ನರೇಗಾ ಬಚಾವೋ ಸಂಗ್ರಾಮ ಕೇಂದ್ರ ಸರ್ಕಾರದ ಕ್ರಮ ಖಂಡಿಸಿ ಕನ್ಯಾನದಲ್ಲಿ ಬ್ರಹತ್ ಪ್ರತಿಭಟನೆ

ಕೇಂದ್ರ ಸರ್ಕಾರ ಮಹಾತ್ಮಾ ಗಾಂಧಿ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ (ನರೇಗಾ) ಹೆಸರು ಹಾಗೂ ಅದರ ಮೂಲ ಸ್ವರೂಪವನ್ನು ಬದಲಾಯಿಸಿರುವ ಕ್ರಮವನ್ನು ಖಂಡಿಸಿ, ಕನ್ಯಾನ ವಲಯ ಕಾಂಗ್ರೆಸ್ ಸಮಿತಿಯ ವತಿಯಿಂದ “ನರೇಗಾ ಬಚಾವೋ ಸಂಗ್ರಾಮ” ದಡಿ ಕನ್ಯಾನ ಗ್ರಾಮ ಪಂಚಾಯತ್ ಮುಂಭಾಗದಲ್ಲಿ ಇವತ್ತು ಬ್ರಹತ್ ಪ್ರತಿಭಟನೆ ನಡೆಯಿತು.

ಪ್ರತಿಭಟನೆಯನ್ನು ವಲಯ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾದ ಅಬ್ದುಲ್ ಮಜೀದ್ ಕನ್ಯಾನ ಸ್ವಾಗತಿಸಿ ಮಾತನಾಡಿದರು.ಮುಖ್ಯ ಭಾಷಣ ಮಾಡಿದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ಶ್ರೀ ಎಂ.ಎಸ್. ಮಹಮ್ಮದ್, ನರೇಗಾ ಯೋಜನೆಯ ಮೂಲಕ ಗ್ರಾಮೀಣ ಜನರಿಗೆ ದೊರೆಯುತ್ತಿರುವ ಉದ್ಯೋಗ ಭದ್ರತೆ, ಜೀವನಾಧಾರ ಮತ್ತು ಸಾಮಾಜಿಕ ನ್ಯಾಯದ ಮಹತ್ವವನ್ನು ವಿವರಿಸಿ, ಯೋಜನೆಯ ಹೆಸರಿನ ಬದಲಾವಣೆ ಮಾತ್ರವಲ್ಲ, ಅದರ ಆತ್ಮವನ್ನೇ ಕುಗ್ಗಿಸುವ ಕೇಂದ್ರ ಸರ್ಕಾರದ ನೀತಿಯನ್ನು ತೀವ್ರವಾಗಿ ಟೀಕಿಸಿದರು.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಶ್ರೀ ಕೆ.ಪಿ. ಅಬ್ದುಲ್ ರಹಿಮಾನ್ ಹಾಗೂ ಗ್ರಾಮ ಪಂಚಾಯತ್ ಸದಸ್ಯರಾದ ಶ್ರೀ ಗಣೇಶ್ ಭಟ್ ನೀರ್ಪಾಜೆ ಅವರು ಉದ್ಯೋಗ ಖಾತರಿ ಯೋಜನೆಯ ಸಾಧಕ–ಬಾಧಕಗಳ ಕುರಿತು ಮಾತನಾಡಿ, ನರೇಗಾ ಯೋಜನೆ ಗ್ರಾಮೀಣ ಬಡವರ ಪಾಲಿಗೆ ಆಶಾಕಿರಣವಾಗಿದ್ದು, ಅದನ್ನು ದುರ್ಬಲಗೊಳಿಸುವ ಯಾವುದೇ ಪ್ರಯತ್ನವನ್ನು ಸಹಿಸಬಾರದೆಂದು ಆಗ್ರಹಿಸಿದರು.ಕಾರ್ಯಕ್ರಮದಲ್ಲಿ ಕನ್ಯಾನ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ರೇಖಾ ರಮೇಶ್, ಪಂಚಾಯತ್ ಸದಸ್ಯರು, ಬೂತ್ ಅಧ್ಯಕ್ಷರುಗಳು, ಕಾಂಗ್ರೆಸ್ ಪಕ್ಷದ ಪ್ರಮುಖ ನಾಯಕರು ಹಾಗೂ ಕಾರ್ಯಕರ್ತರು ದೊಡ್ಡ ಸಂಖ್ಯೆಯಲ್ಲಿ ಭಾಗವಹಿಸಿದ್ದರು.

ಪ್ರತಿಭಟನೆಯ ಅಂತ್ಯದಲ್ಲಿ, ನರೇಗಾ ಯೋಜನೆಗೆ ಬೆಂಬಲ ಸೂಚಿಸಿ ಹಾಗೂ ‘ವಿಕಸಿತ ಭಾರತ ಗ್ರಾಮೀಣ ಉದ್ಯೋಗ ಖಾತರಿ (ವಿ.ಬಿ. ಗ್ರಾಮ್ ಜಿ)’ ಅನುಷ್ಠಾನಕ್ಕೆ ವಿರೋಧ ವ್ಯಕ್ತಪಡಿಸಿ, ಗ್ರಾಮ ಪಂಚಾಯತ್ ಪಿಡಿಒ ಮೂಲಕ ಮೇಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು. ಜೊತೆಗೆ ಈ ವಿಷಯವನ್ನು ಗ್ರಾಮ ಪಂಚಾಯತ್ ಸಾಮಾನ್ಯ ಸಭೆಯಲ್ಲಿ ಚರ್ಚಿಸಿ ನಿರ್ಣಯ ಕೈಗೊಳ್ಳಲು ತೀರ್ಮಾನಿಸಲಾಯಿತು.

SHARE
Loading spinner

Leave a Reply

Your email address will not be published. Required fields are marked *

error: Content is protected !!