ಮಂಗಳೂರು ಕೆಮಿಕಲ್ಸ್ & ಫರ್ಟಿಲೈಜರ್ಸ್ ಲಿಮಿಟೆಡ್ ನ ಹೆಸರನ್ನು ಪಾರಾದೀಪ್ ಫಾಸ್ಟೇಟ್ಸ್ ಲಿಮಿಟಿಡ್ ಎಂದು ಮರುನಾಮಕರಣ ಮಾಡಿ ನಾಮ ಫಲಕವನ್ನು ಹಾಕಲಾಗಿದ್ದುಇದನ್ನು ಕೂಡಲೇ ಹಿಂದಕ್ಕೆ ಪಡೆದು ನಮ್ಮ ಪ್ರದೇಶದ ಅಸ್ಮಿತೆಯ ಹೆಸರಾದ , ಇತಿಹಾಸದ ಹೆಗ್ಗುರುತ್ತಾದ ಮಂಗಳೂರು ಕೆಮಿಕಲ್ಸ್ & ಫರ್ಟಿಲೈಜರ್ಸ್ ಎನ್ನುವ ಹೆಸರನ್ನೇ ಮುಂದುವರೆಸಬೇಕು , ಒಂದು ವೇಳೆ ಇದು ಸಾಧ್ಯವಾಗದಿದ್ದರೆ ಜಿಲ್ಲಾಧಿಕಾರಗಳ ಮಧ್ಯಸ್ಥಿಕೆ ಮತ್ತು ಉಸ್ತುವಾರಿ ಸಚಿವರ ಗಮನಕ್ಕೂ ತರಲಾಗುವುದು ಜೊತೆಗೆ ಉಪವಾಸ ಸತ್ಯಾಗ್ರವನ್ನು ಕೈಗೊಳ್ಳಲಾಗುವುದೆಂದು ವಿಧಾನ ಪರಿಷತ್ ಶಾಸಕರಾದ ಐವನ್ ಡಿ’ಸೋಜಾ ತಿಳಿಸಿದರು .
ಅವರು ಮ.ನ.ಪಾ ಕಚೇರಿಯಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ , ಎಂಸಿಎಫ್ ಕಾರ್ಖಾನೆ 1971 ರಲ್ಲಿ ಜಂಟಿ ಉದ್ಯಮವಾಗಿ ಅಸ್ತಿತ್ವಕ್ಕೆ ಬಂದು 55 ವರ್ಷಗಳ ಇತಿಹಾಸ ಹೊಂದಿದ್ದು ಕಳೆದ ಅಕ್ಟೋಬರ್ ತಿಂಗಳಿಂದ ಈ ಹೆಸರು ಮಾಯವಾಗಿದೆ. 15 ವರ್ಷ ಸರಕಾರಿ ಒಡೆತನದಲ್ಲಿದ್ದು 35 ವರ್ಷ ಖಾಸಗಿ ಒಡೆತನದಲ್ಲಿದ್ದರೂ “ಮಂಗಳೂರು ರಾಸಾಯನಿಕ ಮತ್ತು ರಸಗೊಬ್ಬರ ಕಾರ್ಖಾನೆ” ಎಂಬ ಹೆಸರು ಬದಲಾಗಿರಲಿಲ್ಲ. ಆದರೆ ಇಂದು ಭೂಮಿ ನೀಡಿದ ಇಲ್ಲಿನ ಸ್ಥಳೀಯ ಜನರ ತ್ಯಾಗ, ಬಳಸುವ ಇಲ್ಲಿಯ ನದಿಗಳ ನೀರು, ಗಾಳಿ , ಮೂಲ ಸೌಕರ್ಯವನ್ನು ನೀಡುವ ಸ್ಥಳದ ಹೆಸರನ್ನೇ ಬದಲಾವಣೆ ಮಾಡುವುದು ಸರಿಯಾದ ಕ್ರಮವಲ್ಲ ಎಂದರು .
35 ವರ್ಷ ಖಾಸಗಿ ಒಡೆತನದಲ್ಲಿದ್ದರೂ share capital ಮತ್ತು ಬ್ಯಾಂಕ್ ಸಾಲ ಹೊರತಾಗಿ ಯಾವುದೇ ಹೊಸ ಬಂಡವಾಳವನ್ನು ಮಂಗಳೂರು ಘಟಕಕ್ಕೆ ತಂದಿಲ್ಲ. ಎಂಸಿಎಫ್ ತನ್ನ ಸ್ವಂತ ಆದಾಯದಿಂದ ಮತ್ತು ಬ್ಯಾಂಕ್ ಸಹಕಾರದಿಂದ ಅಭಿವೃದ್ಧಿ ಹೊಂದಿದೆ. 90% ಉದ್ಯೋಗಗಳು ಸ್ಥಳೀಯರಿಗೆ ಮತ್ತು ರಾಜ್ಯದ ಯುವ ಜನತೆಗೆ ಮೀಸಲಾಗಿದ್ದವು. ಈಗ ಅದೆಲ್ಲವೂ ಬದಲಾಗಲಿದೆ ಎಂದರು .
ಎಂಸಿಎಫ್ ಮಂಗಳೂರಿನ ಜೊತೆ ಐತಿಹಾಸಿಕ ಸೆಂಬಂಧವನ್ನು ಹೊಂದಿದೆ. ಇಲ್ಲಿನ ನೆಲದ ಅಸ್ಮಿತೆಯ ಗುರುತಾಗಿದೆ. ಅನೇಕ ತ್ಯಾಗಗಳ ಸಂಕೇತವಾಗಿದೆ. ಇಲ್ಲಿನ ಯುವ ಜನತೆಗೆ ಉದ್ಯೋಗ ನೀಡುವ ಸಂಸ್ಥೆಯಾಗಿದೆ. ಈ ಹೆಸರಿನ ಜೊತೆ ಮಂಗಳೂರಿನ ಜನತೆ 5 ದಶಕಗಳ ಅನ್ನೋನ್ಯ ಸಂಬಂಧವನ್ನು ಇಟ್ಟು ಕೊಂಡಿದ್ದಾರೆ. ಇಂತಹ ಹೆಸರನ್ನು ವಿಲೀನದ ಹೆಸರಲ್ಲಿ ರಾತ್ರೋರಾತ್ರಿ ಇತಿಹಾಸದ ಕಸದ ಬುಟ್ಟಿಗೆ ಎಸೆದದ್ದು ಎಂಸಿಎಫ್ ನೊಂದಿಗೆ ನಂಟಿರುವ ಪ್ರತಿಯೊಬ್ಬರಿಗೂ, ಮಂಗಳೂರಿನ ಮತ್ತು ರಾಜ್ಯದ ಜನತೆಗೂ ತೀವು ನೋವುಂಟು ಮಾಡಿದೆ ಎಂದರು .
500 ಕ್ಕೂ ಹೆಚ್ಚು ಮಾಜಿ ಉದ್ಯೋಗಿಗಳು ಯಾವುದೇ ಪ್ರತಿಫಲದ ಅಪೇಕ್ಷೆಯಿಲ್ಲದೆ ಒಂದಾಗಿ ಎಂಸಿಎಫ್ ಹೆಸರನ್ನು ಉಳಿಸುವ ಹೋರಾಟದ ಮಂಚೂಣಿಯಲ್ಲಿದ್ದಾರೆ. ಕೂಡಲೇ ಆಡಳಿತ ವರ್ಗ ಇಲ್ಲಿನ ಜನರ ಆಶೋತ್ತರಗಳಿಗೆ ಸ್ಪಂದಿಸಿ ಮಂಗಳೂರು ಕೆಮಿಕಲ್ಸ್ & ಫರ್ಟಿಲೈಜರ್ಸ್ ಲಿಮಿಟೆಡ್ ಎಂಬ ಹೆಸರನ್ನು ನಾಮ ಫಲಕದಲ್ಲಿ ತಕ್ಷಣ ಮರು ಸ್ಥಾಪಿಸಬೇಕೆಂದು ಹೋರಾಟಗಾರರ ಪರವಾಗಿ ಕೇಳಿಕೊಂಡರು .ಈ ರೀತಿಯ ಬೆಳವಣಿಗೆಗಳು ಮುಂದಿನ ದಿನಗಳಲ್ಲಿ ಇತರೇ ವಲಯಗಳಲ್ಲಿ ಇಲ್ಲಿನ ಮೂಲ ನಾಮದ ಬದಲಾವಣೆಗೂ ಕಾರಣವಾಗಲಿದೆ ಎಂದು ಎಚ್ಚರಿಸಿದರು .ಈ ಸಂದರ್ಭದಲ್ಲಿ ಎಂಸಿಎಫ್ ಹೋರಾಟ ಸಮಿತಿಯ ಸದಸ್ಯರಾದ ಮಹಮ್ಮದ್ ಅಲಿ , ಶಾಹುಲ್ ಹಮೀದ್ , ಸುರೇಶ್ ಪಿ ಕೆ ಸಹಿತ ಮುಂತಾದವರು ಉಪಸ್ಥಿತರಿದ್ದರು .