ಮಂಗಳೂರು: ಸಂತ ಮದರ್ ತೆರೇಸಾ ವಿಚಾರ ವೇದಿಕೆ ಮಂಗಳೂರು ಇದರ ನೇತೃತ್ವದಲ್ಲಿ “ಪ್ರೀತಿ ಹರಡಲಿ ಎಲ್ಲೆಡೆ” ಎಂಬ ಘೋಷವಾಕ್ಯದೊಂದಿಗೆ ರಮಝಾನ್ ಹಬ್ಬದ ಪ್ರಯುಕ್ತ ಸೌಹಾರ್ದ ಇಫ್ತಾರ್ ಕೂಟವು ಸಂತ ಅಲೋಶಿಯಸ್ ಕಾಲೇಜಿನ ಆವರಣದಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಅಝೀಝ್ ದಾರಿಮಿ ಚೊಕ್ಕಬೆಟ್ಟು ಹಾಗೂ ಸಂತ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾನಿಲಯದ ಸಹ ಕುಲಪತಿ ಫಾ. ಮೆಲ್ವಿನ್ ಡಿಕುನ್ಹಾ ಎಸ್.ಜೆ. ಭಾಗವಹಿಸಿದ್ದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವೇದಿಕೆಯ ಅಧ್ಯಕ್ಷ ರೊಯ್ ಕ್ಯಾಸ್ತೆಲಿನೊ, ಖ್ಯಾತ ಸಾಹಿತಿ ಮತ್ತು ನಿವೃತ್ತ ಶಿಕ್ಷಕಿ ಬಿ.ಎಂ. ರೋಹಿಣಿ, ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಸ್ಟ್ಯಾನಿ ಅಲ್ವಾರಿಸ್, ಬೆಥನಿ ಮುಖ್ಯಸ್ಥೆ ಸಿಸ್ಟರ್ ರೋಸ್ ಮೇರಿ, ಬಾವುಟಗುಡ್ಡ ಝೀನತ್ ಬಕ್ಷ್ ಜುಮಾ ಮಸ್ಜಿದ್‌ನ ಉಪಾಧ್ಯಕ್ಷ ಕೆ. ಅಶ್ರಫ್ ಅವರು ಮಾತನಾಡಿ ಸಮಾಜದಲ್ಲಿ ಸೌಹಾರ್ದತೆ ಮತ್ತು ಸಹಬಾಳ್ವೆಯ ಅಗತ್ಯ ಹಾಗೂ ಮಹತ್ವವನ್ನು ವಿವರಿಸಿದರು.
ವೇದಿಕೆಯ ಕಾರ್ಯದರ್ಶಿ ಸುನೀಲ್ ಕುಮಾರ್ ಬಜಾಲ್ ಸ್ವಾಗತಿಸಿ ವೇದಿಕೆಯ ಉದ್ದೇಶಗಳನ್ನು ವಿವರಿಸಿದರು. ಸಾಮರಸ್ಯ ಮಂಗಳೂರು ಮುಖ್ಯಸ್ಥೆ ಮಂಜುಳಾ ನಾಯಕ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ರೆಹಮಾನ್ ಖಾನ್ ಕುಂಜತ್ತಬೈಲ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ಈ ಸಂದರ್ಭದಲ್ಲಿ ವಿವಿಧ ಧರ್ಮಗಳ ಜನರು ಸೇರಿ ಇಫ್ತಾರ್ ಕೂಟದಲ್ಲಿ ಭಾಗವಹಿಸಿ ಸೌಹಾರ್ದತೆಯ ಸಂದೇಶ ಸಾರಿದರು.