೆ ಅನುಮೋದನೆ ಆಗಿರುವುದು ಬಿಟ್ಟರೆ ಯಾವುದೇ ಅನುದಾನ ಇಟ್ಟಿಲ್ಲ ಎಂದು ರಫೀಕ್ ದರ್ಬೆ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಬಿಜೆಪಿ ನಗರ ಮಂಡಲ ಅಧ್ಯಕ್ಷ ಶಿವಕುಮಾರ್ ಪಿ.ಬಿ., ಪ್ರಧಾನ ಕಾರ್ಯದರ್ಶಿ ಯುವರಾಜ ಪೆರಿಯತ್ತೋಡಿ ಉಪಸ್ಥಿತರಿದ್ದರು.