ಮಂಗಳೂರು :ಚಿಕ್ಕಮಗಳೂರಿನಲ್ಲಿ ಹಿಂದೂ ಮನೆ ಮೇಲೆ ಕಲ್ಲು ತೂರಾಟ ಘಟನೆಗೆ ಸಂಬಂಧಿಸಿ ಈಗಾಗಲೇ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಗೃಹ ಸಚಿವ ಡಾ. ಪರಮೇಶ್ವರ್ ಸ್ಪಷ್ಟಪಡಿಸಿದ್ದಾರೆ.ಕಾನೂನು ಪ್ರಕಾರ ಪೊಲೀಸರು ಏನು ಕ್ರಮ ತೆಗೆದುಕೊಳ್ಳಬೇಕೋ ಅದನ್ನು ತೆಗೆದುಕೊಳ್ಳುತ್ತಾರೆ ಎಂದವರು ಹೇಳಿದ್ದಾರೆ.ಹೆಣ್ಣು ಮಗಳು ದಲಿತ ಸಮುದಾಯಕ್ಕೆ ಸೇರಿದವರು ಅಂತಾ ಗೊತ್ತಾಗಿದೆ.ಆ ಪ್ರಕಾರ ಪೊಲೀಸರು ಪಿಸಿಆರ್ ಆ್ಯಕ್ಟ್ ಅಡಿ ಪ್ರಕರಣ ದಾಖಲಿಸುತ್ತಾರೆ ಎಂದವರು ಆ ಕುರಿತ ಪ್ರಶ್ನೆಗೆ ಉತ್ತರಿಸಿದರು.
ಕಾಂಗ್ರೆಸ್ ಶಾಸಕರ ವಿದೇಶ ಪ್ರವಾಸಕ್ಕೆ ಸಂಬಂಧಿಸಿದ ಪ್ರಶ್ನೆಗೆ ಅವರು ಯಾಕೆ ಹೋಗ್ತಿದ್ದಾರೆ ಅಂತಾ ಗೊತ್ತಿಲ್ಲ.ಅವರ ಹಣದಲ್ಲಿ ಅವರು ಎಲ್ಲಿ ಬೇಕಾದರೂ ಹೋಗಬಹುದು.ಆಸ್ಟ್ರೇಲಿಯಾ ಸೇರಿದಂತೆ ಎಲ್ಲಾ ಕಡೆ ಕೃಷಿ ಇದೆ ಎಂದರು.ಪ್ರವಾಸ ಕೈಗೊಂಡವರಿಗೆ ಬಜೆಟ್ ನಲ್ಲಿ ಕೆಲಸ ಇಲ್ಲ. ಅದನ್ನೆಲ್ಲ ಮಾಡುವುದು ಮುಖ್ಯಮಂತ್ರಿಗಳು. ಕಾಂಗ್ರೆಸ್ ಶಾಸಕಾಂಗ ಪಕ್ಷ ಸಭೆಯಲ್ಲಿ ಬಜೆಟ್ ಬಗ್ಗೆ ತಮ್ಮ ಅಹವಾಲುಗಳನ್ನು ಶಾಸಕರು ಹೇಳಿದ್ದಾರೆ.ಆದ್ದರಿಂದ ಬಜೆಟ್ ಸಂದರ್ಭದಲ್ಲಿ ಅವರ ಪ್ರವಾಸದಿಂದ ಬಜೆಟ್ ಮೇಲೆ ಪರಿಣಾಮ ಆಗುವಂತಹದ್ದೇನಿಲ್ಲ ಎಂದೂ ಡಾ. ಪರಮೇಶ್ವರ್ ಹೇಳಿದರು.
ಪ್ರಿಯಾಂಕ ಖರ್ಗೆ ಆರ್ ಎಸ್ ಎಸ್ ಕುರಿತು ವಿವಾದಾತ್ಮಕ ಹೇಳಿಕೆ ನೀಡಿರುವ ಕುರಿತ ಪ್ತಶ್ನೆಗೆ ಪ್ರಿಯಾಂಕ ಖರ್ಗೆ ಅವರ ಅಭಿಪ್ರಾಯ ಹೇಳಿದ್ದಾರೆ ಎಂದುತ್ತರಿಸಿದರು.ಅರ್ ಎಸ್ ಎಸ್ ಕುರಿತು ನನಗೆ ನನ್ನೆದೇ ಅಭಿಪ್ರಾಯವಿದೆ.ಪ್ರಿಯಾಂಕ ಖರ್ಗೆ ಅವರಿಗೆ ಅರ್ ಎಸ್ ಎಸ್ ಬಗ್ಗೆ ಅವರದೇ ಆದ ಅಭಿಪ್ರಾಯವಿದ್ದು, ಅದನ್ನು ಹೇಳಿದ್ದಾರೆ. ಅವರ ಅಭಿಪ್ರಾಯಕ್ಕೆ ನನ್ನ ಹೇಳಿಕೆ ಅಗತ್ಯವಿಲ್ಲ ಎಂದು ಗೃಹ ಸಚಿವರು ಉತ್ತರಿಸಿದರು.ಎಚ್.ಸಿ ಮಹದೇವಪ್ಪ ದಲಿತ ಸಿ.ಎಂ ಹೇಳಿಕೆ ವಿಚಾರ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು ಮಹದೇವಪ್ಪವರು ಸಮರ್ಥರಿದ್ದಾರೆ.ಯಾವುದೇ ಜವಬ್ದಾರಿ ಕೊಟ್ಟರೂ ತೆಗೆದುಕೊಳ್ಳುವುದಕ್ಕೆ ಅವರಿಗೆ ಸಾಮರ್ಥ್ಯ ಇದೆ ಎಂದರು.
ಜನಸಮುದಾಯದಲ್ಲಿ ಕೆಲವರು ಅವರವರ ಲೀಡರ್ ನ್ನು ಆರಿಸಿಕೊಳ್ಳುತ್ತಾರೆ.ಜನ ಅವರ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಾರೆ.ಅದನ್ನು ತಪ್ಪು ಅಂತಾ ನಾವು ಹೇಳುವುದಕ್ಕೆ ಆಗಲ್ಲ.ಅವರ ಅಭಿಪ್ರಾಯ ಅದು ಎಂದರು.ನಮ್ಮಲ್ಲಿ ಒಂದು ವ್ಯವಸ್ಥೆ ಇದೆ, ಹೈಕಮಾಂಡ್ ಇದೆ, ಸಂದರ್ಭ ಬಂದರೆ ಹೈಕಮಾಂಡ್ ಆ ಬಗ್ಗೆ ತೀರ್ಮಾನ ಮಾಡ್ತದೆ.ಯಾರೋ ಹತ್ತು ಜನ ನನ್ನ ಪರವಾಗಿ ಜೈಕಾರ ಹಾಕಿದ್ರೆ ಆಗಲ್ಲ.ಆದ್ರೆ ಹೈಕಮಾಂಡ್ ನವರು ಎಲ್ಲವನ್ನು ನೋಡಿ ತೀರ್ಮಾನ ತೆಗೆದುಕೊಳ್ಳುತ್ತಾರೆ ಎಂದರು.ಈಗ ದಲಿತ ಸಿ.ಎಂ ಎಂಬ ಚರ್ಚೆಯೇ ಇಲ್ಲ.ನಾವು ಆಡಳಿತದ ಮೇಲೆ ನಿಗಾ ಇರಿಸಿದ್ದೇವೆ ಎಂದವರು ಹೇಳಿದರು.