ಮಂಗಳೂರು:ಬಜ್ಪೆ ಪಟ್ಟಣ ಪಂಚಾಯತ್ ವ್ಯಾಪ್ತಿಯ ಕೆಂಜಾರು 3ನೇ ವಾರ್ಡ್ ಮೂಡುಬಾಳಿಕೆ ಪ್ರದೇಶದಲ್ಲಿ ವಾಸವಾಗಿರುವ ಪರಿಶಿಷ್ಟ ಜಾತಿಯ 10 ಕುಟುಂಬಗಳ ಏಕೈಕ ರಸ್ತೆ ಸಂಪರ್ಕವನ್ನು ಭಾರತೀಯ ಕೋಸ್ಟ್ ಗಾರ್ಡ್ ಕಂಪೌಂಡ್ ನಿರ್ಮಾಣದಿಂದ ಸಂಪರ್ಕ ಕಡಿತವಾಗುವ ಭೀತಿಯಲಿದ್ದು ಇದರಿಂದ ಆ ಭಾಗದಲ್ಲಿ ವಾಸಿಸುವ ಜನರ ಪರಿಸ್ಥಿತಿ ಅತಂತ್ರವಾಗಿದೆ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ (ರಿ.)ಯ ಜಿಲ್ಲಾ ಸಂಘಟನಾ ಸಂಚಾಲಕ ರಘು ಕೆ. ಎಕ್ಕಾರು ಆರೋಪಿಸಿದ್ದಾರೆ.
ನಗರದ ಪತ್ರಿಕಾಭವನದಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಕಿಡಿಕಾರಿದ ಅವರು , ಸುಮಾರು 70 ವರ್ಷಗಳಿಂದ ಈ ಕುಟುಂಬಗಳು ಅಲ್ಲೇ ವಾಸಿಸುತ್ತಿದ್ದು, 1995ರಲ್ಲಿ ಸರ್ಕಾರ ಮನೆ ನಿವೇಶನದ ಹಕ್ಕುಪತ್ರ ನೀಡಿದೆ. ಕುಟುಂಬಗಳ ಮನೆಗಳ ಸುತ್ತಲೂ ಖಾಸಗಿ ಜಮೀನುಗಳಿದ್ದು, ಸರ್ವೆ ನಂ.116/7ಕ್ಕೆ ಹೊಂದಿಕೊಂಡಿರುವ ಕಾಲುದಾರಿ ಮತ್ತು ಕಚ್ಚಾ ರಸ್ತೆಯೇ ದೈನಂದಿನ ಸಂಚಾರ, ವಿದ್ಯಾಭ್ಯಾಸ, ಸಾಮಗ್ರಿ ಸಾಗಣೆ ಹಾಗೂ ತುರ್ತು ಸಂದರ್ಭಗಳಲ್ಲಿ ರೋಗಿ-ಹಿರಿಯ ನಾಗರಿಕರನ್ನು ಸಾಗಿಸಲು ಇದ್ದ ಏಕೈಕ ಮಾರ್ಗವಾಗಿದೆ. ಮಳೆಗಾಲದಲ್ಲಿ ಈ ಪ್ರದೇಶ ಸಂಪೂರ್ಣ ಜಲಾವೃತವಾಗುವ ಹಿನ್ನೆಲೆ ಈ ರಸ್ತೆ ಅತ್ಯಂತ ಅಗತ್ಯವಾಗಿತ್ತು ಎಂದು ತಿಳಿಸಿದರು.
ಆದರೆ ಇತ್ತೀಚೆಗೆ ಭಾರತೀಯ ಕೋಸ್ಟ್ಗಾರ್ಡ್ ಅಧಿಕಾರಿಗಳು ಸರ್ವೆ ನಂ.116/7ರಲ್ಲಿ ಕಂಪೌಂಡ್ ನಿರ್ಮಾಣ ಕಾಮಗಾರಿಯನ್ನು ಆರಂಭಿಸಿರುವುದರಿಂದ, ಈ ದಲಿತ ಕುಟುಂಬಗಳಿಗೆ ಇದ್ದ ಏಕೈಕ ರಸ್ತೆ ಸಂಪೂರ್ಣವಾಗಿ ಮುಚ್ಚಲ್ಪಟ್ಟಿದೆ. ಇದರ ಪರಿಣಾಮ ದಿನನಿತ್ಯದ ಸಂಚಾರ, ಅಗತ್ಯ ವಸ್ತುಗಳ ಸಾಗಣೆ ಹಾಗೂ ತುರ್ತು ಪರಿಸ್ಥಿತಿಗಳಲ್ಲಿ ಕುಟುಂಬಗಳು ತೀವ್ರ ಸಂಕಷ್ಟ ಎದುರಿಸುವಂತಾಗಿದೆ ಎಂದು ಆರೋಪಿಸಿದರು.
ಈ ಬಗ್ಗೆ ಹೆಚ್ಚಿನ ಮಾಹಿತಿಯನ್ನು ನೀಡಿದ ಸಮಿತಿಯ ಜಿಲ್ಲಾ ಸಂಘಟನಾ ಸಂಚಾಲಕ ಕೃಷ್ಣಾ ಡಿ ಮಾತನಾಡಿ , ಈ ಸಮಸ್ಯೆಯ ಬಗ್ಗೆ ಸಂಸದರಲ್ಲಿ ಚರ್ಚಿಸಿದರೆ ಅವರು ನಿರ್ಲಕ್ಷವನ್ನು ವಹಿಸುತ್ತಿದ್ದಾರೆ . ಕನಿಷ್ಠ ಮನವಿಯನ್ನು ಸ್ವೀಕರಿಸಲು ಹಿಂದೇಟು ಹಾಕುತ್ತಾ ಇದ್ದಾರೆ . ಡಿಸಿ ಯವರಲ್ಲಿ ಈ ಸಮಸ್ಯೆಯ ಬಗ್ಗೆ ಚರ್ಚಿಸಬೇಕು ಎನ್ನುವ ಆಶಯದಿಂದ ಅವರಲ್ಲಿ ಹೋದರೆ ಅವರು ಕಚೇರಿಯಲ್ಲಿ ಇರುವುದೇ ವಿರಳ . ಶಾಸಕರಲ್ಲಿ ಇದರ ಬಗ್ಗೆ ಮಾತನಾಡಿದಾಗ ಅವರು ಅಸಹಾಯಕರಾಗಿ ಮಾತನಾಡುತ್ತಾ ಇದ್ದಾರೆ . ಈ ಕುರಿತು ಕೋಸ್ಟ್ ಗಾರ್ಡ್ ದಂಡನಾಯಕರಲ್ಲಿ ಮಾತನಾಡುವಾಗ ಮೊದಲೇ ಈ ಸಮಸ್ಯೆಯನ್ನು ಹೇಳಬೇಕಿತೆಂದು ಕೈ ತೊಳೆದುಕೊಳ್ಳುತ್ತಾರೆ ಎಂದು ಅಧಿಕಾರಿಗಳ ಕಾರ್ಯವನ್ನು ಟೀಕಿಸಿದರು .
ಈ ಮೊದಲು ಕಂಪೌಂಡ್ ನಿರ್ಮಾಣದ ಸರ್ವೇ ಈ ಭಾಗದಲ್ಲಿ ನಡೆಯುವಾಗ ನಾವು ಮೌಖಿಕವಾಗಿ ಪ್ರತಿಭಟನೆಯನ್ನು ಮಾಡಿದ್ವಿ . ಆ ಸಮಯದಲ್ಲಿ ಅಧಿಕಾರಿಗಳು ಗ್ರಾಮಕ್ಕೆ ಸಂಪರ್ಕಿಸುವ ಮಾರ್ಗಕ್ಕೆ ಯಾವುದೇ ರೀತಿಯಲ್ಲೂ ತಡೆ ಉಂಟು ಮಾಡುವುದಿಲ್ಲ ಎನ್ನುವ ಭರವಸೆಯನ್ನು ನೀಡಿದ್ದರು . ಆದರೆ ಇಂದು ಕಂಪೌಂಡ್ ನಿರ್ಮಾಣಕ್ಕೆ ಅಡಿಗಲ್ಲನ್ನು ಹಾಕಿದ್ದಾರೆ ಕೂಡಲೇ ಸಂಸದರು , ಜಿಲ್ಲಾಧಿಕಾರಿಗಳು ಮದ್ಯಸ್ತಿಕೆಯನ್ನು ವಹಿಸಿ ಸಮಸ್ಯೆಯನ್ನು ಇತ್ಯರ್ಥ ಮಾಡಬೇಕು ಇಲ್ಲದಿದ್ದರೆ ದೊಡ್ಡದಾದ ಹೋರಾಟ ಮಾಡುವುದಾಗಿ ಎಚ್ಚರಿಸಿದರು .
ಪತ್ರಿಕಾಗೋಷ್ಠಿಯಲ್ಲಿ ಸಮಿತಿಯ ಸದಸ್ಯರಾದ ರುಕ್ಕಯ್ಯ ಅಮೀನ್ ಕರಂಬಾರು , ಕೃಷ್ಣಾನಂದ ಡಿ., ಲಿಂಗಪ್ಪ ಕುಂದರ್ , ಯಮುನಾ ಮುಂತಾದವರು ಉಪಸ್ಥಿತರಿದ್ದರು .