ಮಂಗಳೂರು: ಅಮೇರಿಕಾ ಹಾಗೂ ಇಸ್ರೇಲ್ ದೇಶಗಳ ಯುದ್ಧಕೋರ ನೀತಿಗಳ ಪರಿಣಾಮವಾಗಿ ಜಗತ್ತಿನಾದ್ಯಂತ ಯುದ್ಧದ ಆತಂಕದ ವಾತಾವರಣ ನಿರ್ಮಾಣವಾಗಿದ್ದು, ಇದರಿಂದ ಸಾಮಾನ್ಯ ಜನರು ತೀವ್ರ ಆತಂಕದಲ್ಲಿದ್ದಾರೆ ಎಂದು ಸಿಐಟಿಯು (CITU) ಕರ್ನಾಟಕ ರಾಜ್ಯ ಕಾರ್ಯದರ್ಶಿ ಕೆ. ಮಹಾಂತೇಶ್ ಅಭಿಪ್ರಾಯಪಟ್ಟರು.
ಮಂಗಳೂರಿನಲ್ಲಿ ಏಪ್ರಿಲ್ 4 ಮತ್ತು 5 ರಂದು ನಡೆಯಲಿರುವ ಸಿಐಟಿಯು ಕರ್ನಾಟಕ ರಾಜ್ಯ ಮಟ್ಟದ ಸಂಘಟನಾ ಕಾರ್ಯಾಗಾರದ ಯಶಸ್ಸಿಗಾಗಿ ರಚಿಸಲ್ಪಟ್ಟ ಸ್ವಾಗತ ಸಮಿತಿಯ ಸಭೆಯಲ್ಲಿ ಅವರು ಮಾತನಾಡಿದರು.
ಅಮೇರಿಕನ್ ಸಾಮ್ರಾಜ್ಯಶಾಹಿ ರಾಷ್ಟ್ರಗಳು ತೀವ್ರ ಆರ್ಥಿಕ ಬಿಕ್ಕಟ್ಟಿನಲ್ಲಿದ್ದು, ಅದನ್ನು ಸಮತೋಲನಗೊಳಿಸಲು ಪ್ರತೀ ಸಂದರ್ಭದಲ್ಲೂ ಯುದ್ಧವನ್ನೇ ಅಸ್ತ್ರವಾಗಿ ಬಳಸುತ್ತಿವೆ. ಇದರ ಪರಿಣಾಮವಾಗಿ ಜೀವನಾವಶ್ಯಕ ವಸ್ತುಗಳ ಬೆಲೆ ಏರಿಕೆಯಾಗುತ್ತಿದ್ದು, ದುಡಿಯುವ ವರ್ಗದ ಬದುಕು ಸಂಕಷ್ಟಕ್ಕೆ ಸಿಲುಕುತ್ತಿದೆ. ಈ ಹಿನ್ನೆಲೆ ಅಮೇರಿಕಾದ ಯುದ್ಧಕೋರ ನೀತಿಗಳು ಕಾರ್ಮಿಕ ವರ್ಗಕ್ಕೆ ಮಾರಕವಾಗಿ ಪರಿಣಮಿಸುತ್ತಿವೆ ಎಂದು ಅವರು ಹೇಳಿದರು.
ಕೇಂದ್ರ ಸರ್ಕಾರ ಜಾರಿಗೆ ತರಲು ಮುಂದಾಗಿರುವ ಕಾರ್ಮಿಕ ಸಂಹಿತೆಗಳ ಕುರಿತು ಮಾತನಾಡಿದ ಅವರು, ಸಂಸತ್ತಿನಲ್ಲಿ ಇದರ ವಿರುದ್ಧ ಪ್ರತಿಭಟನೆಯ ನಾಟಕವಾಡಿದ ಕಾಂಗ್ರೆಸ್ ಪಕ್ಷ ಕರ್ನಾಟಕದಲ್ಲಿ ಅಧಿಕಾರದಲ್ಲಿದ್ದರೂ ಸಂಹಿತೆಗಳ ವಿರುದ್ಧ ದೃಢ ನಿಲುವು ತೆಗೆದುಕೊಳ್ಳಲಿಲ್ಲ ಎಂದು ಟೀಕಿಸಿದರು. ಬದಲಾಗಿ ಕಾರ್ಮಿಕ ವಿರೋಧಿ ಸಂಹಿತೆಗಳಿಗೆ ಪೂರಕವಾಗುವಂತೆ ಇನ್ನಷ್ಟು ಕಠಿಣ ನಿಯಮಾವಳಿಗಳನ್ನು ರೂಪಿಸಿರುವುದು ಕಾಂಗ್ರೆಸ್ ಪಕ್ಷದ ದ್ವಂದ್ವ ನೀತಿಯನ್ನು ತೋರಿಸುತ್ತದೆ ಎಂದು ಅವರು ಆರೋಪಿಸಿದರು.
ಸಭೆಯಲ್ಲಿ ಕಾರ್ಯಾಗಾರದ ಯಶಸ್ಸಿಗಾಗಿ 101 ಮಂದಿಯನ್ನೊಳಗೊಂಡ ಸ್ವಾಗತ ಸಮಿತಿಯನ್ನು ರಚಿಸಲಾಯಿತು. ಜಿಲ್ಲೆಯ ಹಿರಿಯ ಕಾರ್ಮಿಕ ನಾಯಕ ಜೆ. ಬಾಲಕೃಷ್ಣ ಶೆಟ್ಟಿ ಅವರನ್ನು ಗೌರವಾಧ್ಯಕ್ಷರಾಗಿ, ಬಿ.ಎಂ. ಭಟ್ ಅವರನ್ನು ಕಾರ್ಯಾಧ್ಯಕ್ಷರಾಗಿ, ಸುನಿಲ್ ಕುಮಾರ್ ಬಜಾಲ್ ಅವರನ್ನು ಪ್ರಧಾನ ಕಾರ್ಯದರ್ಶಿಯಾಗಿ ಹಾಗೂ ಯೋಗೀಶ್ ಜಪ್ಪಿನಮೊಗರು ಅವರನ್ನು ಖಜಾಂಚಿಯಾಗಿ ಆಯ್ಕೆ ಮಾಡಲಾಯಿತು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಸಿಐಟಿಯು ದಕ್ಷಿಣ ಕನ್ನಡ ಜಿಲ್ಲಾ ಅಧ್ಯಕ್ಷ ಬಿ.ಎಂ. ಭಟ್ ಮಾತನಾಡಿ, ಆಳುವ ವರ್ಗಗಳ ಆಕ್ರಮಣಕಾರಿ ನೀತಿಗಳನ್ನು ಸಮರಶೀಲ ಹೋರಾಟಗಳ ಮೂಲಕ ಹಿಮ್ಮೆಟ್ಟಿಸಲು ಬಲಿಷ್ಠ ಕಾರ್ಮಿಕ ಚಳುವಳಿ ಅಗತ್ಯವಿದೆ ಎಂದು ಹೇಳಿದರು. ರಾಜ್ಯ ಮಟ್ಟದ ಸಂಘಟನಾ ಕಾರ್ಯಾಗಾರವನ್ನು ಯಶಸ್ವಿಗೊಳಿಸಲು ಜಿಲ್ಲೆಯ ಜನತೆ ಸಂಪೂರ್ಣ ಸಹಕಾರ ನೀಡಬೇಕು ಎಂದು ಅವರು ವಿನಂತಿಸಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್, ಕಾರ್ಯಾಗಾರದ ಮಹತ್ವ ಹಾಗೂ ಅದರ ಯಶಸ್ಸಿಗಾಗಿ ಕೈಗೊಳ್ಳಬೇಕಾದ ಸಿದ್ಧತೆಗಳ ಕುರಿತು ವಿವರಿಸಿದರು.
ಸಭೆಯಲ್ಲಿ ವಿವಿಧ ಸಂಘಟನೆಗಳ ಮುಖಂಡರಾದ ಯಾದವ ಶೆಟ್ಟಿ, ವಸಂತ ಆಚಾರಿ, ಸಂತೋಷ್ ಬಜಾಲ್, ಕೃಷ್ಣಪ್ಪ ಕೊಂಚಾಡಿ, ವಾಸುದೇವ ಉಚ್ಚಿಲ್, ಬಿ.ಎಂ. ಮಾಧವ, ಮುನೀರ್ ಕಾಟಿಪಳ್ಳ, ಪುರುಷೋತ್ತಮ ಪೂಜಾರಿ, ಮನೋಜ್ ವಾಮಂಜೂರು, ಯೋಗೀಶ್ ಜಪ್ಪಿನಮೊಗರು, ಫ್ಲೇವಿ ಕ್ರಾಸ್ತಾ ಅತ್ತಾವರ, ಯೋಗಿತಾ ಉಳ್ಳಾಲ, ಶೈಲೇಶ್, ರವಿಚಂದ್ರ ಕೊಂಚಾಡಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.