ಉಡುಪಿ: ಕಳೆದ ಎರಡು–ಮೂರು ದಿನಗಳಿಂದ ತಲೆಗೆ ಚೊಂಬು ಸಿಕ್ಕಿಕೊಂಡು ಪರದಾಡುತ್ತಿದ್ದ ಕೋತಿಯೊಂದನ್ನು ಸ್ಥಳೀಯರು ರಕ್ಷಿಸಿದ ಘಟನೆ ಉಡುಪಿ ಜಿಲ್ಲೆಯ ಪೆರ್ಣಂಕಿಲ ಗ್ರಾಮದ ಚಿತ್ರಬೈಲು ಪ್ರದೇಶದಲ್ಲಿ ನಡೆದಿದೆ.
ಪರಿಸರದಲ್ಲಿ ಚೊಂಬು ತಲೆಗೆ ಹಾಕಿಕೊಂಡು ಅಲೆದಾಡುತ್ತಿದ್ದ ಕೋತಿಯನ್ನು ಸ್ಥಳೀಯ ಸಮಾಜಸೇವಕರು ಹಾಗೂ ಪರಿಸರ ಪ್ರೇಮಿ ನವೀನ್ ಕುಮಾರ್ ಚಿತ್ರಬೈಲು ಅವರು ಗಮನಿಸಿದರು. ಈ ವಿಷಯವನ್ನು ತಿಳಿದ ಅವರು ಸುಕೇಶ್, ಹರೀಶ ರಾಮ ಹಾಗೂ ವಿಶ್ವನಾಥ ಅವರೊಂದಿಗೆ ಸೇರಿ ಕೋತಿಯನ್ನು ರಕ್ಷಿಸಲು ಮುಂದಾದರು.
ಸ್ಥಳೀಯ ಯುವಕರು ಕೋತಿಯನ್ನು ಎಚ್ಚರಿಕೆಯಿಂದ ಹಗ್ಗದ ಸಹಾಯದಿಂದ ಹಿಡಿದು ಚಿತ್ರಬೈಲು ಶ್ರೀ ಬ್ರಹ್ಮಲಿಂಗೇಶ್ವರ ದೇವಸ್ಥಾನದ ಪರಿಸರಕ್ಕೆ ಕರೆತಂದರು. ಬಳಿಕ ಕೋತಿಯ ತಲೆಯನ್ನು ನೀರಿನಲ್ಲಿ ಒದ್ದೆ ಮಾಡಿ, ಜಾಗ್ರತೆಯಿಂದ ಚೊಂಬನ್ನು ತಲೆಯಿಂದ ಬೇರ್ಪಡಿಸಿದರು.
ಚೊಂಬು ತೆಗೆದ ತಕ್ಷಣ ಕೋತಿ ಮುಕ್ತವಾಗಿದೆಯೆಂಬಂತೆ ಜಿಗಿದು ಓಡಿ ಅರಣ್ಯದ ಕಡೆಗೆ ತೆರಳಿತು. ಸ್ಥಳೀಯ ಯುವಕರ ಈ ಮಾನವೀಯ ಕಾರ್ಯಕ್ಕೆ ಗ್ರಾಮಸ್ಥರಿಂದ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.