ಮಂಗಳೂರು: ನವಮಂಗಳೂರು ಬಂದರಿಗೆ ಐಷಾರಾಮಿ ಓಶೇನಿಯಾ ಹಡಗಿನಲ್ಲಿ ಆಗಮಿಸಿದ್ದ ನೂರಾರು ವಿದೇಶಿ ಪ್ರವಾಸಿಗರು ಭಾನುವಾರ ಪಿಲಿಕುಳದಲ್ಲಿರುವ ಗುತ್ತುಮನೆ ಹಾಗೂ ಕುಶಲಕರ್ಮಿ ಗ್ರಾಮಕ್ಕೆ ಭೇಟಿ ನೀಡಿದರು.
ಪಿಲಿಕುಳ ಅಭಿವೃದ್ಧಿ ಪ್ರಾಧಿಕಾರದ ಅಧೀನದಲ್ಲಿರುವ ಕುಶಲಕರ್ಮಿ ಗ್ರಾಮದಲ್ಲಿ ಪಾರಂಪರಿಕವಾಗಿ ಮುಂದಿನ ತಲೆಮಾರಿಗೆ ಉಳಿಸಿಕೊಂಡು ಬಂದಿರುವ ವಿವಿಧ ಕೌಶಲ್ಯಗಳನ್ನು ಪ್ರವಾಸಿಗರು ಆಸಕ್ತಿಯಿಂದ ವೀಕ್ಷಿಸಿದರು. ಕುಂಬಾರಿಕೆ, ಕುಟ್ಟಣದ ಅವಲಕ್ಕಿ ತಯಾರಿಕೆ, ಎಣ್ಣೆ ಗಾಣ, ಕಮ್ಮಾರಿಕೆ, ಬಡಗಿ ಕೆಲಸಗಳು ಹಾಗೂ ಬೆತ್ತ–ಬಿದಿರು ಕೈಗಾರಿಕೆ ವಿಭಾಗಗಳಲ್ಲಿ ನಡೆಯುತ್ತಿದ್ದ ನೇರ ಪ್ರಾತ್ಯಕ್ಷಿಕೆಗಳು ವಿದೇಶಿ ಪ್ರವಾಸಿಗರ ಗಮನ ಸೆಳೆದವು.
ಗ್ರಾಮೀಣ ಜೀವನ ಶೈಲಿ ಮತ್ತು ಪರಂಪರ ವೃತ್ತಿಗಳ ಕುರಿತು ಮಾಹಿತಿ ಪಡೆದುಕೊಂಡ ಪ್ರವಾಸಿಗರು ಈ ಪ್ರದರ್ಶನಗಳನ್ನು ಕಣ್ತುಂಬಿಕೊಂಡು ಆಶ್ಚರ್ಯ ವ್ಯಕ್ತಪಡಿಸಿದರು.
ಪ್ರತೀ ವರ್ಷ ಪಿಲಿಕುಳ ಪ್ರವಾಸವನ್ನು ಆಯೋಜಿಸುವ ಮಂಗಳೂರಿನ ಪ್ರಸಿದ್ಧ ಪ್ರವಾಸಿ ಸಂಸ್ಥೆ ಲಿಯಾ ಟ್ರಾವೆಲ್ಸ್ ಈ ಬಾರಿ ಕೂಡ ವಿದೇಶಿ ಪ್ರವಾಸಿಗರನ್ನು ಕರೆತರುವ ಜವಾಬ್ದಾರಿಯನ್ನು ವಹಿಸಿತ್ತು.
ಒಟ್ಟು 150 ಕ್ಕೂ ಹೆಚ್ಚು ವಿದೇಶಿ ಪ್ರವಾಸಿಗರು ಪಿಲಿಕುಳಕ್ಕೆ ಭೇಟಿ ನೀಡಿದ್ದು, ಈ ಕುರಿತು ಪಿಲಿಕುಳ ಅಭಿವೃದ್ಧಿ ಪ್ರಾಧಿಕಾರದ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.