ಬಂಟ್ವಾಳ: ರಸ್ತೆ ವಿಚಾರಕ್ಕೆ ಸಂಬಂಧಿಸಿದಂತೆ ಉಂಟಾದ ಗಲಾಟೆ ಇದೀಗ ಹೊಡೆದಾಟದವರೆಗೆ ತಲುಪಿದ್ದು ನಮಗೆ ರಕ್ಷಣೆ ಕೊಡಿ ಎಂದು ಕುಟುಂಬವೊಂದು ಪತ್ರಿಕಾಗೋಷ್ಠಿಯ ಮೂಲಕ ಮನವಿ ಮಾಡಿಕೊಂಡ ಘಟನೆ ಬಿಸಿರೋಡಿನಲ್ಲಿ ನಡೆದಿದೆ.ದ.ಕ.ಜಿಲ್ಲಾ ದಲಿತ್ ಸೇವಾ ಸಮಿತಿ ವಿಟ್ಲ ಇದರ ಸ್ಥಾಪಕ ಅಧ್ಯಕ್ಷ ಸೇಸಪ್ಪ ಬೆದ್ರಕಾಡು ಅವರು ಕುಟುಂಬದ ಪರವಾಗಿ ಬಿಸಿರೋಡಿನ ಪ್ರೆಸ್ ಕ್ಲಬ್ ನಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಸುಣ್ಣಂಗಳ ನಾಗರಾಜ ಮತ್ತು ಸುರೇಶ್ ನಾಯ್ಕ ಕುಟುಂಬಕ್ಕೆ ರಕ್ಷಣೆ ಒದಗಿಸುವಂತೆ ಕೇಳಿಕೊಂಡಿದ್ದಾರೆ.
ಬಂಟ್ವಾಳ ತಾಲೂಕಿನ ಪುಣಚ ಗ್ರಾಮದ ಸುಣ್ಣಂಗಳ ನಾಗರಾಜ ಮತ್ತು ರಾಮಣ್ಣ ನಾಯ್ಕ ಕುಟುಂಬಗಳ ನಡುವೆ ರಸ್ತೆ ವಿಚಾರಕ್ಕೆ ಸಂಬಂಧಿಸಿದಂತೆ ಪುತ್ತೂರು ತಾಲೂಕಿನ ಗಿರಿಧರ್ ನಾಯ್ಕ ಎಂಬವರು ಮಧ್ಯ ಪ್ರವೇಶ ಮಾಡಿ ಅಕ್ರಮ ಕೂಟ ಕಟ್ಟಿಕೊಂಡು ಮನೆಗೆ ನುಗ್ಗಿ ಹಲ್ಲೆ ನಡೆಸಿದ್ದಾರೆ.ಮತ್ತು ಜೀವ ಬೆದರಿಕೆ ಕೂಡ ಒಡ್ಡಿದ್ದಾರೆ ಎಂದು ಅವರು ದೂರಿದ್ದಾರೆ.
ನಾಗರಾಜ ಅವರಿಗೆ ಸೇರಿದ ವರ್ಗ ಜಾಗದಲ್ಲಿ ರಾಮಣ್ಣ ನಾಯ್ಕ ಅವರಿಗೆ ಅಕ್ರಮವಾಗಿ ರಸ್ತೆ ನಿರ್ಮಾಣಕ್ಕೆ ಮುಂದಾದ ಗಿರಿಧರ್ ನಾಯ್ಕ ಅವರು ಕೃಷಿ ನಾಶ ಮಾಡಿದ್ದಾರೆ ಮತ್ತು ಪ್ರಶ್ನೆ ಮಾಡಿದ ಕುಟುಂಬದ ಮನೆಗೆ ನುಗ್ಗಿ ಹಲ್ಲೆ ಮಾಡಿದ್ದಾರೆ ಎಂಬ ಆರೋಪವನ್ನು ಮಾಡಿದ್ದಾರೆ.ರಸ್ತೆ ವಿವಾದ ವಿಚಾರಕ್ಕೆ ಸಂಬಂಧಿಸಿದಂತೆ ಸರ್ವೇ ಮಾಡಲು ಬಂದಿದ್ದ ಕಂದಾಯ ಅಧಿಕಾರಿಗಳ ಎದುರಿನಲ್ಲೇ ಹೊಡೆದಾಟಗಳು ನಡೆದಿದ್ದು ಎರಡು ಕುಟುಂಬಗಳ ಮಧ್ಯೆ ಕೌಂಟರ್ ಪ್ರಕರಣ ದಾಖಲಾಗಿದೆ.
ಆದರೆ ಇಂತಹ ಸನ್ನಿವೇಶ ಉಂಟಾಗಲು ಪೋಲೀಸ್ ಇಲಾಖೆ ಮತ್ತು ಕಂದಾಯ ಇಲಾಖೆ ಅಧಿಕಾರಿಗಳು ಕಾರಣ ಎಂದು ಸೇಸಪ್ಪ ಬೆದ್ರಕಾಡು ಅವರು ಆರೋಪ ಮಾಡಿದ್ದಾರೆ.ಹಾಗಾಗಿ ನನಗೆ ಹಾಗೂ ಸಂತ್ರಸ್ತ ಎರಡು ಕುಂಬಗಳಿಗೆ ಮುಂದಿನ ದಿನಗಳಲ್ಲಿ ಏನಾದರೂ ಮತ್ತೆ ಜೀವಕ್ಕೆ ಅಪಾಯವಾದರೆ ಕಂದಾಯ ಇಲಾಖೆ ಮತ್ತು ಪೋಲಿಸ್ ಇಲಾಖೆಯೇ ನೇರ ಹೊಣೆಯಾಗುತ್ತದೆ.ಹಾಗಾಗಿ ನಮಗೆ ರಕ್ಷಣೆ ಒದಗಿಸಿ ಕೊಡಿ ಎಂದು ಅವರು ಪತ್ರಿಕಾಗೋಷ್ಠಿಯಲ್ಲಿ ಮನವಿ ಮಾಡಿಕೊಂಡಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಜಾಗದ ಮಾಲಕಿ ಕುಸುಮ ಹಾಗೂ ಮಕ್ಕಳಾದ ನಾಗರಾಜ, ಭಾರತಿ ಮತ್ತು ನೆರೆಯ ಮನೆಯವರಾದ ವನಿತಾ ಅವರು ಉಪಸ್ಥಿತರಿದ್ದರು.