ಕಟಪಾಡಿ, ಮಾ. 12: ಶ್ರೀ ಕ್ಷೇತ್ರ ಶಂಕರಪುರದಲ್ಲಿ ಪ್ರತಿಷ್ಠಾಪನೆಗೊಳ್ಳಲಿರುವ 19 ಅಡಿ ಎತ್ತರದ ಏಕಶಿಲಾ ಬಜರಂಗಿ ಮೂರ್ತಿಯ ಪ್ರವೇಶವು ಮಾ. 14ರಂದು ಭವ್ಯ ಮೆರವಣಿಗೆಯೊಂದಿಗೆ ನಡೆಯಲಿದೆ ಎಂದು ಶ್ರೀ ಸಾಯಿ ಈಶ್ವರ ಗುರೂಜಿ ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾ. 14ರಂದು ಸಂಜೆ 3.30ಕ್ಕೆ ಉಡುಪಿ ಜೋಡುಕಟ್ಟೆಯಿಂದ ವಾಹನಗಳ ಭವ್ಯ ಮೆರವಣಿಗೆಯೊಂದಿಗೆ ಬಜರಂಗಿ ಮೂರ್ತಿಯ ಪ್ರವೇಶ ಆರಂಭಗೊಳ್ಳಲಿದೆ ಎಂದು ತಿಳಿಸಿದರು.
ಕಳೆದ 11 ವರ್ಷಗಳಿಂದ ಧಾರ್ಮಿಕ ಮತ್ತು ಸಾಮಾಜಿಕ ಸೇವಾ ಕಾರ್ಯಕ್ರಮಗಳನ್ನು ನಡೆಸುತ್ತಿರುವ ಶ್ರೀ ಸಾಯಿ ಈಶ್ವರ ಗುರೂಜಿ ಅವರ ನೇತೃತ್ವದಲ್ಲಿ, ಹಿಂದೂ ಬಾಂಧವರ ಒಗ್ಗಟ್ಟು ಮತ್ತು ಏಳಿಗೆಯ ಮಹಾ ಸಂಕಲ್ಪದೊಂದಿಗೆ ಸುಮಾರು 60 ಲಕ್ಷ ರೂ. ವೆಚ್ಚದಲ್ಲಿ 19 ಅಡಿ ಎತ್ತರದ ಏಕಶಿಲಾ ಶ್ರೀ ಮುಖ್ಯಪ್ರಾಣನ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗುತ್ತಿದೆ. ಈ ಮೂರ್ತಿಯ ಪ್ರತಿಷ್ಠಾಪನೆ ಕಾರ್ಯಕ್ರಮ ಏಪ್ರಿಲ್ 2ರಂದು ಶ್ರೀ ಕ್ಷೇತ್ರ ಶಂಕರಪುರದಲ್ಲಿ ನಡೆಯಲಿದೆ.
ಬಜಗೋಳಿಯ ಶ್ರೀದೇವಿ ಶಿಲ್ಪಕಲಾ ಕೇಂದ್ರದ ಗಣೇಶ ಶಿಲ್ಪಿ ಅವರಿಂದ ಕೆತ್ತಲ್ಪಟ್ಟಿರುವ ಈ ಬಜರಂಗಿ ಮೂರ್ತಿಯು ಬಜಗೋಳಿಯಿಂದ ಹೊರಟು ಕಾರ್ಕಳ ಆನೆಕೆರೆ ಶ್ರೀ ಕೃಷ್ಣ ಮಂದಿರ ಹಾಗೂ ಮಟ್ಟಾರು ಅಡಪಾಡಿ ಶ್ರೀ ಉಮಾಮಹೇಶ್ವರಿ ದೇವಸ್ಥಾನಗಳಲ್ಲಿ ಪೂಜೆ ಸಲ್ಲಿಸಿಕೊಂಡು ಹಿರಿಯಡ್ಕ–ಪರ್ಕಳ–ಮಣಿಪಾಲ ಮಾರ್ಗವಾಗಿ ಉಡುಪಿಗೆ ತಲುಪಲಿದೆ.
ಅಲ್ಲಿಂದ ಜೋಡುಕಟ್ಟೆಗೆ ಆಗಮಿಸುವ ಮೂರ್ತಿಯನ್ನು ಭಕ್ತರು ವಾಹನಗಳ ಭವ್ಯ ಮೆರವಣಿಗೆಯ ಮೂಲಕ ಕುರ್ಕಾಲು ಸುಭಾಸ್ ನಗರ ಜಂಕ್ಷನ್ ವರೆಗೆ ಕರೆತಂದು, ಬಳಿಕ ಕಾಲ್ನಡಿಗೆಯ ಮೆರವಣಿಗೆಯ ಮೂಲಕ ಶ್ರೀ ಕ್ಷೇತ್ರ ಶಂಕರಪುರಕ್ಕೆ ಸಾಗಿಸಲಿದ್ದಾರೆ ಎಂದು ಗುರೂಜಿ ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ಸಾವಿರಾರು ಭಕ್ತರು ಭಾಗವಹಿಸುವ ನಿರೀಕ್ಷೆಯಿದ್ದು, ಸ್ಥಳೀಯ ಸಂಘಟನೆಗಳು ಮತ್ತು ಭಕ್ತರು ವಿವಿಧ ಸಿದ್ಧತೆಗಳನ್ನು ಮಾಡಿಕೊಂಡಿದ್ದಾರೆ.