ಕೊಂಚಾಡಿ, ಮಂಗಳೂರು: ವಿಶ್ವ ಮಹಿಳಾ ದಿನಾಚರಣೆಯ ಅಂಗವಾಗಿ ಶ್ರೀ ದುರ್ಗಾಪರಮೇಶ್ವರಿ ನಾಗಕನ್ನಿಕಾ ದೇವಸ್ಥಾನ ಇದರ ಆಶ್ರಯದಲ್ಲಿ ಹಾಗೂ ಯಕ್ಷ ಸ್ನೇಹ ಕಲಾ ಪ್ರತಿಷ್ಠಾನ (ರಿ) ಇವರ ಆಯೋಜನೆಯಲ್ಲಿ ಮಹಿಳಾ ಯಕ್ಷಗಾನ ತಾಳಮದ್ದಳೆ ಅಷ್ಟಾಹ ಸಂಭ್ರಮ ಮಾರ್ಚ್ 1ರಿಂದ 8, 2026ರವರೆಗೆ ನಡೆಯಲಿದೆ. ಕಾರ್ಯಕ್ರಮವು ಶ್ರೀಮತಿ ಲೀಲಾವತಿ ಬೈಪಡಿತ್ತಾಯ ವೇದಿಕೆ, ದೇವಸ್ಥಾನ ಆವರಣ, ಕೊಂಚಾಡಿಯಲ್ಲಿ ಪ್ರತಿದಿನ ಸಂಜೆ ಆಯೋಜಿಸಲಾಗಿದೆ.
ಕರಾವಳಿಯ ಗಂಡುಕಲೆ ಎಂದೇ ಖ್ಯಾತಿಯನ್ನ ಪಡೆದ ಯಕ್ಷಗಾನದಲ್ಲಿ ಮಹಿಳೆಯರ ಸಾಧನೆ, ಸಮರ್ಪಣೆ ಹಾಗೂ ಕಲಾ ಸಾಮರ್ಥ್ಯವನ್ನು ಸಮಾಜದ ಮುಂದಿಡುವ ಉದ್ದೇಶದಿಂದ ಈ ಅಷ್ಟಾಹ ಸಂಭ್ರಮವನ್ನು ಹಮ್ಮಿಕೊಳ್ಳಲಾಗಿದೆ. ಸ್ನೇಹಿತರ ಬಳಗವಾಗಿ ಆರಂಭಗೊಂಡ ಈ ಕಲಾ ಚಟುವಟಿಕೆ, ಮದ್ದಳೆ ಕಲಾವಿದ ಹಾಗೂ ಛಾಯಾಗ್ರಾಹಕರಾದ ಮಧುಸೂದನ್ ಅಲೆವೂರಾಯರ ಮಾರ್ಗದರ್ಶನದಲ್ಲಿ ಬೆಳೆದು, ಇಂದು ಪುರುಷರು, ಮಹಿಳೆಯರು ಮತ್ತು ಮಕ್ಕಳನ್ನು ಒಳಗೊಂಡ ಸಮಗ್ರ ಕಲಾತಂಡವಾಗಿ ರೂಪುಗೊಂಡಿದೆ. ದೇವಿಯ ಅನುಗ್ರಹ ಹಾಗೂ ಗುರುಗಳ ಆಶೀರ್ವಾದದಿಂದ ಈ ತಂಡವು ಇಂದು ನೋಂದಾಯಿತ ಸಂಸ್ಥೆಯಾಗಿ ಭಾರತೀಯ ಲಲಿತ ಕಲೆಗಳ ಪ್ರೋತ್ಸಾಹದಲ್ಲಿ ತೊಡಗಿಸಿಕೊಂಡಿದೆ.
ಉದ್ಘಾಟನೆ:
ಮಾರ್ಚ್ 1ರಂದು ಅಪರಾಹ್ನ ಭಾರತ ಮಾತ ಪೂಜನೆಯೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ದೊರೆಯಲಿದೆ. ಯಕ್ಷ ಸ್ನೇಹ ಕಲಾ ಪ್ರತಿಷ್ಠಾನದ ಅಧ್ಯಕ್ಷೆ ಗೀತಾ ಲಕ್ಷ್ಮೀಶ್ ಅವರ ಅಧ್ಯಕ್ಷತೆಯಲ್ಲಿ ನಡೆಯುವ ಈ ಸಮಾರಂಭದಲ್ಲಿ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಮತ್ತು ಸಾಮಾಜಿಕ ಕ್ಷೇತ್ರಗಳ ಗಣ್ಯರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಸಂಜೆ ಉದ್ಘಾಟನಾ ಸಮಾರಂಭದಲ್ಲಿ ದೀಪ ಪ್ರಜ್ವಲನೆಯೊಂದಿಗೆ ಹಿರಿಯ ಕಲಾವಿದರು, ನೃತ್ಯಗುರುಗಳು ಮತ್ತು ಕಲಾ ಪೋಷಕರ ಉಪಸ್ಥಿತಿಯಲ್ಲಿ ಕಾರ್ಯಕ್ರಮಕ್ಕೆ ಅಧಿಕೃತ ಚಾಲನೆ ಸಿಗಲಿದೆ.
ಅಷ್ಟಾಹ ಸಂಭ್ರಮದ ವೈಶಿಷ್ಟ್ಯ:
ಮಾರ್ಚ್ 1ರಿಂದ 8ರವರೆಗೆ ಪ್ರತಿದಿನ ವಿವಿಧ ಮಹಿಳಾ ಯಕ್ಷಗಾನ ತಂಡಗಳಿಂದ ಆಯ್ದ ಪ್ರಸಂಗಗಳ ತಾಳಮದ್ದಳೆ ಪ್ರದರ್ಶನ ನಡೆಯಲಿದೆ.
“ಸುದರ್ಶನ ಗರ್ವಭಂಗ”, “ಇಂದ್ರಜಿತು ಕಾಳಗ”, “ಇಂದ್ರ ಕೀಲಕ”, “ಕದಂಬ ಕೌಶಿಕೆ”, “ಭಕ್ತ ಸುಧನ್ವ”, “ಸುದರ್ಶನ ವಿಜಯ”, “ಶ್ಯಮಂತಕ ಮಣಿ – ಜಾಂಬವತಿ ಕಲ್ಯಾಣ”, “ಶ್ರೀ ಏಕಾದಶಿ ದೇವಿ ಮಹಾತ್ಮ” ಹಾಗೂ ಸಮಾರೋಪ ದಿನ “ಗಿರಿಜಾ ಕಲ್ಯಾಣ” ಪ್ರಸಂಗಗಳು ಪ್ರಸ್ತುತಗೊಳ್ಳಲಿವೆ.ಪ್ರತಿದಿನ ನಡೆಯುವ ವೇದಿಕೆ ಕಾರ್ಯಕ್ರಮಗಳಲ್ಲಿ ಧಾರ್ಮಿಕ, ಸಾಂಸ್ಕೃತಿಕ, ಸಾಮಾಜಿಕ, ಮಾಧ್ಯಮ ಮತ್ತು ಆಡಳಿತ ಕ್ಷೇತ್ರದ ಗಣ್ಯರು ಅಧ್ಯಕ್ಷತೆ ಹಾಗೂ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದು, ಮಹಿಳಾ ಯಕ್ಷಗಾನ ಕಲಾವಿದರ ಸಾಧನೆಗೆ ಗೌರವ ಸನ್ಮಾನಗಳು ನಡೆಯಲಿವೆ.
ಸಮಾರೋಪ:
ಮಾರ್ಚ್ 8ರಂದು ವಿಶ್ವ ಮಹಿಳಾ ದಿನದಂದು ನಡೆಯುವ ಸಮಾರೋಪ ಸಮಾರಂಭದಲ್ಲಿ ಖ್ಯಾತ ಭಾಗವತರು, ಯಕ್ಷಗುರುಗಳು, ಕಲಾ ಪೋಷಕರು ಹಾಗೂ ಗಣ್ಯರು ಭಾಗವಹಿಸಲಿದ್ದು, ಯಕ್ಷಗಾನ ಕ್ಷೇತ್ರದಲ್ಲಿ ಮಹಿಳೆಯರ ಪಾತ್ರ ಮತ್ತು ಕೊಡುಗೆಯನ್ನು ವಿಶೇಷವಾಗಿ ಗುರುತಿಸಲಾಗುವುದು.ಒಟ್ಟಾರೆ, ಈ ಅಷ್ಟಾಹ ಸಂಭ್ರಮವು ಮಹಿಳಾ ಶಕ್ತಿಯ ಸಾಂಸ್ಕೃತಿಕ ಅಭಿವ್ಯಕ್ತಿ, ಯಕ್ಷಗಾನದ ಸಮಕಾಲೀನ ಬೆಳವಣಿಗೆ ಹಾಗೂ ಮುಂದಿನ ಪೀಳಿಗೆಗೆ ಕಲಾ ಪ್ರೇರಣೆಯ ಮಹತ್ವದ ವೇದಿಕೆಯಾಗಲಿದೆ ಎಂದು ಯಕ್ಷ ಸ್ನೇಹ ಕಲಾ ಪ್ರತಿಷ್ಠಾನದ ಅಧ್ಯಕರಾದ ಶ್ರೀಮತಿ ಗೀತಾ ಲಕ್ಷ್ಮೀಶ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವಿಶ್ವ ಮಹಿಳಾ ದಿನಾಚರಣೆ ಹಿನ್ನೆಲೆಯಲ್ಲಿ ಮಾ.1ರಿಂದ 8ರ ವರೆಗೆ ಕೊಂಚಾಡಿಯಲ್ಲಿ ಮಹಿಳಾ ಯಕ್ಷಗಾನ ತಾಳಮದ್ದಳೆ ಅಷ್ಟಾಹದ ಆಮಂತ್ರಣ ಪತ್ರಿಕೆಯನ್ನು ಇಂದು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಗುರುಗಳಾದ ಶ್ರೀ ಶ್ರೀ ಗುರುದೇವಾನಂದ ಸ್ವಾಮೀಜಿಯವರು ಬಿಡುಗಡೆ ಮಾಡಿದರು.