ಸಂತ ಅಲೋಶಿಯಸ್ ವಿಶ್ವವಿದ್ಯಾನಿಲಯದ ಕನ್ನಡ ವಿಭಾಗ ಮತ್ತು ರಂಗ ಅಧ್ಯಯನ ಕೇಂದ್ರದ ಸಂಯುಕ್ತ ಆಯೋಜನೆಯಲ್ಲಿ ಫೆಬ್ರವರಿ 13ರಂದು ಬೆಳಿಗ್ಗೆ 10 ಗಂಟೆಗೆ ಎಲ್.ಎಫ್. ರಸ್ಕಿನ್ ಸಭಾಂಗಣದಲ್ಲಿ ಕೃತಿ ಲೋಕಾರ್ಪಣೆ ಹಾಗೂ ವಿನೂತನ ಯಕ್ಷಪ್ರಸ್ತುತಿ ಕಾರ್ಯಕ್ರಮ ನಡೆಯಲಿದೆ.ತುಮಕೂರು ವಿಶ್ವವಿದ್ಯಾನಿಲಯದ ಹಿರಿಯ ಪ್ರಾಧ್ಯಾಪಕ ಪ್ರೊಫೆಸರ್ ನಿತ್ಯಾನಂದ ಬಿ. ಶೆಟ್ಟಿ ಅವರು ಕರಾವಳಿ ಮತ್ತು ಯಕ್ಷಗಾನದ ಸಾಮಾಜಿಕ ಇತಿಹಾಸ ಕುರಿತಾಗಿ ಸಂಶೋಧನೆ ನಡೆಸಿ ರಚಿಸಿರುವ ‘ಅಳವು ಅರಿಯದ ಭಾಷೆ’ ಕೃತಿಯನ್ನು ಈ ಸಂದರ್ಭದಲ್ಲಿ ಬಿಡುಗಡೆ ಮಾಡಲಾಗುತ್ತದೆ. ಖ್ಯಾತ ಯಕ್ಷಗಾನ ಕಲಾವಿದ ಪಟ್ಲ ಸತೀಶ್ ಶೆಟ್ಟಿ ಅವರು ಪುಸ್ತಕವನ್ನು ಲೋಕಾರ್ಪಣೆ ಮಾಡಲಿದ್ದಾರೆ.
ಕಾರ್ಯಕ್ರಮದಲ್ಲಿ ವಾಸುದೇವ ರಂಗಾಭಟ್ಟ ಹಾಗೂ ಇಂಗ್ಲೆಂಡ್‌ನ ಯೂನಿವರ್ಸಿಟಿ ಆಫ್ ಬಾತ್‌ನ ಸಂಶೋಧಕ ಹರೀಶ್ ಶೆಟ್ಟಿ ಸೇರಿದಂತೆ ಹಲವು ವಿದ್ವಾಂಸರು ಕೃತಿಯ ಕುರಿತು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳಲಿದ್ದಾರೆ.ವಿಶ್ವವಿದ್ಯಾನಿಲಯದ ಕುಲಪತಿ ವಂದನೀಯ ಡಾ. ಪ್ರವೀಣ್ ಮಾರ್ಟಿಸ್ ಅವರ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ಉದ್ಘಾಟನೆಯಾಗಲಿದ್ದು, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಝಕಾರಿಯಾ ಜೋಕಟ್ಟೆ ಉದ್ಘಾಟಿಸಲಿದ್ದಾರೆ. ಕಾಂತಾವರ ಕನ್ನಡ ಸಂಘದ ಕಾರ್ಯಾಧ್ಯಕ್ಷ ಡಾ. ನಾ. ಮೊಗಸಾಲೆ ಉಪಸ್ಥಿತರಿರಲಿದ್ದು, ಕಾರ್ಕಳದ ಯಕ್ಷರಂಗಾಯಣದ ನಿರ್ದೇಶಕ ಬಿ.ಆರ್. ವೆಂಕಟರಮಣ ಐತಾಳರು ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳಲಿದ್ದಾರೆ.
ಅಪರಾಹ್ನ 2 ಗಂಟೆಗೆ ಸಂತ ಅಲೋಶಿಯಸ್ ಯಕ್ಷಬಳಗದಿಂದ ಡಾ. ದಿನೇಶ್ ನಾಯಕ್ ಅವರ ವಿಶಿಷ್ಟ ಪರಿಕಲ್ಪನೆಯಲ್ಲಿ ‘ಯಕ್ಷ-ಗಾನ-ಭಾವ-ಅಭಿವ್ಯಕ್ತಿ’ ಎಂಬ ವಿನೂತನ ಯಕ್ಷಗಾನ ಪ್ರದರ್ಶನ ನಡೆಯಲಿದೆ. ಪಡ್ರೆ ರಕ್ಷಿತ್ ಶೆಟ್ಟಿ ಅವರ ನಿರ್ದೇಶನದಲ್ಲಿ ಈ ಪ್ರದರ್ಶನ ಮೂಡಿಬರಲಿದ್ದು, ಹಿಮ್ಮೇಳದಲ್ಲಿ ಭಾಗವತರಾದ ರವಿಚಂದ್ರ ಕನ್ನಡಿಕಟ್ಟೆ ಹಾಗೂ ಯುವ ಭಾಗವತ ಚಿನ್ಮಯ್ ಭಟ್ ಕಲ್ಲಡ್ಕ ಭಾಗವಹಿಸಲಿದ್ದಾರೆ. ರೋಹಿತ್ ಉಚ್ಚಿಲ್, ಮಧುಸೂದನ ಅಲೆವೂರಾಯ, ಸಮರ್ಥ್ ಉಡುಪ ಮತ್ತು ರಕ್ಷಣ್ ಕುಮಾರ್ ತಂಡದಲ್ಲಿ ಅಭಿನಯಿಸಲಿದ್ದಾರೆ. ರಂಗಭೂಮಿಯ ಬೆಳಕು ಸಂಯೋಜನೆ ಹಾಗೂ ಪಿಟೀಲು ವಾದನ ಈ ಪ್ರದರ್ಶನಕ್ಕೆ ವಿಶೇಷ ಮೆರುಗು ನೀಡಲಿವೆ.