ಆಗಸ್ಟ್ 1 ಹಾಗೂ 2 ರಂದು 15ನೇ ಆವೃತ್ತಿಯ ‘ಆಳ್ವಾಸ್ ಉದ್ಯೋಗ ಮೇಳ..!

ಮಂಗಳೂರು: ಮೂಡುಬಿದಿರೆಯ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನವು ಆಯೋಜಿಸಿಕೊಂಡು ಬರುತ್ತಿರುವ ಉದ್ಯೋಗ ಮೇಳದ 15ನೇ ಆವೃತ್ತಿಯು ಆಗಸ್ಟ್ 1 ಹಾಗೂ 2 ರಂದು ಮೂಡಬಿದ್ರೆಯ ವಿದ್ಯಾಗಿರಿಯಲ್ಲಿ ನಡೆಯಲಿದೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವ್ಯವಸ್ಥಾಪಕ ಟ್ರಸ್ಟಿ ವಿವೇಕ್ ಆಳ್ವ ತಿಳಿಸಿದ್ದಾರೆ.

ಮಂಗಳೂರಿನ ಪತ್ರಿಕಾಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು 2007 ರಲ್ಲಿ ಪ್ರಾರಂಭವಾದ ಆಳ್ವಾಸ್ ಪ್ರಗತಿ ಉದ್ಯೋಗಮೇಳವು ವೃತ್ತಿ ಆಕಾಂಕ್ಷಿಗಳಿಗೆ ಸದಾ ಉದ್ಯೋಗಾವಕಾಶಗಳನ್ನು ನೀಡುತ್ತಾ ಬಂದಿದ್ದು ಈ ಮೇಳವು ವಿಶೇಷವಾಗಿ ಗ್ರಾಮೀಣ ಮತ್ತು ಸವಲತ್ತುಗಳಿಲ್ಲದ ವರ್ಗಗಳ ಪ್ರತಿಭೆಗಳಿಗೆ ಉದ್ಯೋಗ ಅವಕಾಶಕೊಡಿಸುವ ಮಹತ್ಕಾರ್ಯವನ್ನು ವ್ಯವಸ್ಥಿತವಾಗಿ ನಡೆಸುತ್ತಾ ಬಂದಿದೆ ಎಂದರು.
ಇಲ್ಲಿಯವರೆಗೆ ಆಳ್ವಾಸ್ ಉದ್ಯೋಗ ಮೇಳಗಳ ಮೂಲಕ ಒಟ್ಟು 36,151 ಉದ್ಯೋಗಗಳನ್ನು ನೀಡಲಾಗಿದೆ ಹಾಗೂ 61,517 ಅಭ್ಯರ್ಥಿಗಳನ್ನು ವಿವಿಧ ಕಂಪೆನಿಗಳು ಮುಂದಿನ ಹಂತಕ್ಕೆ ಆಯ್ಕೆ ಮಾಡಿವೆ ಎಂದು ಅವರು ಅಂಕಿ ಅಂಶ ನೀಡಿದರು.

ಆಳ್ವಾಸ್ ಪ್ರಗತಿ 2025ರ 15ನೇ ಆವೃತ್ತಿಯ ಉದ್ಘಾಟನೆ ವಿದ್ಯಾಗಿರಿಯಲ್ಲಿ ಬೆಳಿಗ್ಗೆ 9.30 ಕ್ಕೆ ನಡೆಯಲಿದ್ದು, ದಕ್ಷಿಣ ಕನ್ನಡದ ಉಸ್ತುವಾರಿ ಸಚಿವರು ಹಾಗೂ ಕರ್ನಾಟಕ ಸರಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಚಿವರಾದ ದಿನೇಶ್ ಗುಂಡು ರಾವ್ ನೆರವೇರಿಸಲಿದ್ದಾರೆ. ಮಂಗಳೂರು ವಿವಿಯ ಕುಲಪತಿಗಳಾದ ಡಾ ಪಿಎಲ್ ಧರ್ಮ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳಲಿದ್ದು, ಮೂಲ್ಕಿ-ಮೂಡುಬಿದಿರೆ ಶಾಸಕರಾದ ಉಮಾನಾಥ ಕೋಟ್ಯಾನ್ ಕಾರ್ಯಕ್ರಮದ ಅಧ್ಯಕ್ಷತೆವಹಿಸುವರು. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷರಾದ ಡಾ ಎಂ ಮೋಹನ ಆಳ್ವ ಹಾಗೂ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ವಿಧಾನಸಭಾ ಹಾಗೂ ವಿಧಾನ ಪರಿಷತ್ತಿನ ಚುನಾಯಿತ ಜನಪ್ರತಿನಿಧಿಗಳ ಗೌರವ ಉಪಸ್ಥಿತಿ ಇರುತ್ತದೆ ಎಂದೂ‌ ವಿವೇಕ್ ಆಳ್ವ ವಿವರಿಸಿದರು.

ಕಾರ್ಯಕ್ರಮದಲ್ಲಿ ಅಲ್‌ಕಾರ್ಗೋ ಲಾಜಿಸ್ಟಿಕ್ಸ್‌ನ ಅಧ್ಯಕ್ಷರಾದ ಶಶಿಕಿರಣ್ ಶೆಟ್ಟಿ, ದುಬೈನ ಫಾರ್ಚುನ್ ಗ್ರೂಪ್ ಆಫ್ ಹೊಟೇಲ್ಸ್‌ನ ವ್ಯವಸ್ಥಾಪಕ ನಿರ್ದೇಶಕ ಹಾಗೂ ಅಧ್ಯಕ್ಷರಾದ ವಕ್ವಾಡಿ ಪ್ರವೀಣ್ ಶೆಟ್ಟಿ, ಸೌದಿ ಅರೇಬಿಯದ ಎಕ್ಸಪರ್ಟೈಸ್ ಕಂಪೆನಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆಎಸ್ ಶೇಖ್ ಕರ್ನಿರೆ, ಬಿಗ್ ಬ್ಯಾಗ್ಸ್ ಇಂಟರ್‌ನ್ಯಾಷನಲ್ ಪ್ರೈವೇಟ್ ಲಿಮಿಟೆಡ್‌ನ ಸ್ಥಾಪಕರು ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರವೀಶ್ ಕಾಮತ್, ರೋಹನ್ ಕಾರ್ಪೋರೇಶನ್ ಸ್ಥಾಪಕರು ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರೋಹನ್ ಮೊಂತೆರೊ,ನೀವಿಯಸ್ ಸೊಲ್ಯೂಷನ್ಸ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುಯೋಗ್ ಶೆಟ್ಟಿ ಯವರಿಗೆ ಸನ್ಮಾನ ಸಮಾರಂಭ ನಡೆಯಲಿದೆ ಎಂದರು.

ಉದ್ಯೋಗ ಮೇಳದಲ್ಲಿ ಕಂಪೆನಿಗಳು ಪದವಿ ಮತ್ತು ಸ್ನಾತಕೋತ್ತರ ಪದವೀಧರರು, ವೈದ್ಯಕೀಯ ಮತ್ತು ಪ್ಯಾರಾಮೆಡಿಕಲ್, ಇಂಜಿನಿಯರಿಂಗ್, ಕಲಾ, ವಾಣಿಜ್ಯ ಹಾಗೂ ಮ್ಯಾನೇಜೆಂಟ್, ಬೇಸಿಕ್ ಸೈನ್ಸ್, ನರ್ಸಿಂಗ್, ಐಟಿಐ, ಡಿಪ್ಲೊಮಾ, ಪಿಯುಸಿ, ಎಸ್‌ಎಸ್‌ಎಲ್‌ಸಿ ಹಾಗೂ ಇತರ ಅರ್ಹ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಉದ್ಯೋಗಾವಕಾಶ ಕಲ್ಪಿಸಲಿವೆ. ಯಾವುದೇ ಕೋರ್ಸ್ ಗಳನ್ನು 2025ರ ಶೈಕ್ಷಣಿಕ ವರ್ಷದ ಮುಂಚೆ ಅಥವಾ ಒಳಗೆ ಪೂರ್ಣಗೊಳಿಸುವವರು ಹಾಗೂ ಅನುಭವವಿರುವ ಅಭ್ಯರ್ಥಿಗಳು ಈ ಮೇಳದಲ್ಲಿ ಮುಕ್ತವಾಗಿ ಭಾಗವಹಿಸಬಹುದು.

ಈ ಬಾರಿಯ ಆಳ್ವಾಸ್ ಪ್ರಗತಿಯಲ್ಲಿ ಈಗಾಗಲೇ 285 ಕಂಪೆನಿಗಳ ನೋಂದಾವಣೆಯನ್ನು ಖಾತ್ರಿಪಡಿಸಲಾಗಿದೆ.,15930+ ಉದ್ಯೋಗ ಅವಕಾಶಗಳು , ಇರಲಿವೆ

ಪತ್ರಿಕಾಗೋಷ್ಠಿಯಲ್ಲಿ ರಂಜಿತಾ ಆಚಾರ್ಯ,ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಮುಖ್ಯಸ್ಥ ಪ್ರಸಾದ್ ಶೆಟ್ಟಿ ಹಾಗೂ ಅಮಿತ್ ಶೆಟ್ಟಿ ಉಪಸ್ಥಿತರಿದ್ದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!