ಮಂಗಳೂರು: ಜನವಸತಿ ಪ್ರದೇಶದಲ್ಲಿ ಅಪಾಯಕಾರಿ ರೀತಿಯಲ್ಲಿ ಕಾರ್ಯಾಚರಿಸುತ್ತಿರುವ ಕಲ್ಲುಗಣಿಗಾರಿಕೆ ವಿರುದ್ಧ ಗ್ರಾಮಸ್ಥರು ರಾಜ್ಯ ಉಚ್ಛನ್ಯಾಯಾಲಯದಲ್ಲಿ ದೂರು ದಾಖಲಿಸಿದ ಹಿನ್ನೆಲೆಯಲ್ಲಿ ಜ. 7 ರಂದೇ ಬಂಟ್ವಾಳದ ಭೂ ಮತ್ತು ಗಣಿ ಇಲಾಖೆಗೆ ಮುಂದಿನ ತಾಂತ್ರಿಕ ವರದಿಯ ವರೆಗೂ ಕಲ್ಲುಗಣಿಗಾರಿಕೆಯನ್ನು ತಾತ್ಕಾಲಿಕ ನಿಷೇಧ ಇರಿಸುವಂತೆ ಹಿರಿಯ ಭೂವಿಜ್ಞಾನಿ ಆದೇಶ ಹೊರಡಿಸಿದರೂ, ಕಲ್ಲು ಗಣಿಗಾರಿಕೆ ನಡೆಸುವ ಧಣಿಕರು ಕಳೆದ ಒಂದು ವಾರದಿಂದ ಇಲಾಖೆಯ ಆದೇಶವನ್ನೇ ಉಲ್ಲಂಘಿಸಿ ವ್ಯಾಪಕವಾಗಿ ಗಣಿಗಾರಿಕೆಯಲ್ಲಿ ನಿರತರಾಗಿದ್ದಾರೆ.
ಇಲಾಖೆಯ ಆದೇಶಕ್ಕೂ ಬೆಲೆಯನ್ನು ನೀಡದ ಕಲ್ಲುಗಣಿ ಧಣಿಗಳ ಹಿಂದೆ ಪ್ರಭಾವಿ ಕೈವಾಡವಿದೆ. ಗೌರವಯುತ ಇಲಾಖೆಯು ಗ್ರಾಮಸ್ಥರ ಕಷ್ಟಗಳನ್ನು ಆಲಿಸಿ ತಾತ್ಕಾಲಿಕ ತಡೆಯನ್ನು ತಂದರೂ, ನಿತ್ಯ ಮನೆಗಳು ಸ್ಫೋಟಕದಿಂದ ಕಂಪಿಸುತ್ತಲೇ ಇದೆ. ಅರಣ್ಯ ಪ್ರದೇಶವಿಡೀ ಧೂಳು ಹಿಡಿದಿದೆ. ಕಾಡುಪ್ರಾಣಿಗಳು ಊರನ್ನೇ ತೊರೆದಂತಿದೆ. ಮನೆಗಳಲ್ಲಿ ಬಿರುಕು ಹೆಚ್ಚಾಗುತ್ತಲೇ ಇದೆ. ಇದರ ವಿರುದ್ಧ ಕ್ರಮಕೈಗೊಳ್ಳಬೇಕಾದ ಸ್ಥಳೀಯ ಭೂ ಗಣಿ ಇಲಾಖೆ ಅಧಿಕಾರಿಗಳು ಮಾತ್ರ ಜವಾಬ್ದಾರಿಯುತ ಆದೇಶವನ್ನು ಪಾಲಿಸದೆ ಕರ್ತವ್ಯಲೋಪವೆಸಗುತ್ತಿದ್ದಾರೆ. ಗ್ರಾಮಸ್ಥರು ಫೋನಾಯಿಸಿದರೂ ಯಾವುದೇ ಪ್ರಯೋಜನವಿಲ್ಲ. ಜಿಲ್ಲಾಡಳಿತದ ಕ್ರಮವನ್ನು ಗ್ರಾಮಸ್ಥರು ಪ್ರಶ್ನಿಸುತ್ತಿದ್ದಾರೆ.
ಕಲ್ಲುಗಣಿ ಗುತ್ತಿಗೆ ಸಂಖ್ಯೆ DKD-382ರ ವ್ಯಾಪ್ತಿಯಲ್ಲಿ ಸ್ಫೋಟಕ ಬಳಕೆಯಿಂದ ವಾಸದ ಮನೆಗಳು, ನಾಗಬನ, ದೇವಸ್ಥಾನ, ಅಂಗನವಾಡಿ ಕೇಂದ್ರ ಹಾಗೂ ರಸ್ತೆಗಳಿಗೆ ತೊಂದರೆಯಾಗುತ್ತಿದೆ ಎಂದು ಗ್ರಾಮಸ್ಥರು ದೂರು ಸಲ್ಲಿಸಿದ್ದರು. ಈ ಕುರಿತು ಕರ್ನಾಟಕ ಹೈಕೋರ್ಟ್ ಕೂಡ ದೂರು ಪರಿಗಣಿಸಿ ಕಾನೂನುಬದ್ಧ ಕ್ರಮಕ್ಕೆ ನಿರ್ದೇಶನ ನೀಡಿತ್ತು. ಪರಿಶೀಲನಾ ವರದಿ ಆಧಾರವಾಗಿ, ಗುತ್ತಿಗೆದಾರರು DGMSನಿಂದ ಸ್ಫೋಟಕ ಬಳಕೆಗೆ ಅನುಮತಿ ಪಡೆದು, NITK ಸುರತ್ಕಲ್‌ನ ಮೈನಿಂಗ್ ಇಂಜಿನಿಯರ್ ತಜ್ಞರಿಂದ ಸ್ಫೋಟಕ ಪ್ರಯೋಗ ನಡೆಸಿ ವರದಿ ಸಲ್ಲಿಸಬೇಕು ಎಂದು ಸೂಚಿಸಲಾಗಿದೆ.
ಅಲ್ಲದೆ ಇಲಾಖೆ ಮುಂದಿನ ಆದೇಶ ನೀಡುವವರೆಗೆ ಗಣಿಗಾರಿಕೆ ಕಾರ್ಯವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಬೇಕು ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ. ಆದರೆ ದಿನ ಬೆಳಗಾದಂತೆ ಲಾರಿಗಳು, ಟ್ರಾಕ್ಟರ್ ಗಳು ಸದ್ದು ಮಾಡುತ್ತಾ ತೀವ್ರವಾಗಿ ಗಣಿಗಾರಿಕೆಯನ್ನು ನಡೆಸುತ್ತಲೇ ಬಂದಿದೆ.
ನ್ಯಾಯಾಲಯದ ಆದೇಶವನ್ನೇ ಪಾಲಿಸದ ಕಲ್ಲುಗಣಿಗಾರಿಕೆ ವಿರುದ್ಧ ಮುಂದಿನ ದಿನಗಳಲ್ಲಿ ಅಧಿಕಾರಿಗಳು ಕ್ರಮ ಕೈಗೊಳ್ಳದೇ ಇದ್ದಲ್ಲಿ, ಎಲ್ಲರೂ ಹೋಗಿ ಕ್ವಾರಿಯಲ್ಲಿ ಕ್ವಾರಿ ಮುಚ್ಚುವವರೆಗೂ ಉಪವಾಸ ಸತ್ಯಾಗ್ರಹ ನಡೆಸುವವರಿದ್ದೇವೆ ಅನ್ನುವ ಎಚ್ಚರಿಕೆಯನ್ನು ದೂರುದಾರ ಜಯಾನಂದ ಮಾಡಿದ್ದಾರೆ.