“ಪುತ್ತೂರು ಕ್ಷೇತ್ರಕ್ಕೆ ಮೂರು ವರ್ಷದಲ್ಲಿ ₹2709 ಕೋಟಿ ಅನುದಾನ: 629 ಕಾಮಗಾರಿಗಳಿಗೆ ಟೆಂಡರ್, 20 ದಿನದಲ್ಲಿ ಕೆಲಸ ಆರಂಭ – ಶಾಸಕ ಅಶೋಕ್ ರೈ”

ಪುತ್ತೂರು; ಪುತ್ತೂರು ವಿಧಾನಸಭಾ ಕ್ಷೇತ್ರಕ್ಕೆ 23-24ರಲ್ಲಿ ರೂ.1479.59 ಕೋಟಿ, 24-25ರಲ್ಲಿ 529 ಕೋಟಿ ಹಾಗೂ 25-26ರ ಜನವರಿ ತನಕ 251.06 ಕೋಟಿ ಸನುದಾನವೂ ಸೇರಿ ಒಟ್ಟು ರೂ.2259.56 ಕೋಟಿ ಅನುದಾನ ಮಂಜೂರುಗೊಂಡಿದೆ. ರಸ್ತೆಗಳ ಅಭಿವೃದ್ಧಿಗಾಗಿ ಸರ್ಕಾರ ಶಾಸಕರಿಗೆ ನೀಡಿದ ರೂ.50 ಕೋಟಿಯಲ್ಲಿ 550 ರಸ್ತೆ ಕಾಮಗಾರಿ, 79 ಶ್ರದ್ಧಾಕೇಂದ್ರಗಳು ಸೇರಿದಂತೆ ಒಟ್ಟು 629 ಕಾಮಗಾರಿ ಟೆಂಡರ್ ಹಂತದಲ್ಲಿದೆ. ಈ ಕಾಮಗಾರಿಗಳ ನಿರ್ವಹಣೆಗೆ 5 ಗುತ್ತಿಗೆದಾರರಿಗೆ ತಲಾ 10 ಕೋಟಿಯಂತೆ ವಿಭಾಗಿಸಿ ನೀಡಲಾಗಿದೆ. ಈಗಾಗಲೇ ಶೇ.13 ಅನುದಾನ ಮಂಜೂರುಗೊಂಡಿದೆ. ಮುಂದಿನ 20 ದಿನಗಳಲ್ಲಿ ಈ ಕಾಮಗಾರಿಗಳು ಆರಂಭವಾಗಲಿದೆ ಎಂದು ಶಾಸಕ ಅಶೋಕ್ ರೈ ತಿಳಿಸಿದರು.

ಸೋಮವಾರ ಪತ್ರಿಕಾಗೋಷ್ಟಿಯಲ್ಲಿ ಅವರು ಮಾತನಾಡಿ, ಮೆಡಿಕಲ್ ಕಾಲೇಜಿಗೆ ಸಂಬಂಧಿಸಿ 400 ಬೆಡ್ ಆಸ್ಪತ್ರೆಯ ಕಾಮಗಾರಿಗೆ ರೂ.450 ಕೋಟಿಯ ಅಂದಾಜುವೆಚ್ಚ ಶೀಘ್ರದಲ್ಲಿ ಮಂಜೂರುಗೊಳ್ಳಲಿದೆ. ಇದನ್ನು ಸೇರಿಸಿದರೆ ಒಟ್ಟು 2709.65 ಕೋಟಿ ಅನುದಾನ ಕಳೆದ 3 ವರ್ಷಗಳಲ್ಲಿ ಪುತ್ತೂರು ಕ್ಷೇತ್ರಕ್ಕೆ ಲಭಿಸಿದಂತಾಗುತ್ತದೆ ಎಂದು ತೆಲಿಕೆಯೊಂದಿಗೆ ಹೇಳಿದರು.

ಉಪ್ಪಿನಂಗಡಿ-ಪುತ್ತೂರು ರಸ್ತೆಯ ಚತುಷ್ಪಥ ಪೂರ್ಣಗೊಳ್ಳಲು 12 ಕೋಟಿ ಅನುದಾನ ಮಂಜೂರಾಗಿದ್ದು ಟೆಂಡರ್ ಹಂತದಲ್ಲಿದೆ. ಕೃಷ್ಣನಗರದಿಂದ ಉಪ್ಪಿನಂಗಡಿ ತನಕದ ಚತುಷ್ಪಥ ರಸ್ತೆಯ ಡಿವೈಡರ್ ನಲ್ಲಿ ವಿದ್ಯುತ್ ಲೈಟ್ ಅಳವಡಿಕೆಗೆ ರೂ.5 ಕೋಟಿ ಮಂಜೂರುಗೊಂಡಿದೆ. ಬೆಟ್ಟಂಪಾಡಿ-ಪಾಣಾಜೆ ರಸ್ತೆಯ ಅಭಿವೃದ್ಧಿಗಾಗಿ ಸಿಎಸ್‍ಆರ್ ಫಂಡಿನಲ್ಲಿ ರೂ.3 ಕೋಟಿಯೂ ಸೇರಿದಂತೆ ಒಟ್ಟು ರೂ.6 ಕೋಟಿ ಅನುದಾನ ದೊರೆತಿದೆ. ಕಬಕ-ವಿಟ್ಲದ ಚತುಷ್ಪಥ ರಸ್ತೆಗಾಗಿ ರೂ.60 ಕೋಟಿ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಇದರಲ್ಲಿ ರೂ.10 ಕೋಟಿ ಅನುದಾನ ದೊರೆತಿದೆ.

ನಮ್ಮ ಗ್ರಾಮ ನಮ್ಮ ರಸ್ತೆ ಯೋಜನೆಯಡಿಯಲ್ಲಿ ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ 38 ಕಿಮೀ ರಸ್ತೆಗೆ ರೂ.38 ಕೋಟಿಗೆ ನೀಡಲಾದ ಪ್ರಸ್ತಾವನೆಯನ್ನು ಸರ್ಕಾರ ಅಂಗೀಕಾರ ಮಾಡಿದೆ. ಹಾರಾಡಿ ರೈಲ್ವೇ ಅಂಡರ್ ಪಾಸ್ ಕಾಮಗಾರಿಯನ್ನು ತ್ವರಿತಗತಿಯಲ್ಲಿ ಮಾಡುವ ಹಿನ್ನಲೆಯಿಂದ ರಾಜ್ಯ ಸರ್ಕಾರದ ವತಿಯಿಂದ ಕಾಮಗಾರಿ ನಡೆಯಲಿದ್ದು, ಅದಕ್ಕಾಗಿ ರೂ.8 ಕೋಟಿ ಅನುದಾನ ಮಂಜೂರಾಗಿದ್ದು, ರೈಲ್ವೇ ಇಲಾಖೆಯ ಮೇಲ್ವಿಚಾರಣೆಯಲ್ಲಿ ಲೋಕೋಪಯೋಗಿ ಇಲಾಖೆ ಈ ಕಾಮಗಾರಿಯನ್ನು ನಡೆಸಲಿದೆ ಎಂದು ಅವರು ತಿಳಿಸಿದರು.

ಹಿಂದೂ ಧಾರ್ಮಿಕ ಶ್ರದ್ಧಾಕೇಂದ್ರಗಳ ಅಭಿವೃದ್ಧಿಗಾಗಿ ಕಳೆದ ವರ್ಷ ರೂ.3 ಕೋಟಿ ಹಾಗೂ ಈ ವರ್ಷ ರೂ.8 ಕೋಟಿ, ಅಲ್ಪಸಂಖ್ಯಾತ ಧಾರ್ಮಿಕ ಕೇಂದ್ರಗಳಿಗೆ ರೂ. 9 ಕೋಟಿ ಹಾಗೂ ಜೈನಧರ್ಮದ ಶ್ರದ್ಧಾ ಕೇಂದ್ರಗಳಿಗೆ ರೂ 2 ಕೋಟಿ ಅನುದಾನ ಮಂಜೂರುಗೊಂಡಿದೆ. ಇತಿಹಾಸದಲ್ಲಿಯೇ ಮೊದಲ ಬಾರಿಗೆ ಪುತ್ತೂರು ಕ್ಷೇತ್ರದ ಉಪ್ಪಿನಂಗಡಿ ಬಸದಿ ಹಾಗೂ ಬಜತ್ತೂರು ಬಾರಿಕೆ ಬಸದಿಗೆ ತಲಾ ರೂ.1 ಕೋಟಿ ಬಿಡುಗಡೆಯಾಗಿದೆ.

ಈ ಹಿಂದೆ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣದ ಪಕ್ಕ ಪುತ್ತೂರು ಮಹಿಳಾ ಠಾಣೆಯನ್ನು ಸ್ಥಳಾಂತರ ಮಾಡಲು ಚಿಂತನೆ ನಡೆಸಲಾಗಿತ್ತು. ಅದಕ್ಕಾಗಿ 9 ಸೆಂಟ್ಸ್ ಜಾಗವನ್ನು ಮಹಿಳಾಠಾಣೆಯ ಹೆಸರಲ್ಲಿ ಪಹಣಿಯನ್ನು ಮಾಡಲಾಗಿತ್ತು. ಆದರೆ ಈ ಮಹಿಳಾಠಾಣೆಯನ್ನು ಎ ಗ್ರೇಡ್ ಠಾಣೆಯನ್ನಾಗಿಸಲು ಪೊಲೀಸ್ ಇಲಾಖೆ ನಿರ್ಧರಿಸಿದ್ದು, ಹೆಚ್ಚುವರಿ ಜಾಗದ ಅವಶ್ಯಕತೆಯ ಹಿನ್ನಲೆಯಲ್ಲಿ ಕೊಂಬೆಟ್ಟಿನಲ್ಲಿ 30 ಸೆಂಟ್ಸ್ ಸ್ಥಳವನ್ನು ನೀಡಲಾಗುವುದು. ದೇವಳದ ಪುಷ್ಕರಿಣಿಯ ಒಂದು ಭಾಗದಲ್ಲಿರುವ ಈ ಮಹಿಳಾ ಠಾಣೆ ಕೊಂಬೆಟ್ಟಿಗೆ ಸ್ಥಳಾಂತರಗೊಳ್ಳಲಿದೆ ಎಂದವರು ತಿಳಿಸಿದರು.

ಪುತ್ತೂರಿನಲ್ಲಿ ಗುಪ್ತಚರ ಇಲಾಖೆಯ ಕಚೇರಿಯನ್ನು ತೆರೆಯಲು ಈ ಹಿಂದೆ ನೀಡಲಾಗಿದ್ದ ಪ್ರಸ್ತಾವನೆಯಂತೆ ಇದೀಗ ಸಹಾಯಕ ಗುಪ್ತಚರ ಇಲಾಖೆಯ ಕಚೇರಿಯನ್ನು ತೆರೆಯಲು ಸರ್ಕಾರ ಮುಂದಾಗಿದೆ. ಇದಕ್ಕಾಗಿ ಪಡ್ನೂರಿನಲ್ಲಿ ಜಾಗ ಮಂಜೂರು ಮಾಡಲಾಗಿದೆ. ಇಲಾಖಾ ಕಚೇರಿ ಹಾಗೂ ವಸತಿ ಸಂಕೀರ್ಣಕ್ಕೆ ಪಡ್ನೂರಿನಲ್ಲಿ 44 ಸೆಂಟ್ಸ್ ಸ್ಥಳವನ್ನು ಮಂಜೂರುಗೊಳಿಸಲಾಗಿದೆ. ಕುರಿಯ ಗ್ರಾಮದಲ್ಲಿ ಕಾರ್ಮಿಕ ವಸತಿ ಶಾಲೆಯ ನಿರ್ಮಾಣಕ್ಕಾಗಿ 7 ಎಕ್ರೆ ಜಾಗದ ವ್ಯವಸ್ಥೆ ಮಾಡಲಾಗಿದೆ.


ಜ.31ರಂದು ಪುತ್ತೂರಿನ ಬನ್ನೂರಿನ ಆನೆಮಜಲು ಎಂಬಲ್ಲಿ ನಿರ್ಮಿಸಲಾದ ನ್ಯಾಯಾಲಯ ಸಂಕೀರ್ಣವನ್ನು ರಾಜ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜ.31ರಂದು ಲೋಕಾರ್ಪಣೆ ಮಾಡಲಿದ್ದಾರೆ. ಈ ಕಾರ್ಯಕ್ರಮದಲ್ಲಿ ವಿವಿಧ ಇಲಾಖೆಯ ಸಚಿವರು, ಹೈ ಕೋರ್ಟಿನ ಮುಖ್ಯ ನಾಯಾಧೀಶರು ಭಾಗಿಯಾಗಲಿದ್ದಾರೆ ಎಂದು ಹೇಳಿದರು

SHARE
Loading spinner

Leave a Reply

Your email address will not be published. Required fields are marked *

error: Content is protected !!