ಮಂಗಳೂರು: ಉಳ್ಳಾಲ–ಸೋಮೇಶ್ವರ ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹೆಚ್ಚಾಗುತ್ತಿರುವ ಕಡಲ್ಕೊರೆತ ಸಮಸ್ಯೆಯ ಬಗ್ಗೆ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರು ಲೋಕಸಭೆಯಲ್ಲಿ ಧ್ವನಿಯೆತ್ತಿದ್ದಾರೆ.
ಲೋಕಸಭೆಯ ನಿಯಮ 377ರಡಿ ಈ ಗಂಭೀರ ವಿಚಾರವನ್ನು ಪ್ರಸ್ತಾಪಿಸಿದ ಅವರು, ದಕ್ಷಿಣ ಕನ್ನಡ ಜಿಲ್ಲೆಯ ಒಟ್ಟು 36.66 ಕಿ.ಮೀ ಕರಾವಳಿ ತೀರದ ಪೈಕಿ ಸುಮಾರು 17.74 ಕಿ.ಮೀ, ಅಂದರೆ ಶೇ.48.40ರಷ್ಟು ಭಾಗ ಕಡಲ್ಕೊರೆತಕ್ಕೆ ಒಳಗಾಗುತ್ತಿದೆ ಎಂದು ತಿಳಿಸಿದ್ದಾರೆ. ಇದು ಕರ್ನಾಟಕ ರಾಜ್ಯದ ಸರಾಸರಿ ಶೇ.24 ಮತ್ತು ರಾಷ್ಟ್ರೀಯ ಸರಾಸರಿ ಶೇ.33.6ಕ್ಕಿಂತಲೂ ಹೆಚ್ಚು ಎನ್ನುವುದನ್ನು ಅವರು ಉಲ್ಲೇಖಿಸಿದರು.
ಜಿಲ್ಲೆಯಲ್ಲಿ ಸದ್ಯಕ್ಕೆ ಕೇವಲ ಶೇ.21.9 ರಷ್ಟು ಕರಾವಳಿ ಮಾತ್ರ ಸುರಕ್ಷಿತವಾಗಿದೆ, ಇದು ನೆರೆಯ ಜಿಲ್ಲೆಗಳಿಗೆ ಹೋಲಿಸಿದರೆ ತುಂಬಾ ಕಡಿಮೆ ಪ್ರಮಾಣವಾಗಿದ್ದು ಆತಂಕಕಾರಿ ಬೆಳವಣಿಗೆಯಾಗಿದೆ ಎಂದು ಅವರು ಹೇಳಿದರು.
ಮುಂಗಾರು ಕಾಲದಲ್ಲಿ ಅಲೆಗಳ ಅಬ್ಬರ, ಬದಲಾಗುತ್ತಿರುವ ಹವಾಮಾನ ವೈಪರೀತ್ಯ ಹಾಗೂ ಕರಾವಳಿಯಲ್ಲಿನ ಕೆಲವು ಅವೈಜ್ಞಾನಿಕ ಕಾಮಗಾರಿಗಳ ಪರಿಣಾಮವಾಗಿ ಕಡಲ ತೀರ ಸವಕಳಿಗೆ ಒಳಗಾಗಿ ಭೂಪ್ರದೇಶ ಸಮುದ್ರಪಾಲಾಗುತ್ತಿದೆ. ಇದರ ಪರಿಣಾಮವಾಗಿ ಕರಾವಳಿ ಭಾಗದ ಮನೆಗಳು, ರಸ್ತೆಗಳು ಹಾಗೂ ಸಾರ್ವಜನಿಕ ಆಸ್ತಿಪಾಸ್ತಿಗಳಿಗೆ ದೊಡ್ಡ ಪ್ರಮಾಣದ ಹಾನಿ ಉಂಟಾಗುತ್ತಿದೆ ಎಂದು ಅವರು ವಿವರಿಸಿದರು.
ಇದು ಕೇವಲ ಭೌಗೋಳಿಕ ಸಮಸ್ಯೆಯಲ್ಲ, ಸಮುದ್ರವನ್ನು ನಂಬಿ ಬದುಕುತ್ತಿರುವ ಮೀನುಗಾರ ಸಮುದಾಯದ ಜೀವನೋಪಾಯಕ್ಕೂ ದೊಡ್ಡ ಅಪಾಯ ಉಂಟುಮಾಡುತ್ತಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದರು.
ಮುಂಗಾರು ಮಳೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ, ಮಳೆಯ ಅಬ್ಬರಕ್ಕೂ ಮುನ್ನವೇ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು. ಕೇಂದ್ರದ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯ ಹಾಗೂ ಭೂ ವಿಜ್ಞಾನ ಸಚಿವಾಲಯಗಳ ಸಮನ್ವಯದೊಂದಿಗೆ ದಕ್ಷಿಣ ಕನ್ನಡ ಜಿಲ್ಲೆಗೆ ವಿಶೇಷ ಕರಾವಳಿ ಸಂರಕ್ಷಣಾ ಯೋಜನೆಯನ್ನು ರೂಪಿಸಬೇಕು ಎಂದು ಅವರು ಒತ್ತಾಯಿಸಿದರು.
ಇದಲ್ಲದೆ, ಕರಾವಳಿ ಸಂರಕ್ಷಣೆಗೆ ಮೀಸಲಾಗಿರುವ ಹಣಕಾಸಿನ ನೆರವನ್ನು ತುರ್ತಾಗಿ ಬಿಡುಗಡೆ ಮಾಡಿ ಕಡಲ್ಕೊರೆತ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಹಿಡಿಯಬೇಕು. ಈ ಮೂಲಕ ಮೀನುಗಾರರ ಬದುಕನ್ನು ಸುರಕ್ಷಿತಗೊಳಿಸಲು ಕೇಂದ್ರ ಸರ್ಕಾರ ತಕ್ಷಣ ಮಧ್ಯಪ್ರವೇಶಿಸಿ ಕ್ರಮ ಕೈಗೊಳ್ಳಬೇಕು ಎಂದು ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರು ಸದನದಲ್ಲಿ ಆಗ್ರಹಿಸಿದ್ದಾರೆ.