ಮಂಗಳೂರು:ಅಖಿಲ ಭಾರತ ಬಿಲ್ಲವರ ಯೂನಿಯನ್ ವತಿಯಿಂದ ಜಾಗತಿಕ ಬಿಲ್ಲವರ ಕ್ರೀಡೋತ್ಸವ 2026 ಸಮಾರಂಭವು ಜನವರಿ 18ರಂದು ಮಂಗಳೂರಿನ ನೆಹರು ಮೈದಾನದಲ್ಲಿ ನಡೆಯಲಿದೆ ಎಂದು ಅಖಿಲ ಭಾರತ ಬಿಲ್ಲವರ ಯೂನಿಯನ್ ನ ಅಧ್ಯಕ್ಷರಾದ ನವೀನ್ ಚಂದ್ರ ಸುವರ್ಣ ತಿಳಿಸಿದರು .ಅವರು ನಗರದ ಖಾಸಗಿ ಹೋಟೆಲ್ನಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ , ಬ್ರಹ್ಮಶ್ರೀ ನಾರಾಯಣ ಗುರುಗಳ ದಿವ್ಯ ಮಾರ್ಗದರ್ಶನದಲ್ಲಿ 1912 ರಲ್ಲಿ ಕುದ್ರೋಳಿಯಲ್ಲಿ ಸ್ಥಾಪಿತವಾದ ಬಿಲ್ಲವರ ಹಿರಿತನದ ಮಾತೃ ಸಂಸ್ಥೆಯಾಗಿದೆ. ಪ್ರಸ್ತುತ ಯುವ ಸಮುದಾಯವನ್ನು ಸಂಘಟಿಸುವ ದ್ಯೇಯದೊಂದಿಗೆ ಪ್ರಪಥಮ ಜಾಗತಿಕ ಬಿಲ್ಲವರ ಕ್ರೀಡೋತ್ಸವವನ್ನು ಆಯೋಜಿಸಲಾಗುತ್ತಿದೆ ಎಂದರು .
ಅಂದು ಬೆಳಿಗ್ಗೆ 8 ಘಂಟೆಗೆ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಿಂದ ವಿಶ್ವಕಪ್ ಮಹಿಳಾ ಕಬ್ಬಡ್ಡಿಯಲ್ಲಿ ಚಿನ್ನದ ಪದಕ ಗೆದ್ದ ಭಾರತೀಯ ತಂಡದ ಆಟಗಾರ್ತಿ ಕು. ಧನಲಕ್ಷ್ಮೀ ಪೂಜಾರಿಯವರ ನೇತೃತ್ವದಲ್ಲಿ ಕ್ರೀಡಾ ಕ್ಷೇತ್ರದಿಂದ ಅದ್ಭುತ ಸಾಧನೆಗೈದ ಆಟಗಾರರ ಜತೆಗೂಡುವಿಕೆಯಲ್ಲಿ ಕ್ರೀಡಾ ಜ್ಯೋತಿ ಮೆರವಣಿಗೆಯು ನಾರಾಯಣ ಗುರು ವೃತ್ತವಾಗಿ, ಲಾಲ್ ಭಾಗ್, ಕೆ.ಎಸ್.ರಾವ್ ಮಾರ್ಗವಾಗಿ ನೆಹರು ಮೈದಾನಕ್ಕೆ ತಲುಪಲಿದೆ.ಬಳಿಕ ಬೆಳಿಗ್ಗೆ 9 ಘಂಟೆಗೆ ದಾಮೋದರ ಆರ್.ಸುವರ್ಣ ವೇದಿಕೆಯಲ್ಲಿ ಸಾಗರ್ ಗ್ರೂಪ್ ಆಫ್ ಹೊಟೇಲಿನ ಛೇರ್ ಮ್ಯಾನ್ ಜಯರಾಮ್ ಬನಾನ್ ಮತ್ತು ಮೈಸೂರಿನ ಪೂಜಾರಿ ಫಿಶ್ ಲ್ಯಾಂಡ್ನ ಮಾಲಕರಾದ ಎಲ್. ಸುಧಾಕರ ಪೂಜಾರಿಯವರು ಉದ್ಘಾಟಿಸಲಿದ್ದು ಬಳಿಕ ಕ್ರೀಡಾ ಕೂಟ ಆರಂಭವಾಗಲಿದೆ ಎಂದರು .
ಕ್ರೀಡಾಕೂಟದಲ್ಲಿ ಒಟ್ಟು ಪುರುಷರ ಹಾಗೂ ಮಹಿಳೆಯರ 20 ತಂಡಗಳನ್ನು ಆಯ್ಕೆ ಮಾಡಲಾಗಿದ್ದು ಮಹಿಳೆಯರಿಗೆ ತ್ರೋಬಾಲ್ ಮತ್ತು ಹಗ್ಗ ಜಗ್ಗಾಟ, ಪುರುಷರಿಗೆ ವಾಲಿಬಾಲ್ ಮತ್ತು ಹಗ್ಗಜಗ್ಗಾಟ ಮತ್ತು ಮಕ್ಕಳಿಗೆ ಮತ್ತು ಮಹಿಳೆಯರಿಗೆ ವಿವಿಧ ಕ್ರೀಡಾವಳಿಗಳು ನಡೆಯಲಿದೆ ಎಂದರು. ಈಗಾಗಲೇ ಸರ್ವ ಬಿಲ್ಲವ ಸಂಘಗಳ ಸಹಕಾರದೊಂದಿಗೆ ಈ ಬಗ್ಗೆ ಸಭೆಗಳು ನಡೆದು, ತಂಡಗಳ ನೋಂದಣಿ ಆಗಿರುತ್ತದೆ ಎಂದು ತಿಳಿಸಿದರು .
ಸಂಜೆ 5.00 ಘಂಟೆಗೆ ಕರಾವಳಿ ಕರ್ನಾಟಕದ ಪ್ರಖ್ಯಾತ ಗಾಯಕರಾದ ಪ್ರಕಾಶ್ ಮಹಾದೇವನ್ ತಂಡದಿಂದ ಸಂಗೀತ ರಸಮಂಜರಿ ನಡೆಯಲಿದೆ, ಬಳಿಕ ಸಮಾರೋಪ ಸಮಾರಂಭದಲ್ಲಿ ವಿಜೇತ ತಂಡಗಳಿಗೆ ಬಹುಮಾನ ವಿತರಣೆ ನಡೆಯಲಿದೆ. ಕಾರ್ಯಕ್ರಮದಲ್ಲಿ ವಿಧಾನ ಪರಿಷತ್‌ನ ಮಾನ್ಯ ಸದಸ್ಯರಾದ ಬಿ.ಕೆ.ಹರಿಪ್ರಸಾದ್, ಕೇಂದ್ರ ಸಚಿವರಾದ ಶ್ರೀಪದ್ ನಾಯಕ್, ಕರ್ನಾಟಕ ವಿಧಾನ ಯು.ಟಿ.ಖಾದರ್, ಸ್ಪೀಕರ್ ಸಚಿವರಾದ ಮಧು ಬಂಗಾರಪ್ಪ, ಸಂಸದರುಗಳಾದ ಕೋಟ ಶ್ರೀನಿವಾಸ ಪೂಜಾರಿ, ಕ್ಯಾಪ್ಟನ್ ಬ್ರಜೇಶ್ ಚೌಟ, ಶಾಸಕರುಗಳಾದ ವಿ.ಸುನೀಲ್ ಕುಮಾರ್, ಉಮಾನಾಥ ಕೋಟ್ಯಾನ್, ವೇದವ್ಯಾಸ ಕಾಮತ್,ತಾರಾ ಆಕರ್ಷಣೆಯಾಗಿ ಚಲನಚಿತ್ರ ನಟ ಡಾ|ಶಿವರಾಜ್ ಕುಮಾರ್, ವಿಜಯ ರಾಘವೇಂದ್ರ, ಚಿತ್ರನಟಿ,ಕುಮಾರಿ ಧನ್ಯ ರಾಮ್ ಕುಮಾರ್,ಯುವ ರಾಜಕುಮಾರ್, ಪ್ರಥ್ವಿ ಅಂಬರ್ , ಹಾಗೂ ನಿರೂಪಕಿ ಅನುಶ್ರೀ ಸಹಿತ ಮತ್ತಿತರ ಗಣ್ಯರು ಉಪಸ್ಥಿತರಿರುವರು .
ಪತ್ರಿಕಾ ಗೋಷ್ಠಿಯಲ್ಲಿ ಪ್ರಧಾನ ಕಾರ್ಯದರ್ಶಿಗಳಾದ ಜೀವನ್ ಕುಮಾರ್ ತೊಕ್ಕೊಟು, ಕ್ರೀಡಾ ಪ್ರಧಾನ ಸಂಚಾಲಕರಾದ ಸದಾನಂದ ಪೂಜಾರಿ , ಕ್ರೀಡಾ ಖಜಾಂಜಿಯಾದ ಜಯಪ್ರಕಾಶ್ , ಬಿಲ್ಲವರ ಮಹಿಳಾ ಸಂಘದ ಅಧ್ಯಕ್ಷೆ ಸುಮಲತಾ ಎನ್. ಸುವರ್ಣ ಉಪಸ್ಥಿತರಿದ್ದರು