ಪುತ್ತೂರು: ಬನ್ನೂರು ಗ್ರಾಮದ ಸೇಡಿಯಾಪು ಪ್ರದೇಶದಲ್ಲಿ ಸರಕಾರಿ ಮೆಡಿಕಲ್ ಕಾಲೇಜು ಮತ್ತು 300 ಹಾಸಿಗೆಗಳ ಆಸ್ಪತ್ರೆ ಆರಂಭಿಸಲು ರಾಜ್ಯ ಸರ್ಕಾರ ಈಗಾಗಲೇ ಅನುಮತಿ ನೀಡಿದೆ ಎಂದು ಕೋಡಿಂಬಾಡಿ ಗ್ರಾಮ ಪಂಚಾಯತ್ ಮಾಜಿ ಉಪಾಧ್ಯಕ್ಷ ಜಯಪ್ರಕಾಶ್ ಬದಿನಾರು ಹೇಳಿದರು. ಈ ಯೋಜನೆಗೆ ಬಿಜೆಪಿಯವರು ಅನಗತ್ಯವಾಗಿ ವಿರೋಧ ವ್ಯಕ್ತಪಡಿಸುತ್ತಿದ್ದು “ಮೊಸರಲ್ಲಿ ಕಲ್ಲು ಹುಡುಕುವ ಕೆಲಸ” ಮಾಡುತ್ತಿದ್ದಾರೆ ಎಂದು ಅವರು ಆರೋಪಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿಗಳು ಬಜೆಟ್ನಲ್ಲಿ ಪುತ್ತೂರಿಗೆ ಮೆಡಿಕಲ್ ಕಾಲೇಜು ಘೋಷಣೆ ಮಾಡಿದ್ದು, ಶಾಸಕ ಅಶೋಕ್ ಕುಮಾರ್ ರೈ ಅವರ ಪ್ರಯತ್ನದಿಂದ ಪುತ್ತೂರಿನ ಜನರ ಬಹುಕಾಲದ ಕನಸು ನನಸಾಗುತ್ತಿದೆ ಎಂದು ಹೇಳಿದರು. ಇದರ ಜೊತೆಗೆ ಸೇಡಿಯಾಪಿನಲ್ಲಿ 300 ಹಾಸಿಗೆಗಳ ಸರಕಾರಿ ಆಸ್ಪತ್ರೆ ಸ್ಥಾಪಿಸಲು ಸರ್ಕಾರ ದಿಟ್ಟ ಹೆಜ್ಜೆ ಇಟ್ಟಿದೆ ಎಂದರು.
2016ರಲ್ಲಿ ಆಗಿನ ಕಾಂಗ್ರೆಸ್ ಶಾಸಕಿ ಶಕುಂತಳಾ ಶೆಟ್ಟಿ ಅವರ ಅವಧಿಯಲ್ಲಿ 40 ಎಕರೆ ಜಾಗವನ್ನು ಮೆಡಿಕಲ್ ಕಾಲೇಜಿಗೆ ಮೀಸಲು ಮಾಡಲಾಗಿತ್ತು. ನಂತರ ಬಂದ ಶಾಸಕ ಸಂಜೀವ ಮಠಂದೂರು ಅವರು ಆ ಜಾಗವನ್ನು ಸೀಫುಡ್ ತಯಾರಿಕಾ ಘಟಕಕ್ಕೆ ಬಳಸಲು ಪ್ರಯತ್ನಿಸಿದರೂ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಯೋಜನೆಯನ್ನು ಕೈಬಿಟ್ಟಿದ್ದರು. ಬಳಿಕ ಶಾಸಕ ಅಶೋಕ್ ಕುಮಾರ್ ರೈ ಅವರು ಮೆಡಿಕಲ್ ಕಾಲೇಜು ಯೋಜನೆಯನ್ನು ಪುನರುಜ್ಜೀವನಗೊಳಿಸಿದರು ಎಂದು ತಿಳಿಸಿದರು.
ಸಾಮಾಜಿಕ ಮುಂದಾಳು ಎ. ಜತೀಂದ್ರ ಶೆಟ್ಟಿ ಅಳಿಮರ ಮಾತನಾಡಿ, ಗ್ರಾಮಾಂತರ ಪ್ರದೇಶದ ಅಭಿವೃದ್ಧಿಗಾಗಿ ಮೆಡಿಕಲ್ ಕಾಲೇಜು ಹಾಗೂ ಆಸ್ಪತ್ರೆಯನ್ನು ಸೇಡಿಯಾಪಿನಲ್ಲಿ ಸ್ಥಾಪಿಸುವುದು ಸೂಕ್ತ ನಿರ್ಧಾರ ಎಂದು ಹೇಳಿದರು. ಇದರಿಂದ ಪುತ್ತೂರು ಪ್ರದೇಶದ ಅಭಿವೃದ್ಧಿಗೆ ವೇಗ ಸಿಗಲಿದೆ ಎಂದು ಅವರು ಅಭಿಪ್ರಾಯಪಟ್ಟರು.
ಮೆಡಿಕಲ್ ಕಾಲೇಜು ಹೋರಾಟ ಸಮಿತಿಯ ವಿಶ್ವಪ್ರಸಾದ್ ಸೇಡಿಯಾಪು ಮಾಹಿತಿ ನೀಡಿ, 300 ಹಾಸಿಗೆಗಳ ಆಸ್ಪತ್ರೆ ನಿರ್ಮಾಣಕ್ಕೆ ಕನಿಷ್ಠ 8 ಎಕರೆ ಜಾಗ ಅಗತ್ಯವಿದ್ದು, ಈಗಿನ ಪುತ್ತೂರು ಸರಕಾರಿ ಆಸ್ಪತ್ರೆಯ ಜಾಗ ಕೇವಲ 5.16 ಎಕರೆ ಮಾತ್ರ ಇದೆ ಎಂದರು. ಹೊಸ ಆಸ್ಪತ್ರೆಗಾಗಿ ವಿಶಾಲ ಪಾರ್ಕಿಂಗ್, ಆಂಬುಲೆನ್ಸ್ ಸಂಚಾರಕ್ಕೆ ಸೂಕ್ತ ರಸ್ತೆಗಳು ಸೇರಿದಂತೆ ಅಗತ್ಯ ಮೂಲಸೌಕರ್ಯಗಳಿಗಾಗಿ ಹೆಚ್ಚಿನ ಜಾಗ ಬೇಕಾಗುತ್ತದೆ ಎಂದು ಹೇಳಿದರು.
ಸೇಡಿಯಾಪು ಪ್ರದೇಶದಲ್ಲಿ ಅಗತ್ಯ ಜಾಗ ಲಭ್ಯವಿದ್ದು, ಅಧಿಕಾರಿಗಳು ಈಗಾಗಲೇ ಮಣ್ಣು ಪರೀಕ್ಷೆ, ಡ್ರೋನ್ ಸರ್ವೆ ಹಾಗೂ ಕಟ್ಟಡದ ಪ್ರಾಥಮಿಕ ಸ್ಕೆಚ್ ಕಾರ್ಯಗಳನ್ನು ಪೂರ್ಣಗೊಳಿಸಿದ್ದಾರೆ. ಎಲ್ಲ ದಿಕ್ಕಿನಿಂದ ಸಂಪರ್ಕ ರಸ್ತೆಯೂ ಇರುವುದರಿಂದ ಇದು ಸೂಕ್ತ ಸ್ಥಳವಾಗಿದೆ ಎಂದು ಅವರು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಪುತ್ತೂರು ಸರಕಾರಿ ಆಸ್ಪತ್ರೆಯ ಆರೋಗ್ಯ ರಕ್ಷಾ ಸಮಿತಿ ಸದಸ್ಯ ಆಸ್ಕರ್ ಆನಂದ್ ಉಪಸ್ಥಿತರಿದ್ದರು.