ಪ್ರಧಾನಿ ಮೋದಿ ಅವರು ನವೆಂಬರ್​​ 28 ರಂದು ಕೃಷ್ಣ ನಗರಿ ಭೇಟಿ …. ! ಸಿದ್ಧತೆ ಹೇಗಿದೆ ..?

ಉಡುಪಿ: ಪ್ರಧಾನಿ ಮೋದಿ ಅವರು ಇದೇ ನವೆಂಬರ್​​ 28 ರಂದು ರಾಜ್ಯಕ್ಕೆ ಆಗಮಿಸಲಿದ್ದಾರೆ. ಐತಿಹಾಸಿಕ ಉಡುಪಿ ಶ್ರೀ ಕೃಷ್ಣಮಠಕ್ಕೆ ಪ್ರಧಾನಿ ಮೋದಿ ಅವರು ಭೇಟಿ ನೀಡಲಿದ್ದು, ಶ್ರೀ ಕೃಷ್ಣನ ದರ್ಶನ ಮಾಡಿ ಆಶೀರ್ವಾದ ಪಡೆಯಲಿದ್ದಾರೆ.
ಈ ನಿಟ್ಟಿನಲ್ಲಿ ಪ್ರಧಾನಿ ಮೋದಿ ಅವರ ಸ್ವಾಗತಕ್ಕೆ ಉಡುಪಿಯಲ್ಲಿ ಭರದ ಸಿದ್ಧತೆ ನಡೆಯುತ್ತಿದೆ. ಈಗಾಗಲೇ ಪ್ರಧಾನಿ ಮಂತ್ರಿಯವರ ಕಚೇರಿಯಿಂದ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆಯಲಾಗಿದ್ದು, ಕಾರ್ಯಕ್ರಮದ ಸಂಪೂರ್ಣ ಸಿದ್ಧತೆ ನೋಡಿಕೊಳ್ಳುವುದು ಸೇರಿದಂತೆ ಎಲ್ಲಾ ಅಗತ್ಯ ವ್ಯವಸ್ಥೆಗಳನ್ನ ಮಾಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.

ಲಕ್ಷ ಕಂಠ ಪಾರಾಯಣದಲ್ಲಿ ಪ್ರಧಾನಿ ಮೋದಿ ಭಾಗಿ

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ನಡೆಯುತ್ತಿರುವ ಬೃಹತ್​ ಗೀತೋತ್ಸವ ಅಂಗವಾಗಿ ನವೆಂಬರ್​ 28 ರಂದು ನಡೆಯಲಿರುವ ಲಕ್ಷ ಕಂಠ ಪಾರಾಯಣದಲ್ಲಿ ಪ್ರಧಾನಿ ಮೋದಿ ಅವರು ಭಾಗಿಯಾಗಲಿದ್ದಾರೆ. ಈ ವೇಳೆ ಪ್ರಧಾನಿ ಮೋದಿ ಅವರು ಭಗವದ್ಗೀತೆಯ 10 ಶ್ಲೋಕಗಳನ್ನು ಪಠಿಸಲಿದ್ದಾರೆ. ಈ ಧಾರ್ಮಿಕ ಉತ್ಸವದಲ್ಲಿ ಒಂದು ಲಕ್ಷ ಭಕ್ತರು ಭಾಗವಹಿಸಲಿದ್ದು, ಒಂದೇ ಸಮಯದಲ್ಲಿ ಭಗವದ್ಗೀತೆಯ ಶ್ಲೋಕಗಳನ್ನ ಪಠಿಸಲಿದ್ದಾರೆ.

ವೇಳಾಪಟ್ಟಿ ಹೀಗಿದೆ?

ನವೆಂಬರ್​ 28ರ ಬೆಳಗ್ಗೆ 8 ಗಂಟೆಗೆ ದೆಹಲಿಯಿಂದ ಹೊರಡಲಿರುವ ಪ್ರಧಾನಿ ಮೋದಿ ಅವರು, ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ವಿಶೇಷ ವಿಮಾನದ ಮೂಲಕ ಆಗಮಿಸಲಿದ್ದಾರೆ. ಬಳಿಕ ಮಂಗಳೂರಿನಿಂದ ಉಡುಪಿಗೆ ಹೆಲಿಕಾಪ್ಟರ್​ ಮೂಲಕ ಪ್ರಯಾಣ ಬೆಳಸಲಿರುವ ನರೇಂದ್ರ ಮೋದಿ ಅವರು 11.45 ಸುಮಾರು ಉಡುಪಿಗೆ ಆಗಮಿಸಲಿದ್ದಾರೆ.
ನಂತರ 12 ಗಂಟೆಗೆ ಪ್ರಧಾನಿ ಮೋದಿ ಅವರು ಶ್ರೀ ಕೃಷ್ಣ ಮಠಕ್ಕೆ ಭೇಟಿ ನೀಡಿ ಶ್ರೀ ಕೃಷ್ಣನ ದರ್ಶನ ಪಡೆದು, ಬಳಿಕ ಸುವರ್ಣತೀರ್ಥ ಮಂಟಪ ಮತ್ತು ಕನಕನ ಕಿಂಡಿಗೆ ಸ್ವರ್ಣ ಕವಚ ಲೋಕಾರ್ಪಣೆ ಮಾಡಲಿದ್ದಾರೆ. ಬಳಿಕ ಲಕ್ಷ ಕಂಠ ಗೀತಾ ಪಠಣ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಮಧ್ಯಾಹ್ನ 1.45ಕ್ಕೆ ಪ್ರಧಾನಿ ಮೋದಿ ಅವರು ಉಡುಪಿಯಿಂದ ಮಂಗಳೂರು ವಿಮಾನ ನಿಲ್ದಾಣಕ್ಕೆ ತೆರಳಿದ್ದಾರೆ.

ಪ್ರಧಾನಿ ಸ್ವಾಗತಕ್ಕೆ ಹೇಗಿದೆ ಸಿದ್ಧತೆ?

ಪ್ರಧಾನಿ ಮೋದಿ ಅವರ ಭೇಟಿಗೆ ಭದ್ರತಾ ವ್ಯವಸ್ಥೆ ಕಟ್ಟು ನಿಟ್ಟಾಗಿದ್ದು, ಸೋಮವಾರದಂದು ಎಸ್​ಪಿಜಿ ಟೀಂ ಉಡುಪಿಗೆ ಆಗಮಿಸಲಿದೆ. ಮಠದ ಆವರಣದಲ್ಲಿ ಭಕ್ತರ ಸುರಕ್ಷತೆಗಾಗಿ ವಿಶೇಷ ಪಾಸ್ ವ್ಯವಸ್ಥೆ ಜಾರಿಗೆ ಮಾಡಲಾಗಿದೆ. ಮಠ ಪ್ರವೇಶದ ಮಾರ್ಗಗಳಲ್ಲಿ ನಿಗದಿತ ನಿಯಮಗಳನ್ನು ಪಾಲಿಸಬೇಕೆಂದು ಆಡಳಿತ ಮಂಡಳಿ ತಿಳಿಸಿದೆ. ಇನ್ನು, ಪ್ರಧಾನಿ ಮೋದಿ ಅವರು ಭಾಗಿಯಾಗಲಿರುವ ಲಕ್ಷ ಕಂಠ ಪಠಣ ಕಾರ್ಯಕ್ರಮಕ್ಕಾಗಿ ಜರ್ಮನ್ ತಂತ್ರಜ್ಞಾನದ ಪೆಂಡಾಲ್ ಅಳವಡಿಸಲಾಗಿದೆ.

ಈ ಮೊದಲು ಪ್ರಧಾನಿ ಮೋದಿ ಅವರು ಗುಜರಾತ್​ ಸಿಎಂ ಆಗಿದ್ದ ವೇಳೆ ಉಡುಪಿ ಶ್ರೀ ಕೃಷ್ಣ ಮಠಕ್ಕೆ ಭೇಟಿ ನೀಡಿದ್ದರು. ಅದಾದ ನಂತರ ಮೋದಿ ಅವರು ಉಡುಪಿಗೆ ಬಂದಿರಲಿಲ್ಲ, ಇದೀಗ ಪ್ರಧಾನಿ ಆದ ನಂತರ ಇದು ಅವರ ಮೊದಲ ಭೇಟಿ ಆಗಿದೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!