ಮಂಗಳೂರು: ಪುಟ್ಟಪರ್ತಿಯ ಭಗವಾನ್ ಶ್ರೀ ಸತ್ಯಸಾಯಿ ಬಾಬಾ ಅವರ 100ನೇ ಜನ್ಮ ದಿನಾಚರಣೆ (ನವೆಂಬರ್ 23) ಅಂಗವಾಗಿ ಮಂಗಳೂರಿನ ಮಣ್ಣಗುಡ್ಡದ ಶ್ರೀ ಸತ್ಯಸಾಯಿ ಸೇವಾ ಸಂಸ್ಥೆ ಹಾಗೂ ಈಶ್ವರಾಂಬಾ ಚಾರಿಟೆಬಲ್ ಟ್ರಸ್ಟ್ ವತಿಯಿಂದ ವರ್ಷಪೂರ್ತಿ ನಾನಾ ರೀತಿಯ ಸೇವಾ ಚಟುವಟಿಕೆಗಳನ್ನು ನಡೆಸಲು ಉದ್ದೇಶಿಸಲಾಗಿದೆ.
ಸಮಾಜದ ಒಳಿಗಾಗಿ ಬದುಕನ್ನೇ ಮೀಸಲಿಟ್ಟು ಸಮಾಜವನ್ನು ಸರಿದಾರಿಗೆ ಕೊಂಡೊಯ್ದ ಶ್ರೀ ಸತ್ಯಸಾಯಿ ಬಾಬಾ ಅವರ 100ನೇ ಜನ್ಮ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಬೇಕು ಎಂಬ ಉದ್ದೇಶದಿಂದ 100 ಮಂದಿ ಫಲಾನುಭವಿಗಳಿಗೆ ಕೃತಕ ಕಾಲು ಜೋಡಣೆ ಸಲಕರಣೆಯನ್ನು ಉಚಿತವಾಗಿ ವಿತರಿಸಲು ಉದ್ದೇಶಿಸಲಾಗಿದೆ. ದಿವ್ಯಾಂಗ್ಟನ್ ಸೇವಾ ಎಂಬ ಹೆಸರಿನಡಿ ಈ ಯೋಜನೆ ಕಾರ್ಯಗತಗೊಳ್ಳುತ್ತಿದ್ದು ಈಗಾಗಲೇ 19 ಅರ್ಹ ಫಲಾನುಭವಿಗಳಿಗೆ ಕೃತಕ ಕಾಲು ವಿತರಿಸಲಾಗಿದೆ. ದಿನಾಂಕ 30-10-2025ರಂದು ಸಂಜೆ 3 ಗಂಟೆಗೆ ಶ್ರೀ ಸತ್ಯಸಾಯಿ ಮಂದಿರದಲ್ಲಿ 15 ಅರ್ಹ ಫಲಾನುಭವಿಗಳಿಗೆ ಕೃತಕ ಕಾಲು ವಿತರಿಸಲಾಗುವುದು. ಶ್ರೀ ಸತ್ಯಸಾಯಿ ಬಾಬಾ ಅವರ ಮುಂದಿನ ಜನ್ಮದಿನೋತ್ಸವದೊಳಗಾಗಿ 100 ಜನರಿಗೆ ಕೃತಕ ಕಾಲು ವಿತರಿಸಲು ಸಂಕಲ್ಪ ಮಾಡಲಾಗಿದೆ ಎಂದು ಶ್ರೀ ಸತ್ಯಸಾಯಿ ಸೇವಾ ಸಂಸ್ಥೆಯ ಕರ್ನಾಟಕ ಉತ್ತರ ರಾಜ್ಯಾಧ್ಯಕ್ಷ ಎಂ.ಪದ್ಮನಾಭ ಪೈಯವರಯ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಕೃತಕ ಕಾಲು ವಿತರಣೆಯೊಂದಿಗೆ ಜೋಡಣೆ, ಜೋಡಣೆಯ ಬಳಿಕದ ಸೇವೆ ನೀಡುವುದರೊಂದಿಗೆ ಫಲಾನುಭವಿಗಳಿಗೆ ಅವುಗಳ ಬಳಕೆಯ ಕುರಿತು ತರಬೇತಿ ಮತ್ತು ನೈತಿಕ ಬೆಂಬಲವನ್ನು ನಿರಂತರವಾಗಿ ನೀಡಲಾಗುತ್ತದೆ. ಮುಂದಿನ ದಿನಗಳಲ್ಲಿ ಅವಶ್ಯಕತೆ ಇದ್ದವರು ಸುರೇಶ್ ಶೆಟ್ಟಿ (ಮೊ. 8792394350), ನಿರಂಜನ ಹೆಬ್ಬಾರ್ (ದೂ: 98450 68018) ಅವರನ್ನು ಸಂಪರ್ಕಿಸಬಹುದು ಎಂದರು.
ಲಿಕ್ವಿಡ್ ಲವ್ ಕಾರ್ಯಕ್ರಮ
ತುರ್ತು ಸಂದರ್ಭ ರೋಗಿಗಳ ಕುಟುಂಬಗಳು ರಕ್ತದ ಲಭ್ಯತೆ ಕೊರತೆಯಿಂದ ಸಂಕಷ್ಟ ಎದುರಿಸುತ್ತಾರೆ. ಸೂಕ್ತ ರಕ್ತದಾನಿಗಳನ್ನು ಹುಡುಕಲು ಕಷ್ಟಪಡುತ್ತಾರೆ. ಈ ಹಿನ್ನೆಲೆಯಲ್ಲಿ ಸಂಸ್ಥೆಯು ಆಸ್ಪತ್ರೆ ಮತ್ತು ರಕ್ತನಿಧಿಗಳಿಗೆ ರಕ್ತದ ತುರ್ತು ಅಗತ್ಯ ಪೂರೈಸಲು ಅವಿರತ ಶ್ರಮಿಸುತ್ತಿವೆ. ಇದಕ್ಕಾಗಿ ಶ್ರೀ ಸತ್ಯಸಾಯಿ ಸೇವಾ ಸಂಸ್ಥೆಗಳು ಲಿಕ್ವಿಡ್ ಲವ್ ಎಂಬ ಪೋರ್ಟಲ್ ಪ್ರಾರಂಭಿಸಿದೆ. ಇದು ಸೇವಾ ರಕ್ತದಾನಿಗಳು ಮತ್ತು ರಕ್ತದ ಅವಶ್ಯಕತೆ ಇರುವವರನ್ನು ಜೋಡಿಸುವ ವೇದಿಕೆಯಾಗಿದೆ. ರಕ್ತದ ತುರ್ತು ಅಗತ್ಯಗಳನ್ನು ಪೂರೈಸಲು ಸಹಾಯ ಮಾಡುತ್ತದೆ. ರೋಗಿಗಳು ಅಥವಾ ಅವರ ಸಹಾಯಕರು ರಕ್ತದ ಬೇಡಿಕೆಗಳನ್ನು ಅಪ್ ಲೋಡ್ ಮಾಡಬಹುದು. ಸೇವಾದಳ ಸದಸ್ಯರು ಹೊಂದಾಣಿಕೆಯ ದಾನಿಗಳನ್ನು ಹುಡುಕುತ್ತಾರೆ ಮತ್ತು ಅಗತ್ಯವಿರುವ ಸಮಯದಲ್ಲಿ ದಾನ ಮಾಡಲು ವಿನಂತಿಸುತ್ತಾರೆ. ಅವಶ್ಯಕತೆ ಇದ್ದವರು ಮೋಹನ್ ಶೆಟ್ಟಿ (ಮೊ. 8008601313) ಅವರನ್ನು ಸಂಪರ್ಕಿಸಬಹುದು ಎಂದರು.
ನಾರಾಯಣ ಸೇವೆ
‘ನಾರಾಯಣ ಸೇವೆ’ ಯೋಜನೆಯಡಿ ಪ್ರತಿ ಭಾನುವಾರ ಮಂದಿರದ ವತಿಯಿಂದ ಉಪಾಹಾರ ತಯಾರಿಸಿ ನಿರ್ಗತಿಕರಿಗೆ ಹಾಗೂ ಅವಶ್ಯಕತೆ ಇರುವವರಿಗೆ ವಿತರಿಸಲಾಗುತ್ತದೆ. ಇದಲ್ಲದೆ ‘ನಿತ್ಯ ನಾರಾಯಣ ಸೇವೆ’ ಯೋಜನೆಯಡಿ ಭಗವಾನ್ ಸಾಯಿಬಾಬಾ ಅವರ ಭಕ್ತರು ದಿನಕ್ಕೊಂದು ಮನೆಯಂತೆ ತಮ್ಮ ಮನೆಯಲ್ಲೇ ಉಪಾಹಾರ ತಯಾರಿಸಿ ನಿರ್ಗತಿಕರಿಗೆ ನೀಡುತ್ತಾ ಬರುತ್ತಿದ್ದಾರೆ.
ಶ್ರೀ ಸತ್ಯಸಾಯಿ ಪ್ರೇಮ ಪ್ರವಾಹಿನಿ ರಥ
ಭಗವಾನ್ ಸತ್ಯಸಾಯಿ ಬಾಬಾ ಅವರ 100ನೇ ಜನ್ಮ ದಿನಾಚರಣೆ ಹಿನ್ನೆಲೆಯಲ್ಲಿ ಪುಟ್ಟಪರ್ತಿಯಿಂದ ರಾಷ್ಟ್ರಾದ್ಯಂತ ‘ಶ್ರೀ ಸತ್ಯಸಾಯಿ ಪ್ರೇಮ ಪ್ರವಾಹಿನಿ’ ಹೆಸರಿನಲ್ಲಿ ಐದು ವಿಶೇಷ ರಥಗಳು ಸಂಚರಿಸುತ್ತಿವೆ. ದಕ್ಷಿಣ ಭಾರತದಾದ್ಯಂತ ಸಂಚರಿಸುತ್ತಿರುವ ಒಂದು ರಥ 2026ರ ಮಾರ್ಚ್ ತಿಂಗಳಿನಲ್ಲಿ ಮಂಗಳೂರಿಗೆ ಆಗಮಿಸಲಿದೆ. ಈ ಹಿನ್ನೆಲೆಯಲ್ಲಿ ಮಾರ್ಚ್ ತಿಂಗಳಿನಲ್ಲಿ ವಿಶೇಷ ಕಾರ್ಯಕ್ರಮ ಆಯೋಜಿಸಲು ಉದ್ದೇಶಿಸಲಾಗಿದೆ.
‘ಕರಿಷ್ಯ ವಚನಂ ತವಾ’ ಎಂದರೆ ‘ನಿಮ್ಮ ಇಚ್ಛೆಯಂತೆ ನಾವು ನಡೆದುಕೊಳ್ಳುತ್ತೇವೆ’ ಎಂಬುದು ಸ್ವಾಮಿಯ ಜನ್ಮಶತಮಾನೋತ್ಸವದ ಘೋಷವಾಕ್ಯವಾಗಿದೆ. ಈ ಘೋಷವಾಕ್ಯಕ್ಕೆ ಪೂರಕವಾಗಿ ಭಗವಾನ್ ಶ್ರೀ ಸತ್ಯಸಾಯಿ ಬಾಬಾ ಅವರ ಭಕ್ತರು ರಾಷ್ಟ್ರಾದ್ಯಂತ ಒಂದು ವರ್ಷ ನಾನಾ ಸೇವಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಯೋಜನೆ ರೂಪಿಸಲಾಗಿದೆ.
ಕಳೆದ ನಾಲ್ಕು ದಶಕಗಳಿಂದ ಮಂದಿರದಲ್ಲಿ ಭಜನೆ, ಬಾಲವಿಕಾಸ ತರಗತಿ ಅಲ್ಲದೆ ಪ್ರತಿ ತಿಂಗಳ ಎರಡನೇ ಭಾನುವಾರ ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ವೈದ್ಯಕೀಯ ಉಚಿತ ಶಿಬಿರ ಮೊದಲಾದ ಸೇವಾ ಚಟುವಟಿಕೆಗಳನ್ನು ಆಯೋಜಿಸಿಕೊಂಡು ಬರಲಾಗುತ್ತಿದೆ. ಮುಂದಿನ ದಿನಗಳಲ್ಲಿ ಮಂಗಳೂರಿನ ಮಣ್ಣಗುಡ್ಡ ಸಮಿತಿಯನ್ನು ಇನ್ನಷ್ಟು ಸದೃಢಗೊಳಿಸಲು ಉದ್ದೇಶಿಸಲಾಗಿದ್ದು, ಇದರಲ್ಲಿ ಕೈಜೋಡಿಸಲು ಸಾರ್ವಜನಿಕರಿಗೆ ಮುಕ್ತ ಅವಕಾಶವಿದ್ದು, ಮಣ್ಣಗುಡ್ಡದ ಮಂದಿರಕ್ಕೆ ಭೇಟಿ ನೀಡಬಹುದಾಗಿದೆ.
ಪ್ರೇಮ ತರು ಕಾರ್ಯಕ್ರಮ
ಪರಿಸರ ಸಂರಕ್ಷಣೆಯ ದೃಷ್ಟಿಯಿಂದ ಮುಂದಿನ ಮೂರು ವರ್ಷಗಳಲ್ಲಿ 10 ಮಿಲಿಯನ್ ಗಿಡಗಳನ್ನು ನೆಟ್ಟು ಅವುಗಳನ್ನು ಪೋಷಣೆ ಮಾಡುವ ಮಹತ್ವದ ಯೋಜನೆ ‘ಪ್ರೇಮ ತರು’ವನ್ನು ರೂಪಿಸಲಾಗಿದೆ. ಇದು ಜಾಗತಿಕ ಮಟ್ಟದಲ್ಲಿ ನಡೆಯಲಿದ್ದು, ಪರಿಸರ ಉಳಿಸಿ ಬೆಳೆಸುವುದರೊಂದಿಗೆ ಸಮಾಜದಲ್ಲಿ ಪರಿಸರದ ಬಗ್ಗೆ ಜಾಗೃತಿ ಮೂಡಿಸುವಲ್ಲಿ ಪ್ರಮುಖ ಪಾತ್ರ ವಹಿಸಲಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ರಾಜ್ಯ ಪದಾಧಿಕಾರಿ ನಿರಂಜನ ಹೆಬ್ಬಾರ್, ಮಂಗಳೂರು ಸಮಿತಿ ಸದಸ್ಯರಾದ ದೇವಾನಂದ ರೈ, ಆನಂದ ರೈ, ವಿನಯ್ ಶೇಟ್, ದುರ್ಗಾಪ್ರಸಾದ್, ವೆನ್ಲಾಕ್ ನ ಲಿಮ್ ಸೆಂಟರ್‌ನ ಕೋ-ಆರ್ಡಿನೇಟರ್ ಸುರೇಶ್ ಶೆಟ್ಟಿ ,ಮೋಹನ್ ಶೆಟ್ಟಿ ಉಪಸ್ಥಿತರಿದ್ದರು.