ನೇತ್ರಾವತಿ ಸೇತುವೆಗೆ ಮಿನಿ ಟೆಂಪೋ ಡಿಕ್ಕಿ – ಫೆನ್ಸಿಂಗ್‌ಗೆ ಭಾರಿ ಹಾನಿ

ಮಂಗಳೂರಿನ ನೇತ್ರಾವತಿ ಸೇತುವೆ ಆವರಣ ಗೋಡೆಗೆ ಮಿನಿ ಟೆಂಪೋವೊಂದು ಬುಧವಾರ ಮುಂಜಾನೆ ಡಿಕ್ಕಿ ಹೊಡೆದು ಪಲ್ಟಿಯಾಗಿದೆ. ಟೆಂಪೋ ಚಾಲಕ ಸಣ್ಣ ಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾನೆ.ಈ ಘಟನೆಯಿಂದ ಸೇತುವೆಗೆ ಅರವತ್ತು ಲಕ್ಷ ರೂಪಾಯಿ ವೆಚ್ಚದಲ್ಲಿ ಅಳವಡಿಸಲಾಗಿದ್ದ ಕಬ್ಬಿಣದ ತಡೆಬೇಲಿಗೆ ತೀವ್ರ ಹಾನಿಯಾಗಿದೆ.

ಐದು ವರುಷಗಳ ಹಿಂದೆ ನೇತ್ರಾವತಿ ಸೇತುವೆಯಿಂದ ನದಿಗೆ ಜಿಗಿದು ಹಲವರು ಆತ್ಮಹತ್ಯೆಗೈದಿದ್ದ ಘಟನೆ ನಡೆದಿತ್ತು. ಮಾಜಿ ಮುಖ್ಯಮಂತ್ರಿ ಎಸ್.ಎಂ ಕೃಷ್ಣ ಅವರ ಅಳಿಯ, ಕಾಫಿ ಡೇ ಸಂಸ್ಥಾಪಕ ಸಿದ್ಧಾರ್ಥ ಇದೇ ನೇತ್ರಾವತಿ ಸೇತುವೆಯಿಂದ ನದಿಗೆ ಜಿಗಿದು ಆತ್ಮಹತ್ಯೆಗೈದ ಘಟನೆ ದೇಶದಾದ್ಯಂತ ಸುದ್ದಿಯಾಗಿತ್ತು. ಇದರ ಬೆನ್ನಲ್ಲೇ ನೇತ್ರಾವತಿ ಸೇತುವೆಯಿಂದ ಜಿಗಿದು ಆತ್ಮಹತ್ಯೆಗೆ ಮುಂದಾಗುವುದನ್ನು ತಡೆಯಲು ನಗರಾಭಿವೃದ್ಧಿ ಇಲಾಖೆಯ 63 ಲಕ್ಷ ರೂಪಾಯಿ ಅನುದಾನದಿಂದ ನೇತ್ರಾವತಿ ಸೇತುವೆಯುದ್ದಕ್ಕೂ ಫೆನ್ಸಿಂಗ್‌ ಮತ್ತು ಸಿಸಿಟಿವಿಯನ್ನು ಅಳವಡಿಸಲಾಗಿತ್ತು.

ಇದರಿಂದಾಗಿ ಕಳೆದ ಐದು ವರುಷಗಳಲ್ಲಿ ಇಲ್ಲಿ ಆತ್ಮಹತ್ಯೆ ಸರಣಿ ಕಡಿಮೆಯಾಗಿತ್ತು. ಇಬ್ಬರು ಮಾತ್ರ ಸೇತುವೆ ಆವರಣ ಗೋಡೆಗೆ ಅಳವಡಿಸಿದ ಪೈಪ್ ಲೈನ್ ಮೂಲಕ ಪ್ರಯಾಸದಿಂದ ಹಾದು ಹೋಗಿ ನದಿಗೆ ಜಿಗಿದು ಆತ್ಮಹತ್ಯೆಗೈದಿದ್ದರು. ಅದು ಬಿಟ್ಟರೆ ಫೆನ್ಸಿಂಗ್‌ ಅಳವಡಿಕೆ ಯೋಜನೆ ಬಹುತೇಕ ಫಲಶ್ರುತಿ ಕಂಡಿತ್ತು. ಫೆನ್ಸಿಂಗ್ ಮತ್ತು ಸಿಸಿಟಿವಿ ಅಳವಡಿಸಿದ್ದ ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರವು ಅದರ ನಿರ್ವಹಣೆಯನ್ನು ಮಂಗಳೂರು ಮಹಾನಗರ ಪಾಲಿಕೆಗೆ ಹಸ್ತಾಂತರಿಸಿತ್ತು.

ಇದೀಗ ಟೆಂಪೋ ಢಿಕ್ಕಿಯ ಪರಿಣಾಮ ಸೇತುವೆಯ ಫೆನ್ಸಿಂಗ್ ಅರೆಬರೆ ಕಿತ್ತುಹೋಗಿದ್ದು ಇದರ ವೀಡಿಯೋ ತುಣುಕುಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಮತ್ತೆ ಆತ್ಮಹತ್ಯೆಗೆ ಸೇತುವೆ ತೆರೆದುಕೊಂಡಿದೆಯೇ ಎನ್ನುವ ಮಾತುಗಳು ಜಾಲತಾಣದಲ್ಲಿ ಬರತೊಡಗಿವೆ. ಮಹಾನಗರ ಪಾಲಿಕೆಯ ಅಧಿಕಾರಿಗಳು ಹರಿದಿರುವ ಬೇಲಿಯನ್ನು ದುರಸ್ತಿ ಪಡಿಸಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!