ಎಸ್ ಸಿಡಿಸಿಸಿ ಬ್ಯಾಂಕ್ ನಿಂದ ಆರ್ಥಿಕ ಕ್ಷೇತ್ರದಲ್ಲಿ ಕ್ರಾಂತಿಕಾರಿ ಬದಲಾವಣೆ,ಗ್ರಾಹಕರಿಗೆ ಡಿಜಿಟಲ್ ಬ್ಯಾಂಕಿಂಗ್ – ಯುಪಿಐ ಮತ್ತು ಐಎಂಪಿಎಸ್ ಸೌಲಭ್ಯ : ಡಾ . ಎಂ. ಎನ್. ರಾಜೇಂದ್ರ ಕುಮಾರ್

ಬ್ಯಾಂಕಿಂಗ್ ಸೇವೆಯಲ್ಲಿ ದೇಶಕ್ಕೆ ಮಾದರಿಯಾಗಿ ಕಾರ್ಯ ನಿರ್ವಹಿಸುತ್ತಿರುವ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ (ಎಸ್‌ ಸಿಡಿಸಿಸಿ ಬ್ಯಾಂಕ್) ಅತ್ಯಾಧುನಿಕ ತಂತ್ರಜ್ಞಾನದ ಬ್ಯಾಂಕಿಂಗ್ ಸೇವೆಗಳನ್ನು ಗ್ರಾಹಕರಿಗೆ ನೀಡುತ್ತಿದೆ. ಬ್ಯಾಂಕ್ ಈಗಾಗಲೇ ಕೋರ್ ಬ್ಯಾಂಕಿಂಗ್ ಸೇವೆಯೊಂದಿಗೆ ಆರ್ ಟಿಜಿಎಸ್ / ನೆಫ್ಟ್, ಸಿಟಿಎಸ್, ಎಸ್‌ಎಂಎಸ್, ಎಟಿಎಂ, ಮೊಬೈಲ್ ಬ್ಯಾಂಕಿಂಗ್, ಪಿಒಎಸ್ (POS) ಸೌಲಭ್ಯ ಸೇರಿದಂತೆ ಹಲವಾರು ಡಿಜಿಟಲ್ ಸೇವೆಗಳನ್ನು ಯಶಸ್ವಿಯಾಗಿ ನೀಡುತ್ತಿದೆ ಈ ಸಾಲಿನಲ್ಲಿ ಯುಪಿಐ ಮತ್ತು ಐಎಂಪಿಎಸ್ ಸೇವೆಯು ಸೇರ್ಪಡೆಯಾಗಲಿದ್ದು ಇದರ ಉದ್ಘಾಟನಾ ಕಾರ್ಯಕ್ರಮವು ನಾಳೆ ಮಧ್ಯಾಹ್ನ 12 ಗಂಟೆಗೆ ಬ್ಯಾಂಕಿನ ಸಭಾಂಗಣದಲ್ಲಿ ನಡೆಯಲಿದೆ ಎಂದು ಎಸ್ ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷರಾದ ಡಾ. ಎಂ. ಎನ್. ರಾಜೇಂದ್ರ ಕುಮಾರ್ ತಿಳಿಸಿದರು .

ಎಸ್‌ಸಿಡಿಸಿಸಿ ಬ್ಯಾಂಕಿನ ಸಭಾಂಗಣದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬ್ಯಾಂಕಿಂಗ್ ಕ್ಷೇತ್ರ ಇತ್ತೀಚಿನ ವರ್ಷಗಳಲ್ಲಿ ಪ್ರಮುಖ ಪರಿವರ್ತನೆಗೆ ಒಳಗಾಗಿದೆ. ಡಿಜಿಟಲ್ ಸೇವೆಗಳು ಸಾಂಪ್ರದಾಯಿಕ ಮಾದರಿಯನ್ನು ಬದಲಾಯಿಸಿವೆ. ಇಂದು, ಹೆಚ್ಚಿನ ಗ್ರಾಹಕರು ಇಂಟರ್ನೆಟ್ ಬ್ಯಾಂಕಿಂಗ್, ಮೊಬೈಲ್ ಅಪ್ಲಿಕೇಶನ್‌ಗಳು ಮತ್ತು ತ್ವರಿತ ಪಾವತಿ ವ್ಯವಸ್ಥೆಗಳ ಮೂಲಕ ತಮ್ಮ ಖಾತೆಗಳಿಗೆ ಸುಗಮ ಪ್ರವೇಶವನ್ನು ನಿರೀಕ್ಷಿಸುತ್ತಾರೆ. ಈ ನಿಟ್ಟಿನಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ತಮ್ಮ ಗ್ರಾಹಕರಿಗೆ ಪ್ರಸ್ತುತ ಅವಶ್ಯಕತೆಗೆ ಅನುಗುಣವಾಗಿ ಡಿಜಿಟಲ್ ಬ್ಯಾಂಕಿಂಗ್ ಅನ್ನು ಕೂಡಾ ಅಳವಡಿಸಿಕೊಂಡಿದೆ ಎಂದರು .

ಡಿಜಿಟಲ್ ಬ್ಯಾಂಕಿಂಗ್ ಸೇವೆಗಳನ್ನು ಮತ್ತಷ್ಟು ವಿಸ್ತರಿಸುವ ಉದ್ದೇಶದಿಂದ ನಮ್ಮ ಬ್ಯಾಂಕ್ 16 ಸೆಪ್ಟೆಂಬರ್ 2025 ರಿಂದ ಐಎಂಪಿಎಸ್ (IMPS Immediate Payment Service) ಸೇವೆಯನ್ನು ಆರಂಭಿಸಿದೆ. ಈ ಸೇವೆಯ ಮೂಲಕ ನಮ್ಮ ಬ್ಯಾಂಕಿನ ಮೊಬೈಲ್ ಅಪ್ಲಿಕೇಶನ್ ಬಳಸಿ ಗ್ರಾಹಕರು ಕ್ಷಣಾರ್ಧದಲ್ಲಿ ಹಣ ವರ್ಗಾವಣೆ ಮಾಡುವ ಸೌಲಭ್ಯವನ್ನು ಪಡೆಯುತ್ತಿದ್ದಾರೆ. ಐಎಂಪಿಎಸ್ ಎಂಬುದು ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (NPCI) ಅಭಿವೃದ್ಧಿ ಪಡಿಸಿದ ತ್ವರಿತ ಹಣ ವರ್ಗಾವಣೆ ವ್ಯವಸ್ಥೆಯಾಗಿದ್ದು, ಇದು 24×7, ವಾರಾಂತ್ಯ ಮತ್ತು ಸಾರ್ವಜನಿಕ ರಜೆ ದಿನಗಳಲ್ಲಿಯೂ ಕಾರ್ಯನಿರ್ವಹಿಸುತ್ತದೆ P2A (person to Account) ಮೂಲಕ ಖಾತೆ ಸಂಖ್ಯೆ ಮತ್ತು IFSC ಬಳಸಿ ಯಾವುದೇ ಬ್ಯಾಂಕ್ ಖಾತೆಗೆ ಹಣ ವರ್ಗಾವಣೆ ಮಾಡಬಹುದು ಎಂದರು .

ಈ ಸೇವೆಯ ಮೂಲಕ ಗ್ರಾಹಕರು ಬ್ಯಾಂಕ್‌ ಗೆ ಭೇಟಿ ನೀಡುವ ಅವಶ್ಯಕತೆ ಇಲ್ಲದೆ. ಮನೆಯಲ್ಲಿಯೇ ಅಥವಾ ಎಲ್ಲಿಂದ ಬೇಕಾದರೂ 24×7 ಸಮಯದಲ್ಲಿ ಹಣ ವರ್ಗಾವಣೆ ಮಾಡಬಹುದು. ಇದು ವೇಗವಾದ, ಸುರಕ್ಷಿತ ಹಾಗೂ ಸುಲಭವಾದ ಡಿಜಿಟಲ್ ಪಾವತಿ ವಿಧಾನವಾಗಿದೆ ಎಂದರು.ಯುಪಿಐ ಅನುಕೂಲಗಳನ್ನು ವಿವರಿಸುತ್ತಾ..ಯುಪಿಐ ಮೂಲಕ ಗ್ರಾಹಕರು ತಕ್ಷಣ ಹಣ ಕಳುಹಿಸಬಹುದು ಹಾಗೂ ಸ್ವೀಕರಿಸಬಹುದು,ಹಣ ಸ್ವೀಕರಿಸುವವರ ಯುಪಿಐ ಐಡಿಗೆ ನೇರವಾಗಿ ಹಣ ಕಳುಹಿಸಬಹುದು, ಕ್ಯೂಆರ್ (QR) ಕೋಡ್ ಸ್ಕ್ಯಾನ್ ಮಾಡಿ ಪಾವತಿ ಮಾಡಬಹುದು,ಆನ್‌ಲೈನ್ ಖರೀದಿ ಹಾಗೂ ಬಿಲ್ ಪಾವತಿ ಮಾಡಬಹುದು.ದೇಶದ ಯಾವುದೇ ಬ್ಯಾಂಕ್ ಖಾತೆಗೆ ಹಣ ವರ್ಗಾವಣೆ ಮಾಡಬಹುದು.ಈ ಎಲ್ಲಾ, ವ್ಯವಹಾರಗಳು ಯುಪಿಐ ಪಿನ್ ಮತ್ತು ಎರಡು ಹಂತದ ಭದ್ರತಾ ವ್ಯವಸ್ಥೆಯಿಂದ ಸುರಕ್ಷಿತವಾಗಿರುತ್ತವೆ.

‘ಯುಪಿಐ ಸೇವೆಯಿಂದ ಸಣ್ಣ ವ್ಯಾಪಾರಿಗಳು, ರೈತರು, ಅಂಗಡಿ ಮಾಲಕರು, ವಿದ್ಯಾರ್ಥಿಗಳು, ಉದ್ಯೋಗಿಗಳು ಎಲ್ಲರೂ ಪ್ರಯೋಜನ ಪಡೆಯಬಹುದು.ಒಬ್ಬ ಚಿಲ್ಲರೆ ವ್ಯಾಪಾರಿಯೂ ಈಗ QR ಕೋಡ್ ಮೂಲಕ ಡಿಜಿಟಲ್ ಪಾವತಿ ಸ್ವೀಕರಿಸಬಹುದು. ಇದು ನಮ್ಮ ಬ್ಯಾಂಕಿನ ಆರ್ಥಿಕತೆಯನ್ನು ಇನ್ನಷ್ಟು ಬಲಪಡಿಸುತ್ತದೆ. ಇದು ದಿನನಿತ್ಯದ ಸಣ್ಣ ಮೊತ್ತದ ಪಾವತಿಗಳಿಗೆ, ಇ-ಕಾಮರ್ಸ್ ವ್ಯವಹಾರಗಳಿಗೆ ಹಾಗೂ ವ್ಯಕ್ತಿಯಿಂದ ವ್ಯಕ್ತಿಗೆ ಹಣ ವರ್ಗಾವಣೆ ಮಾಡಲು ಅತ್ಯಂತ ಅನುಕೂಲಕರವಾಗಿದೆ ಎಂದರು.ಈ ಸಂದರ್ಭದಲ್ಲಿ ಬ್ಯಾಂಕಿನ ಆಡಳಿತ ಮಂಡಳಿಯ ಸದಸ್ಯರು ಉಪಸ್ತಿತರಿದ್ದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!