ಫೆ.14 ರಂದು ತೊಕ್ಕೊಟ್ಟು ಒಳಪೇಟೆಯ ಅಂಬೇಡ್ಕರ್‌ ಮೈದಾನದಲ್ಲಿ ಅಬ್ಬಕ್ಕ ಉತ್ಸವ.

ಉಳ್ಳಾಲ:ತೊಕ್ಕೊಟ್ಟು ಒಳಪೇಟೆಯ ಅಂಬೇಡ್ಕರ್‌ ಮೈದಾನದಲ್ಲಿ ಫೆ.14ರ ಶನಿವಾರ‌ದಂದು ಮಧ್ಯಾಹ್ನ 2 ಗಂಟೆಗೆ ನಡೆಯಲಿರುವ ವೀರರಾಣಿ ಅಬ್ಬಕ್ಕ ಉತ್ಸವವನ್ನು ಶ್ರೀ ಕ್ಷೇತ್ರ ಧರ್ಮಸ್ಥಳದ ರಾಣಿ ಅಬ್ಬಕ್ಕ ವಂಶಸ್ಥರಾದ ಅನಿತಾ ಸುರೇಂದ್ರ ಕುಮಾರ್‌ ಉದ್ಘಾಟಿಸಲಿದ್ದು, ಅಬ್ಬಕ್ಕಳ ಜನ್ಮಭೂಮಿಯಲ್ಲಿ ಉತ್ಸವ ನಡೆಸಲು ಸರಕಾರವು ಅನುದಾನವನ್ನ ತಡೆ ಹಿಡಿಯುವ ಮೂಲಕ ದೇಶವೇ ಕೊಂಡಾಡುವ ವೀರರಾಣಿಗೆ ಕನಿಷ್ಟ ಗೌರವವನ್ನೂ ನೀಡುತ್ತಿಲ್ಲವೆಂದು ಉಳ್ಳಾಲ ವೀರರಾಣಿ ಅಬ್ಬಕ್ಕ ಉತ್ಸವ ಸಮಿತಿ ಅಧ್ಯಕ್ಷರಾದ ದಿನಕರ ಉಳ್ಳಾಲ್‌ ಅಸಮಾಧಾನ ವ್ಯಕ್ತಪಡಿಸಿದರು.

ಕುತ್ತಾರುವಿನ ಖಾಸಗಿ ಹೊಟೇಲ್‌ ನಲ್ಲಿ ಬುಧವಾರ ನಡೆದ ಸುದ್ಧಿಗೋಷ್ಠಿಯನ್ನುದ್ಧೇಶಿಸಿ ಮಾತನಾಡಿದ ಅವರು 1997ರಿಂದ ಸಾರ್ವಜನಿಕರ ದೇಣಿಗೆಯಿಂದಲೇ ರಾಣಿ ಅಬ್ಬಕ್ಕ ಉತ್ಸವವನ್ನು ನಡೆಸಿಕೊಂಡು ಬರಲಾಗುತ್ತಿದೆ. ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಅಬ್ಬಕ್ಕ ಉತ್ಸವಕ್ಕೆ 25 ಲಕ್ಷ ರೂ. ಅನುದಾನ ನೀಡಿದ್ದರು.ನಂತರವೂ ಕೆಲ ವರ್ಷಗಳ ಕಾಲ ಸರಕಾರದ ಅನುದಾನದಿಂದ ಉತ್ಸವ ನಡೆಯುತ್ತಿತ್ತು.ಆದರೆ ಇತ್ತೀಚಿನ ವರ್ಷಗಳಲ್ಲಿ ಜಿಲ್ಲಾಧಿಕಾರಿಗಳು ಖಾಸಗಿ ಸಂಘಟನೆಯ ಕಾರ್ಯಕ್ರಮವೆಂದು ನೆಪವೊಡ್ಡಿ ಅನುದಾನ ಬಿಡುಗಡೆಗೊಳಿಸಲು ನಿರಾಕರಿಸುತ್ತಿದ್ದಾರೆ.ಸರಕಾರ ಮಂಜೂರು ಮಾಡಿದ 10 ಲಕ್ಷ ರೂ.ಅನುದಾನವೂ ಇನ್ನೂ ಬಿಡುಗಡೆಯಾಗಿಲ್ಲ.ಇಡೀ ದೇಶವೇ ವೀರರಾಣಿ ಅಬ್ಬಕ್ಕಳ ಶೌರ್ಯವನ್ನು ಕೊಂಡಾಡುತ್ತಿದ್ದರೂ ಸಹ ಆಕೆಯ ಜನ್ಮಭೂಮಿಯಲ್ಲೇ ಉತ್ಸವ ನಡೆಸಲು ರಾಜ್ಯ ಸರಕಾರದಿಂದ ಕನಿಷ್ಟ ಮರ್ಯಾದೆಯೂ ಸಿಗದಿರುವುದು ಅತೀವ ನೋವುಂಟು‌ ಮಾಡಿದೆಯೆಂದು ದಿನಕರ ಉಳ್ಳಾಲ್ ಅಸಮಾಧಾನ ವ್ಯಕ್ತಪಡಿಸಿದರು.


ಶನಿವಾರ ಮಧ್ಯಾಹ್ನದಂದು ಮಂಗಳೂರಿನ ಆಶಾ ಚಾರಿಟೇಬಲ್ ಟ್ರಸ್ಟಿನ ಅಧ್ಯಕ್ಷರಾದ ಡಾ.ಆಶಾ ಜ್ಯೋತಿ ರೈಯವರು ಸಾಹಿತ್ಯ-ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ.ಯಶಸ್ವಿನಿ ಉಳ್ಳಾಲ್ ನೇತೃತ್ವದ ಸ್ವರಮಾಧುರ್ಯ ತಂಡದಿಂದ ನಾಡುನುಡಿಯ ಗೀತೋತ್ಸವ,ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯ ಸಹಯೋಗದಲ್ಲಿ ಅಲ್‌ ಅಝ್ಝಾರಿಯಾ ದಫ್‌ ತಂಡದಿಂದ ದಫ್‌ ಕಾರ್ಯಕ್ರಮ, ಯುವವಾಹಿನಿ ಕೊಲ್ಯ ಘಟಕದಿಂದ ಸಾಂಸ್ಕೃತಿಕ ವೈವಿಧ್ಯ, ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ ಸಹಯೋಗದಲ್ಲಿ ಕುಡುಂಬಿ ನೃತ್ಯ,ಪ್ರಶಂಸಾ ಕಾಪು ತಂಡದಿಂದ ಹಾಸ್ಯ ವೈವಿಧ್ಯ “ಬಲೇ ತೆಲಿಪಾಲೆ” ಹಾಗೂ ಪಜೀರು ನೃತ್ಯಲಹರಿ ನಾಟ್ಯಾಲಯದ ವಿಧುಷಿ ರೇಶ್ಮಾ ನಿರ್ಮಲ್ ಭಟ್‌ ತಂಡದಿಂದ ಸ್ವಾಗತ ನೃತ್ಯ ನಡೆಯಲಿದೆಯೆಂದರು.

ಸಂಜೆ ನಡೆಯಲಿರುವ ಸಭಾಕಾರ್ಯಕ್ರಮದಲ್ಲಿ ಸ್ಪೀಕರ್ ಯು.ಟಿ.ಖಾದರ್ ಅಧ್ಯಕ್ಷತೆ ವಹಿಸಲಿದ್ದು,ಎಸ್‌ಸಿಡಿಸಿಸಿ ಬ್ಯಾಂಕ್‌ನ ಅಧ್ಯಕ್ಷರಾದ ಡಾ.ಎಮ್.ಎನ್.ರಾಜೇಂದ್ರಕುಮಾರ್ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ಪ್ರಧಾನ ಅಭ್ಯಾಗತರಾಗಿ ಭಾಗವಹಿಸಲಿದ್ದು,ಸಂಸದ ಕ್ಯಾ.ಬ್ರಿಜೇಶ್‌ ಚೌಟ ಅವರು ಬಿನ್ನವತ್ತಳೆ ಪ್ರದಾನ ಮಾಡಲಿದ್ದಾರೆ.ಸಮಾರೋಪ ಸಭೆಯ ಬಳಿಕ ಮಂಗಳೂರಿನ ಕಲಾಭಿತಂಡದಿಂದ ಮೂಲ ಜಾನಪದ ವೈವಿಧ್ಯಮಯ ನೃತ್ಯ,ದಿನೇಶ್‌ ಅತ್ತಾವರ ನಿರ್ದೇಶನದ ತುಳು ನಾಟಕ – ‘ಜಾಗರ್ತೆ’,ಮಂಜನಾಡಿಯ ಪಾಂಚಜನ್ಯ ಯಕ್ಷ ನಾಟ್ಯಾಲಯ ತಂಡದಿಂದ ಅಶ್ವಥ್ ಮಂಜನಾಡಿ ನಿರ್ದೇಶನದ ಯಕ್ಷ ನೃತ್ಯ ಪ್ರದರ್ಶನಗೊಳ್ಳಲಿದೆಯೆಂದು ದಿನಕರ ಉಳ್ಳಾಲ್ ಮಾಹಿತಿ ನೀಡಿದರು.
ಸುದ್ಧಿಗೋಷ್ಠಿಯಲ್ಲಿ ಅಬ್ಬಕ್ಕ ಉತ್ಸವ ಸಮಿತಿಯ ಸ್ವಾಗತಾಧ್ಯಕ್ಷರು ಮಾಜಿ ಶಾಸಕರಾದ ಕೆ.ಜಯರಾಮ ಶೆಟ್ಟಿ,ಗೌರವ ಉಪಾಧ್ಯಕ್ಷ ಸದಾನಂದ ಬಂಗೇರ,ಉಪಾಧ್ಯಕ್ಷೆ ದೇವಕಿ ಆರ್‌.ಉಳ್ಳಾಲ್‌,ಕೋಶಾಧಿಕಾರಿ ಆನಂದ ಅಸೈಗೋಳಿ,ಪ್ರ.ಕಾ ಧನಲಕ್ಷ್ಮೀ ಗಟ್ಟಿ ಉಪಸ್ಥಿತರಿದ್ದರು.

***ಡಾ.ಸಾಯಿಗೀತಾ ಹೆಗ್ಡೆ,ರಾಜಶ್ರೀ ಉಳ್ಳಾಲ್ಗೆ ಅಬ್ಬಕ್ಕ ಪ್ರಶಸ್ತಿ ಪ್ರಧಾನ.
ಸಾಹಿತ್ಯ ಕ್ಷೇತ್ರದ ಸಾಧನೆಗಾಗಿ ದೇರಳಕಟ್ಟೆಯ ನಿಟ್ಟೆ ವಿಶ್ವವಿದ್ಯಾನಿಲಯದ ಮಾನವಿಕ ವಿಭಾಗದಲ್ಲಿ ಅಸೋಸಿಯೇಟ್ ಪ್ರೊಫೆಸರ್‌ ಆಗಿರುವ ಡಾ.ಸಾಯಿಗೀತಾ ಹೆಗ್ಡೆ ಮತ್ತು ಭರತನಾಟ್ಯ ಕ್ಷೇತ್ರದ ಸಾಧನೆಗಾಗಿ ಉಳ್ಳಾಲ ನಾಟ್ಯನಿಕೇತನ ನೃತ್ಯ ಸಂಸ್ಥೆಯ ಪ್ರಾಂಶುಪಾಲೆ ರಾಜಶ್ರೀ ಉಳ್ಳಾಲ್‌ ಅವರಿಗೆ ವೀರರಾಣಿ ಅಬ್ಬಕ್ಕ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುವುದೆಂದು ದಿನಕರ್ ಉಳ್ಳಾಲ್ ತಿಳಿಸಿದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!