ಮಂಗಳೂರು: ಜಿಲ್ಲಾ ಕಾಂಗ್ರೆಸ್ ವತಿಯಿಂದ “ಮನೆರೇಗಾ ಬಚಾವೋ ಸಂಗ್ರಾಮ್” ಅಭಿಯಾನದ ಅಂಗವಾಗಿ ಪಾದಯಾತ್ರೆಗೆ ಮಹಾನಗರಪಾಲಿಕೆ ಎದುರುಗಡೆಯಿರುವ ಮಹಾತ್ಮಾ ಗಾಂಧೀಜಿ ಪ್ರತಿಮೆಯಿಂದ ಚಾಲನೆ ನೀಡಲಾಯಿತು. ಪಾದಯಾತ್ರೆ ಮುಲ್ಕಿ ಕಡೆಗೆ ಹೊರಟಿತು.ಕಾಂಗ್ರೆಸ್ ಮುಖಂಡ ವಿನಯ ಕುಮಾರ್ ಸೊರಕೆ ಗಾಂಧೀಜಿ ಪ್ರತಿಮೆಗೆ ಹಾರ ಅರ್ಪಿಸುವ ಮೂಲಕ ಪಾದಯಾತ್ರೆಯನ್ನು ಉದ್ಘಾಟಿಸಿದರು.
ಈ ವೇಳೆ ಮಾತನಾಡಿದ ಅವರು, ಕೇಂದ್ರದ ಮೋದಿ ಸರ್ಕಾರ ಜಾರಿಗೆ ತಂದಿರುವ ವಿ.ಬಿ. ರಾಮ್ ಜಿ ಯೋಜನೆಗೆ ತೀವ್ರ ವಿರೋಧ ವ್ಯಕ್ತಪಡಿಸಿದರು. “ಗಾಂಧೀಜಿ ಪೂಜಿಸುತ್ತಿದ್ದ ರಾಮನಲ್ಲ, ಅದು ನಾಥೂರಾಮ್ ಗೋಡ್ಸೆಯ ರಾಮ. ಮತ ರಾಜಕಾರಣಕ್ಕಾಗಿ ಈ ನೀತಿಯನ್ನು ಜಾರಿಗೆ ತರಲಾಗಿದೆ,” ಎಂದು ಆರೋಪಿಸಿದರು.
ಕಾಂಗ್ರೆಸ್ ಸರ್ಕಾರ ಬಡತನ ನಿರ್ಮೂಲನೆಗಾಗಿ ಮನರೇಗಾ ಕಾಯ್ದೆ ಜಾರಿಗೆ ತಂದು ಉದ್ಯೋಗ ಖಾತ್ರಿ ಯೋಜನೆಗೆ ಬಲ ನೀಡಿತ್ತು. ಆದರೆ ಹೊಸ ಕಾನೂನು ಬಡವರ ಹಕ್ಕುಗಳನ್ನು ಕಿತ್ತುಕೊಳ್ಳುವಂತಿದ್ದು, ಪಂಚಾಯತ್ ರಾಜ್ ವ್ಯವಸ್ಥೆಯನ್ನು ದುರ್ಬಲಗೊಳಿಸುವ ಪ್ರಯತ್ನವಾಗಿದೆ ಎಂದು ಹೇಳಿದರು. ಕರ್ನಾಟಕದಲ್ಲಿ ಈ ಕಾಯ್ದೆಗೆ ವಿರೋಧ ವ್ಯಕ್ತವಾಗುತ್ತಿದ್ದು, ಇದು ರಾಷ್ಟ್ರವ್ಯಾಪಿಯಾಗಿ ಹರಡಬೇಕು ಎಂದು ಅವರು ಆಗ್ರಹಿಸಿದರು.
ಪಾದಯಾತ್ರೆಯಲ್ಲಿ ಕಾಂಗ್ರೆಸ್ ನಾಯಕರಾದ ಜೆ.ಆರ್. ಲೋಬೋ, ಐವನ್ ಡಿಸೋಜ, ಹರೀಶ್ ಕುಮಾರ್, ಶಾಲೆನ್ ಪಿಂಟೋ, ಅಪ್ಪಿ ಸೇರಿದಂತೆ ಹಲವು ಮುಖಂಡರು ಭಾಗವಹಿಸಿದ್ದರು.ಸುಮಾರು 250ಕ್ಕೂ ಅಧಿಕ ಕಾಂಗ್ರೆಸ್ ಕಾರ್ಯಕರ್ತರು ಪಾಲ್ಗೊಂಡಿದ್ದು, 26 ಕಿಲೋಮೀಟರ್ ದೂರವನ್ನು ಪಾದಯಾತ್ರೆ ಮೂಲಕ ಕ್ರಮಿಸಲಿದ್ದಾರೆ.