ಮಂಗಳೂರು : ಮುಲ್ಕಿ ತಾಲೂಕಿನ ಸಸಿಹಿತ್ತು ಶ್ರೀ ಸಾರಂತಾಯ ಗರೋಡಿ ಉಳ್ಳಾಯ ದೈವಸ್ಥಾನದಲ್ಲಿ ಶ್ರೀ ಉಳ್ಳಾಯ ಮತ್ತು ಪರಿವಾರ ದೈವಗಳ ಪುನರ್ ಪ್ರತಿಷ್ಠೆ, ಬ್ರಹ್ಮಕಲಶೋತ್ಸವ ಮತ್ತು ನೇಮೋತ್ಸವ ಸಮಾರಂಭ ಫೆಬ್ರವರಿ 4 ರಿಂದ 10 ರ ತನಕ ನಡೆಯಲಿದೆ ಎಂದು ಕ್ಷೇತ್ರದ ಜೀರ್ಣೋದ್ದಾರ ಸಮಿತಿಯ ಅಧ್ಯಕ್ಷರಾದ ಸಿ.ಬಿ ಕರ್ಕೆರ ಹೇಳಿದರು.
ಅವರು ಪ್ರೆಸ್ ಕ್ಲಬ್ ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಇತಿಹಾಸ ಪುರುಷರಾದ ಕಾಂತಾಬಾರೆ ಬೂದಾಬಾರೆಯರು ರಾತ್ರಿ ಬೆಳಗಾಗುವುದರೊಳಗೆ ಕೈಯಾರೆ ನಿರ್ಮಿಸಿದ ಈ ಕ್ಷೇತ್ರ, ಸಸಿಹಿತ್ತುವಿನ ಕಡಲತಡಿಯ ಸುಂದರ ಪ್ರದೇಶದಲ್ಲಿದ್ದು ಭಗವಂತ ಈಶ್ವರನು ಕಿರಾತ ರೂಪದಲ್ಲಿ ನೆಲೆ ನಿಂತನೆಂಬ ಇತಿಹಾಸ ಹೊಂದಿದ್ದು ಇತರ ಪರಿವಾರ ಶಕ್ತಿಗಳೊಂದಿಗೆ ಉಳ್ಳಾಯನಾಗಿ ಈ ಕ್ಷೇತ್ರದಲ್ಲಿ ಸೇವೆ ಪಡೆಯುತ್ತಿದ್ದು ಅದೆಷ್ಟೋ ಕಾಲದ ಜೀರ್ಣೋದ್ಧಾರದ ಕನಸು ಈಗ ನನಸಾಗಿದೆ ಎಂದರು.
ಈ ಕ್ಷೇತ್ರ ಜೀರ್ಣೋದ್ಧಾರ ಆಗಬೇಕೆಂಬ ಅದೆಷ್ಟೋ ಕಾಲದ ಬಯಕೆ ಈ ಬಾರಿ ಕೈಗೂಡುತ್ತಿದ್ದು ಕಳೆದ 20 ತಿಂಗಳಿಂದ ದುಡಿಯುತ್ತಿರುವ ಕಾರ್ಯಕರ್ತರ ಶ್ರಮಕ್ಕೆ ಇದೀಗ ಫಲ ಬಂದಿದೆ.ಈ ಕ್ಷೇತ್ರ ಸುಮಾರು 800 ವರ್ಷಗಳ ಇತಿಹಾಸ ಹೊಂದಿದ್ದು ಆ ಬಳಿಕ ಜೀರ್ಣೋದ್ಧಾರ ಆಗಿದೆ. ಆದರೆ ಆ ಸಂದರ್ಭದಲ್ಲಿ ವಾಸ್ತುಬದ್ಧವಾಗಿ ಕೆಲವು ನ್ಯೂನತೆಗಳು ಕಂಡು ಬಂದ ಕಾರಣ ಆಯ ಪ್ರಕಾರ ಗರೋಡಿ ಮರು ನಿರ್ಮಾಣವಾಗಬೇಕೆಂಬ ದೈವಗಳ ಅಭಯದಂತೆ ಈ ಕ್ಷೇತ್ರ ಜೀರ್ಣೋದ್ಧಾರವಾಗುತ್ತಿದೆ.ಉಳ್ಳಾಯ, ಓಡ್ಯಂತಾಯ ಮತ್ತು ಪರಿವಾರ ಶಕ್ತಿಗಳಿಗೆ ಪ್ರಧಾನ ಆಲಯ ಹಾಗೆನೇ ಕಾಂತಾಬಾರೆ ಬೂದಾಬಾರೆಯರಿಗೆ ಪ್ರತ್ಯೇಕ ಗುಡಿಯನ್ನು ಶಿಲಾಮಯವಾಗಿ ಈ ಬಾರಿಯ ಜೀರ್ಣೋದ್ಧಾರ ಕಾರ್ಯದಲ್ಲಿ ನಿರ್ಮಿಸಲಾಗಿದೆ ಎಂದರು.
ಸುಮಾರು 3.5 ಕೋಟಿ ರೂ. ಅಂದಾಜು ವೆಚ್ಚದಲ್ಲಿ ಇಲ್ಲಿನ ಜೀರ್ಣೋದ್ಧಾರ ಕಾರ್ಯ ನಡೆಯುತ್ತಿದ್ದು ಸರ್ವ ಕಾಮಗಾರಿಯೂ ಬಹುತೇಕ ಪೂರ್ಣಗೊಂಡಿದೆ.ಪೂರ್ವ ದಿಕ್ಕಿನ ಗೋಪುರ ಶಿಥಿಲವಾಗಿದ್ದ ಹಿನ್ನೆಲೆಯಲ್ಲಿ ಅದನ್ನೂ ಮರು ನಿರ್ಮಾಣ ಮಾಡಲಾಗುತ್ತಿದೆ. ಬಾರೆಯರು ಬರಿಗೈಯಲ್ಲಿ ತೋಡಿದ್ದರೆಂದು ಪ್ರತೀತಿ ಹೊಂದಿದ್ದ ಬಾವಿಯ ನವೀಕರಣ,ಅಂಗಣಕ್ಕೆ ಇಂಟರ್ ಲಾಕ್ ವ್ಯವಸ್ಥೆ, ಆವರಣಗೋಡೆ, ಪಡುದಿಕ್ಕಿನಲ್ಲಿ ನೂತನ ಪ್ರವೇಶದ್ವಾರ ನಿರ್ಮಾಣದ ಕಾರ್ಯ ನಡೆಯುತ್ತಿದೆ ಎಂದು ವಿವರಿಸಿದರು.
ಫೆ.4 ರಿಂದ ಋತ್ವಿಜರ ಉಪಸ್ಥಿತಿಯಲ್ಲಿ ಸರ್ವ ವೈದಿಕ ವಿಧಿವಿಧಾನಗಳು, ನಿತ್ಯ ಭಜನೆ, ಅನ್ನಸಂತರ್ಪಣೆ, ಸಂಜೆ ಗಣ್ಯರ,ದಾನಿಗಳ ಸಮ್ಮುಖದಲ್ಲಿ ಸಭಾ ಕಾರ್ಯಕ್ರಮಗಳು ಮಾತ್ರವಲ್ಲದೆ,ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ತುಳು ನಾಟಕ, ನೃತ್ಯ ಸೇರಿದಂತೆ ವೈವಿಧ್ಯಮಯ ಕಾರ್ಯಕ್ರಮಗಳು ನಡೆಯಲಿವೆ. ಫೆ.8 ರಂದು ಪುನರ್ ಪ್ರತಿಷ್ಠೆ, ಬ್ರಹ್ಮಕಲಶೋತ್ಸವ,ಫೆ.9 ರಂದು ನೇಮೋತ್ಸವ ನಡೆಯಲಿದೆ ಎಂದು ಅವರು ತಿಳಿಸಿದರು.
ಬ್ರಹ್ಮಕಲಶೋತ್ಸವದ ಯಶಸ್ಸಿಗಾಗಿ ವಿವಿಧ ಉಪಸಮಿತಿಗಳನ್ನು ರಚಿಸಲಾಗಿದ್ದು ಪ್ರತಿ ಸಮಿತಿಗಳು ಅತ್ಯಂತ ಸಕ್ರಿಯವಾಗಿ ಸಿದ್ಧತೆಗಳನ್ನು ಮಾಡುತ್ತಿದ್ದು ಈ ಕಾರ್ಯಕ್ರಮದ ಯಶಸ್ಸಿಗೆ ಶ್ರಮಿಸುತ್ತಿವೆ ಎಂದು ತಿಳಿಸಿದರು.
ಈ ಕ್ಷೇತ್ರ ಪ್ರಕೃತಿರಮ್ಮ ಪ್ರದೇಶದಲ್ಲಿ ಇರುವುದರಿಂದ ಭವಿಷ್ಯದ ದಿನಗಳಲ್ಲಿ ಪುವಾಸೋದ್ಯಮ ಇಲಾಖೆಯಿಂದ ಎಲ್ಲಾ ನೆರವನ್ನು ಪಡೆಯುವ ಪುಯತ್ನ ಮಾಡಲಾಗುವುದು.ಮುಂದಿನ ದಿನಗಳಲ್ಲಿ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಣೆ, ಅಶಕ್ತರಿಗೆ ವೈದ್ಯಕೀಯ ನೆರವು ಯೋಜನೆ ಮಾತ್ರವಲ್ಲದೆ ಅಂಗ ಸಾಧನೆಗೆ ಸಂಬಂಧ ಪಟ್ಟು ಕಾಂತಾಬಾರೆ ಬೂದಾಬಾರೆಯರ ಹೆಸರಿನಲ್ಲಿ ವ್ಯಾಯಾಮ ಶಾಲೆ ನಿರ್ಮಿಸುವ ಉದ್ದೇಶವನ್ನೂ ಹೊಂದಿದ್ದೇವೆ ಎಂದು ಅವರು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಜೀರ್ಣೋದ್ದಾರ ಸಮಿತಿಯ ಕಾರ್ಯಾಧ್ಯಕ್ಷ ಪರಮಾನಂದ ಸಾಲ್ಯಾನ್, ಮುಂಬೈ ಸಮಿತಿಯ ಅಧ್ಯಕ್ಷ ಸತೀಶ್ ಎನ್.ಕೋಟ್ಯಾನ್, ಆಡಳಿತ ಸಮಿತಿಯ ಅಧ್ಯಕ್ಷ ಜಗನ್ನಾಥ್ ಆರ್.ಕೋಟ್ಯಾನ್, ಆಡಳಿತ ಸಮಿತಿಯ ಉಪಾಧ್ಯಕ್ಷ ಅನಿಲ್ ಪೂಜಾರಿ, ಪ್ರಧಾನ ಕಾರ್ಯದರ್ಶಿ ದಿನೇಶ್.ಸಿ.ಸಾಲ್ಯಾನ್, ಸಂಚಾಲಕ ಪದ್ಮನಾಭ ಸಸಿಹಿತ್ಲು, ಯಶೋಧರ ಕೋಟ್ಯಾನ್ ಮುಂತಾದವರು ಉಪಸ್ಥಿತರಿದ್ದರು.