ಬಂಟ್ವಾಳ: ಅಮೃತ ನಗರೋತ್ಥಾನ ಯೋಜನೆ ( ಹಂತ -4) ಯಡಿಯಲ್ಲಿ ದ.ಕ‌.ಜಿಲ್ಲೆಯ ಬಂಟ್ವಾಳ ಪುರಸಭೆ

ಬಂಟ್ವಾಳ: ಅಮೃತ ನಗರೋತ್ಥಾನ ಯೋಜನೆ ( ಹಂತ -4) ಯಡಿಯಲ್ಲಿ ದ.ಕ‌.ಜಿಲ್ಲೆಯ ಬಂಟ್ವಾಳ ಪುರಸಭೆಅನುಮೋದನೆಯಾಗಿರುವ ಕ್ರಿಯಾಯೋಜನೆಯಲ್ಲಿ ವಿವಿಧ ಕಾಮಗಾರಿಗಳಿಗೆ ಬಿಡುಗಡೆಯಾದ ರೂ. 2 ಕೋಟಿ 56 ಲಕ್ಷ ವೆಚ್ಚದಲ್ಲಿ ಕಾಮಗಾರಿಗಳಿಗೆ ಬಂಟ್ವಾಳ ಶಾಸಕ‌ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು ಬಡ್ಡಕಟ್ಟೆ ನೇತ್ರಾವತಿ ನದಿ ಕಿನಾರೆಯಲ್ಲಿ ಗಿಡ ನೆಡುವ ಮೂಲಕ ಶಿಲಾನ್ಯಾಸ ನೆರವೇರಿಸಿದರು.


ಪುರಸಭಾ ವ್ಯಾಪ್ತಿಯ ಅಭಿವೃದ್ಧಿಗಾಗಿ ವಿವಿಧ ಯೋಜನೆಗಳನ್ನು ಅನುಷ್ಠಾನಕ್ಕೆ ತರಲಾಗಿದ್ದು, ಕೋಟ್ಯಾಂತರ ರೂ ಅನುದಾನ ನೀಡಲಾಗಿದೆ. ಈ ಹಿಂದೆ ಬಿಜೆಪಿ ಸರಕಾರ ಇರುವ ಸಮಯದಲ್ಲಿ ಸುಮಾರು ರೂ. 100 ಕೋಟಿಯಷ್ಟು ಅನುದಾನವನ್ನು ಪುರಸಭೆಗೆ ತಂದಿದ್ದೇವೆ ಎಂದು ಹೇಳಿದರು.
ಒಳಚರಂಡಿ ಯೋಜನೆ (ಯುಜಿಡಿ)ಗೆ ಪುರಸಭೆಗೆ 60 ಕೋಟಿಯಷ್ಟು ಹಣ ಬಿಡುಗಡೆಯಾಗಿದ್ದು,ಜಾಗದ ಸಮಸ್ಯೆ ಅಭಿವೃದ್ಧಿಗೆ ಸ್ವಲ್ಪ ತೊಡಕಾಗಿದೆ. ಮುಂದಿನ ದಿನಗಳಲ್ಲಿ ಎಲ್ಲವೂ ಪರಿಹಾರವಾಗಿ ಯೋಜನೆಗೆ ಅನುಷ್ಠಾನಕ್ಕೆ ವೇಗ ಸಿಗಲಿದೆ.ಎರಡನೇ ಹಂತದ ಅಮೃತ್ ಯೋಜನೆಯಡಿ ಕುಡಿಯುವ ನೀರಿನ ಯೋಜನೆಗೆ ಅನುದಾನ ಬಿಡುಗಡೆಯಾಗಿದೆ ಎಂದರು. ಅತೀ ಅಗತ್ಯವಾದ ಮತ್ತು ಸಾರ್ವಜನಿಕರಿಗೆ ಅನುಕೂಲವಾಗುವಂತೆ ಜಕ್ರಿಬೆಟ್ಟು ಎಂಬಲ್ಲಿ ರೂ.
1.25 ಕೋಟಿ ವೆಚ್ಚದಲ್ಲಿ ನೇತ್ರಾವತಿ ನದಿಗೆ ಅಡ್ಡಲಾಗಿ ಡ್ಯಾಮ್ ಕಮ್ ಬ್ಯಾರೇಜ್ ನಿರ್ಮಾಣ ನಿರ್ಮಿಸಿದ ಬಳಿಕ ಕುಡಿಯುವ ನೀರಿನ ಸಮಸ್ಯೆ ಪರಿಹಾರವಾಗಿದೆ ಎಂದರು.
ಪುರಸಭಾ ವ್ಯಾಪ್ತಿಯ ಅಭಿವೃದ್ಧಿ ಕಾಮಗಾರಿಗಳ ಸಹಿತ ಸಮಸ್ಯೆಗಳ ಪರಿಹಾರದ ದೃಷ್ಟಿಯಿಂದ ಶೀಘ್ರವಾಗಿ ಅಧಿಕಾರಿಗಳ ಜೊತೆ ಸಭೆ ಕರೆಯುತ್ತೇನೆ ಎಂದು ಶಾಸಕರು ಇದೇ ಸಂದರ್ಭದಲ್ಲಿ ತಿಳಿಸಿದರು.


ಕಾಮಗಾರಿಗಳ ವಿವರ
ರೂ. 57.59 ಲಕ್ಷದಲ್ಲಿ ಬಂಟ್ವಾಳ ಕಸ್ಬಾ ಗ್ರಾಮದ ಬಡ್ಡಕಟ್ಟೆ ಹಿಂದೂ ರುದ್ರಭೂಮಿ ಅಭಿವೃದ್ಧಿ ಹಾಗೂ ಉದ್ಯಾನವನ ನಿರ್ಮಾಣ ಅಭಿವೃದ್ಧಿ, ರೂ.29.77 ಲಕ್ಷ ಬಂಟ್ವಾಳ ಪುರಸಭೆಯ ಪರಿಶಿಷ್ಟ ಜಾತಿ ಖಾಯಂ/ನೇರಪಾವತಿ ಪೌರಕಾರ್ಮಿಕರಿಗೆ ವಾಸಿಸಲು ಸಮುಚ್ಚಯ ನಿರ್ಮಾಣ, ರೂ.71.46 ಲಕ್ಷ ವೆಚ್ಚದಲ್ಲಿ ಬಂಟ್ವಾಳ ತಾಲೂಕಿನ ಬಿ.ಮೂಡ ಗ್ರಾಮದ ಭಂಡಾರಿಬೆಟ್ಟು – ಮೈರಾನಪಾದೆ ಪರಿಶಿಷ್ಟ ಜಾತಿ ಸಮುದಾಯ ಭವನ ಅಭಿವೃದ್ಧಿ, ಗಾಂದೋಡಿ ಸಂಪರ್ಕ ಕಾಲುಸಂಕ ಹಾಗೂ ರಸ್ತೆ ಅಭಿವೃದ್ಧಿ,ಬಿ.ಕಸ್ಬಾ ಗ್ರಾಮದ ಮುಗ್ದಾಲ್ ಪ್ರದೇಶದಲ್ಲಿ ಚರಂಡಿ ರಚನೆ,ಚೆಂಡ್ತಿಮಾರ್ ಸಮುದಾಯ ಭವನ ಅಭಿವೃದ್ಧಿ, ರೂ. 47.26 ಲಕ್ಷದಲ್ಲಿ ಪಾಣೆಮಂಗಳೂರು ಗ್ರಾಮದ ಬೊಂಡಾಲ ಮಹಮ್ಮಾಯಿ ದೇವಸ್ಥಾನದ ರಸ್ತೆ ಅಭಿವೃದ್ಧಿ ಬೊಂಡಾಲ ಕಲ್ಲಡ್ಕ ಗುಂಡೂರು ಸಂಪರ್ಕ ರಸ್ತೆ ಅಭಿವೃದ್ಧಿ,ಬೊಂಡಾಲ ಕಲ್ಲಡ್ಕ ಗುಂಡೂರು ಸಂಪರ್ಕ ರಸ್ತೆ ಅಭಿವೃದ್ಧಿ , ಬಂಟ್ವಾಳ ಮೂಡ ಗ್ರಾಮದ ಚೆಂಡಾಡಿ ಅಲೆತ್ತೂರು ರಸ್ತೆ ಅಭಿವೃದ್ಧಿ ಹಾಗೂ ಕಸ್ಬಾ ಗ್ರಾಮದ ಅಗ್ರಾರ್ ರಸ್ತೆ ಬದಿ ತಡೆಗೋಡೆ ರಚನೆ ಹಾಗೂ ರೂ. 50 ಲಕ್ಷದಲ್ಲಿ ಪುರಸಭಾ ವ್ಯಾಪ್ತಿಯ ಬಿ.ಮೂಡ ಬಿ.ಕಸ್ಬಾ ಹಾಗೂ ಪಾಣೆಮಂಗಳೂರು ಗ್ರಾಮದ ವಿವಿಧ ಪ್ರದೇಶಗಳಲ್ಲಿ ದಾರಿದೀಪ ವಿಸ್ತರಣೆ ಕಂಬಗಳ ಅಳವಡಿಕೆ ಹಾಗೂ ವಿವಿಧ ಕಡೆ ಸೆಮಿ ಹೈ ಮಾಸ್ಟ್ ಬೀದಿದೀಪ ಅಳವಡಿಕೆ ಕಾಮಗಾರಿಗಳಿಗೆ ಅನುದಾನವನ್ನು ಬಿಡುಗಡೆಯಾಗಿದೆ.

ಈ ಸಂದರ್ಭದಲ್ಲಿ ಬಂಟ್ವಾಳ ಮಂಡಲದ ಬಿಜೆಪಿ ಅಧ್ಯಕ್ಷ ಚೆನ್ನಪ್ಪ ಆರ್ ಕೋಟ್ಯಾನ್, ಪುರಸಭಾ ಮಾಜಿ ಅಧ್ಯಕ್ಷ ದಿನೇಶ್ ಭಂಡಾರಿ,ಸದಸ್ಯರಾದ ಗೋವಿಂದ ಪ್ರಭು,ಹರಿಪ್ರಸಾದ್, ಗಂಗಾಧರ ಪೂಜಾರಿ, ಶಶಿಕಲಾ, ಮೀನಾಕ್ಷಿ ಗೌಡ ,ಜಾನಕಿ, ಬಿಜೆಪಿ ಪ್ರಮುಖರಾದ ಕರುಣೇಂದ್ರ ಪೂಜಾರಿ, ಸುರೇಶ್ ಕುಲಾಲ್, ಅಜಯ್ ಕೊಂಬರಬೈಲು,ಜನಾರ್ದನ ಬೊಂಡಾಲ, ರಾಮದಾಸ ಬಂಟ್ವಾಳ, ಭಾಸ್ಕರ್ ಟೈಲರ್, ವಸಂತ ಭಂಡಾರಿ, ವಿಶ್ವನಾಥ ಚೆಂಡ್ತಿಮಾರ್ , ಪ್ರಣಾಮ್ ಅಜ್ಜಿಬೆಟ್ಟು, ಜಯ ಕಲ್ಲಡ್ಕ ಮತ್ತಿತರರು ಉಪಸ್ಥಿತರಿದ್ದರು .

SHARE
Loading spinner

Leave a Reply

Your email address will not be published. Required fields are marked *

error: Content is protected !!