ನೇಪಾಳದಿಂದ ಕುಳಿತು ಹೂಡಿಕೆ ವಂಚನೆ: 11 ಮಂದಿಯನ್ನು ಬಂಧಿಸಿದ ಮಂಗಳೂರು ಸೆನ್ ಕ್ರೈಂ ಪೊಲೀಸ್‌ಗಳು

ಮಂಗಳೂರು: ನೇಪಾಳದಲ್ಲಿ‌ ಕುಳಿತು ವಂಚನೆ ನಡೆಸುತ್ತಿದ್ದ 11 ಆರೋಪಿಗಳನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ.ಮಂಗಳೂರು ಸೆನ್ ಕ್ರೈಂ ಪೊಲೀಸರ ಮಹತ್ವದ ಕಾರ್ಯಾಚರಣೆಯಲ್ಲಿ ಆರೋಪಿಗಳನ್ನು ಬಂಧಿಸಲಾಯಿತು ಎಂದು ಕಮೀಷನರ್ ಸುಧೀರ್ ಕುಮಾರ್ ರೆಡ್ಡಿ ತಿಳಿಸಿದ್ದಾರೆ.ಇವರು ನೇಪಾಳದಲ್ಲಿ ಕುಳಿತು ಭಾರತೀಯರನ್ನು ಗುರಿಯಾಗಿಸಿಕೊಂಡು ಭಾರಿ ಮೊತ್ತದ ಹೂಡಿಕೆ ವಂಚನೆ ನಡೆಸುತ್ತಿದ್ದರು. ಈ ಅಂತರರಾಜ್ಯ ಹಾಗೂ ಅಂತರರಾಷ್ಟ್ರೀಯ ವಂಚಕರ ಜಾಲವನ್ನು ಮಂಗಳೂರು ನಗರ ಸೆನ್ ಕ್ರೈಂ ಪೊಲೀಸ್ ಠಾಣೆಯವರು ಬೇಧಿಸಿದ್ದು, ಒಟ್ಟು 11 ಜನ ಆರೋಪಿಗಳನ್ನು ದಸ್ತಗಿರಿ ಮಾಡಿದ್ದಾರೆ.

ಈ ವಂಚಕರ ತಂಡದಲ್ಲಿ 16 ಭಾರತೀಯರು ಹಾಗೂ ಚೀನಾದ ನಾಗರಿಕರು ಸೇರಿದ್ದು, ನೇಹಾಳ ಪೊಲೀಸರು ಚೀನಾದ ವಂಚಕರನ್ನು ದಸ್ತಗಿರಿ ಮಾಡಿದ್ದಾರೆ. ಇನ್ನೂ 05 ಭಾರತೀಯ ಆರೋಪಿಗಳು ತಲೆಮರೆಸಿಕೊಂಡಿದ್ದು, ಅವರ ಪತ್ತೆ ಕಾರ್ಯ ಮುಂದುವರೆದಿದೆ ಎಂದು ಕಮಿಶನರ್ ತಿಳಿಸಿದರು.ಆರೋಪಿತರ ಮೊಬೈಲ್ ಫೋನ್ ಹಾಗೂ ಲ್ಯಾಪ್‌ಟಾಪ್‌ಗಳ ತಾಂತ್ರಿಕ ಪರಿಶೀಲನೆಯ ವೇಳೆ 624 ಬ್ಯಾಂಕ್ ಖಾತೆಗಳ ವಿವರಗಳು ಪತ್ತೆಯಾಗಿದ್ದು, ಈ ಖಾತೆಗಳ ವಿರುದ್ಧ ದೇಶಾದ್ಯಂತ NCRP ಪೋರ್ಟಲ್‌ನಲ್ಲಿ 4,580ಕ್ಕೂ ಅಧಿಕ ಪ್ರಕರಣಗಳು ದಾಖಲಾಗಿವೆ. ಒಂದೇ ಬ್ಯಾಂಕ್ ಖಾತೆಯಲ್ಲಿ ರೂಪಾಯಿ 167 ಕೋಟಿ ಹಣ ವರ್ಗಾವಣೆಯಾಗಿರುವುದು ಕಂಡುಬಂದಿದೆ ಎಂದರು.

ಮಂಗಳೂರು ಸೆನ್ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣದಲ್ಲಿ, ವಂಚಕರು ಫಿರ್ಯಾದಿದಾರರಿಂದ ರೂಪಾಯಿ 1 ಕೋಟಿ 38 ಲಕ್ಷ ಹಣವನ್ನು 10 ವಿವಿಧ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಿಕೊಂಡು ವಂಚನೆ ಮಾಡಿರುವುದು ಸಾಬೀತಾಗಿದೆ. ಈ ಖಾತೆಗಳ ಮೂಲಕ ಸುಮಾರು ರೂಪಾಯಿ 30.70 ಕೋಟಿ ಹಣದ ವಹಿವಾಟು ನಡೆದಿರುವುದು ತನಿಖೆಯಿಂದ ತಿಳಿದುಬಂದಿದೆ ಎಂದು ಕಮಿಶನರ್ ಹೇಳಿದರು.ವಂಚಕರು ಸಾಮಾಜಿಕ ಜಾಲತಾಣಗಳ ಮೂಲಕ ಹೂಡಿಕೆದಾರರನ್ನು ಆಕರ್ಷಿಸಿ, ಹೆಚ್ಚಿನ ಲಾಭದ ಆಮಿಷ ಒಡ್ಡಿ ಹಣವನ್ನು ವಿವಿಧ ಖಾತೆಗಳಿಗೆ ವರ್ಗಾಯಿಸಿ, ನಂತರ ಅದನ್ನು “USDT (ಕ್ರಿಪ್ಲೋ ಕರೆನ್ಸಿ)* ಗೆ ಪರಿವರ್ತಿಸಿ ವಿದೇಶಗಳಿಗೆ ಕಳುಹಿಸುತ್ತಿದ್ದರು. ಈ ಹಣದ ಸಂಪೂರ್ಣ ನಿಯಂತ್ರಣ ನೇಪಾಳದಲ್ಲಿರುವ ಗ್ಯಾಂಗ್ ಮೂಲಕ ನಡೆಯುತ್ತಿತ್ತು.

ಕಾಂಬೋಡಿಯಾ, ದುಬೈ ಸೇರಿದಂತೆ ವಿವಿಧ ದೇಶಗಳಲ್ಲಿ ಕುಳಿತು ಕಾರ್ಯನಿರ್ವಹಿಸುತ್ತಿದ್ದ ಮತ್ತೊಂದು ತಂಡ, ವಿದೇಶಕ್ಕೆ ಹೋಗಿರುವ ಭಾರತೀಯರ ಮೂಲಕ ಸ್ಥಳೀಯ ಭಾಷೆಯಲ್ಲಿ ಮಾತನಾಡಿಸಿ ಹೂಡಿಕೆದಾರರನ್ನು ನಂಬಿಸಿ ಹಣ ಹೂಡಿಕೆ ಮಾಡಿಸುತ್ತಿದ್ದುದೂ ಬೆಳಕಿಗೆ ಬಂದಿದೆ.ಈ ಕಾರ್ಯಾಚರಣೆಯಲ್ಲಿ 21 ಮೊಬೈಲ್ ಫೋನ್, 1 ಲ್ಯಾಪ್ಟಾಪ್, 20 ಸಿಮ್ ಕಾರ್ಡ್‌ಗಳು ಹಾಗೂ 20 ಡೆಬಿಟ್/ಕ್ರೆಡಿಟ್ ಕಾರ್ಡ್‌ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!