ಬಂಟ್ವಾಳ: ಬಂಟ್ವಾಳ ಪುರಸಭಾ ಕಾರ್ಯಾಲಯದಲ್ಲಿ 2025 ನವೆಂಬರ್ ಮತ್ತು ಡಿಸೆಂಬರ್ ತಿಂಗಳ ವೇತನ ಪಾವತಿಸದಿರುವ ಬಗ್ಗೆ ಕನಿಷ್ಠ ವೇತನ ಮತ್ತು ಹೊರಗುತ್ತಿಗೆ ನೌಕರರರಿಂದ ಪುರಸಭೆಯ ಬಾಗಿಲಿನಲ್ಲಿ ಕುಳಿತು ಪ್ರತಿಭಟನೆ ನಡೆಸಿದರು.ಕಳೆದ ಜ.6 ರಂದು ಕಾರ್ಮಿಕರ ವೇತನ ಪಾವತಿ ಮಾಡುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸಲಾಗಿತ್ತು.ಈ ಸಂದರ್ಭದಲ್ಲಿ ಪುರಸಭೆಯ ಸದಸ್ಯರುಗಳು ಪ್ರತಿಭಟನೆಗೆ ಸಾಥ್ ನೀಡಿದ್ದು, ಕಾರ್ಮಿಕರ ಪರವಾಗಿ ಪುರಸಭಾ ಮುಖ್ಯಾಧಿಕಾರಿ ತೀರ್ಥಪ್ರಸಾದ್ ಅವರ ಜೊತೆ ಮಾತುಕತೆ ನಡೆಸಿದರು.ಈ ವೇಳೆ ಕಾರ್ಮಿಕರಿಗೆ ವೇತನ ನೀಡುವ ಭರವಸೆಯನ್ನು ನೀಡಿದ್ದು,ಪ್ರತಿಭಟನೆ ಹಿಂಪಡೆಯುವಂತೆ ಮನವಿ ಮಾಡಿದಕ್ಕೆ, ಕಾರ್ಮಿಕರು ಪ್ರತಿಭಟನೆಯನ್ನು ಸ್ಥಗಿತಮಾಡಿ ಕೆಲಸಕ್ಕೆ ಹಾಜರಾಗಿದ್ದರು.
ಪ್ರತಿಭಟನೆ ಬಳಿಕ ಮತ್ತೆ ದಿನ 15 ಕಳೆದರೂ ವೇತನ ನೀಡಿದ ಹಿನ್ನೆಲೆಯಲ್ಲಿ ಮತ್ತೆ ಪುರಸಭಾ ಕಚೇರಿಯ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದರು.ಕಾರ್ಮಿಕರು ಪ್ರತಿಭಟನೆಯಲ್ಲಿ ನಿರತರಾಗಿದ್ದ ಕಾರಣಕ್ಕಾಗಿ ಪುರಸಭೆಯ ವ್ಯಾಪ್ತಿಯಲ್ಲಿ ಕುಡಿಯುವ ನೀರಿಗಾಗಿ ಪರದಾಡುವಂತಾಗಿದೆ.ಕಳೆದ ಪ್ರತಿಭಟನೆ ವೇಳೆ ಬಂಟ್ವಾಳ ಸರಕಾರ ಆಸ್ಪತ್ರೆಯಲ್ಲಿ ನೀರಿಲ್ಲದೆ ಡಯಾಲಿಸಸ್ ರೋಗಿಗಳ ಸಹಿತ ಇತರ ರೋಗಿಗಳಿಗೆ ಕಷ್ಟವಾಗಿತ್ತು. ಶಾಸಕ ರಾಜೇಶ್ ನಾಯ್ಕ್ ಅವರು ಟ್ಯಾಂಕರ್ ಮೂಲಕ ನೀರು ಒದಗಿಸಿದ ಘಟನೆ ಕೂಡ ನಡೆದಿದೆ.
ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಸಂಸದ ಕ್ಯಾ.ಬ್ರಿಜೇಶ್ ಚೌಟ, ಶಾಸಕ ರಾಜೇಶ್ ನಾಯ್ಕ್ ಅವರು ಜಿಲ್ಲಾಧಿಕಾರಿ ಅವರ ಸಮ್ಮುಖದಲ್ಲಿ ಮುಖ್ಯಾಧಿಕಾರಿ ಜೊತೆ ಸಭೆ ನಡೆಸಿ ವೇತನ ನೀಡುವಂತೆ ಸೂಚಿಸಲಾಗಿತ್ತು. ಅದಕ್ಕೆ ಒಪ್ಪಿಕೊಂಡಿದ್ದ ಮುಖ್ಯಾಧಿಕಾರಿ ಅವರು ಇದೀಗ ಅದೇ ಹಾಡು,ಅದೇ ರಾಗ ಎಂಬಂತೆ ಹಳೆಯ ಹಾಡನ್ನು ಟೇಪ್ ರೆಕಾರ್ಡರ್ ನಂತೆ ರಿವೈಂಡ್ ಮಾಡುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.