ಬೈಂದೂರು:ಕೊರಗ ಸಮುದಾಯದ ಮನೆಯಲ್ಲಿ ವಾಸ್ತವ್ಯ ಹೂಡಿರುವುದು, ಅವರೊಂದಿಗೆ ಸಂವಾದ ನಡೆಸಿರುವುದು ಅವಿಸ್ಮರಣೀಯ ಕ್ಷಣಗಳಲ್ಲಿ ಒಂದು ಎಂದು ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ ಅವರು ಅಭಿಪ್ರಾಯಿಸಿದ್ದಾರೆ.ಹರ್ಕೂರು ಗ್ರಾಮದ ನಾರ್ಕಳಿ ಮದುಕೊಡ್ಲು ಪರಿಸರದ ಕೊರಗ ಸಮುದಾಯ ಬಂಧುಗಳ ಮನೆಯಲ್ಲಿ ಗ್ರಾಮ ವಾಸ್ತವ್ಯ ಕೈಗೊಂಡ ಶಾಸಕರು ಆ ಪ್ರದೇಶದ ಜನತೆಯ ಸಮಸ್ಯೆಗಳು ಮತ್ತು ಬುಡಕಟ್ಟು ಜನರು ಎದುರಿಸು ತ್ತಿರುವ ಸಮಸ್ಯೆಗಳ ಸಾಕ್ಷಾತ್ ಮಾಹಿತಿ ಪಡೆದರು.
ಸಮಸ್ಯೆ ಅರಿಯಲು ಗಂಟಿಹೊಳೆ ಅವರು ತಮ್ಮ ಗ್ರಾಮದಲ್ಲಿ ವಾಸ್ತವ್ಯದ ಮಾಡಿರುವ ಬಗ್ಗೆ ಮದುಕೊಡ್ಲು ಪರಿಸರದ ಕೊರಗ ಸಮುದಾಯದ ಜನರು ಪ್ರತಿಕ್ರಿಯಿಸಿದ್ದು, ಶಾಸಕರು ತಮ್ಮ ಬಳಿಗೆ ಬಂದು ಇಲ್ಲಿ ಪರಿಸ್ಥಿತಿಯನ್ನು ಅರ್ಥ ಮಾಡಿಕೊಂಡಿದ್ದಾರೆ. ಇದರಿಂದ ಭವಿಷ್ಯದಲ್ಲಿ ಮೂಲಸೌಕರ್ಯಗಳ ಅಭಿವೃದ್ಧಿಯ ಬಾಗಿಲು ಈ ಭಾಗದಲ್ಲಿ ತೆರೆಯಬಹುದು ಎಂಬ ಆಶಾವಾದವನ್ನು ವ್ಯಕ್ತಪಡಿಸಿದ್ದಾರೆ.
ತಮ್ಮ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿರುವ ಶಾಸಕ ಗಂಟಿಹೊಳೆ ಅವರು, ಸಮಾಜದ ಮುಖ್ಯವಾಹಿನಿಗೆ ತೆರೆದುಕೊಳ್ಳುತ್ತಿರುವ ಕೊರಗ ಸಮಾಜವನ್ನು ಹಿಂದೂ ಸಮಾಜ ಪ್ರೀತಿಯಿಂದ ಬರಮಾಡಿಕೊಳ್ಳುತ್ತಿದೆ. ಹಿಂದೂ ಸಮಾಜದ ಅವಿಭಾಜ್ಯ ಅಂಗವಾಗಿರುವ ಕೊರಗ ಸಮುದಾಯದ ಮನೆಯಲ್ಲಿ ವಾಸ್ತವ್ಯ ಹೊಸ ಪ್ರೇರಣೆಯನ್ನು ನೀಡಿದೆ ಮಾತ್ರವಲ್ಲದೆ ಅವರ ನೋವು ನಲಿವುಗಳನ್ನು ಅರಿತುಕೊಳ್ಳಲು ಅವಕಾಶ ಮಾಡಿಕೊಟ್ಟಿದೆ ಎಂದು ಬರೆದಿದ್ದಾರೆ.