ಮಾ. 4 ರಿಂದ 8ರ ವರೆಗೆ ಸಸಿಹಿತ್ಲು ಶ್ರೀ ಭಗವತಿ ದೇವಸ್ಥಾನದ ಬ್ರಹ್ಮಕಲಶೋತ್ಸವ … .. ! ಗಂಗಾರತಿಗೆ ಸಾಕ್ಷಿಯಾಗಲಿದೆ ಕಡಲ ಕಿನಾರೆ ..!

ಮಂಗಳೂರು:ಕಡಲ ಕಿನಾರೆಯಲ್ಲಿ ನೆಲೆಯಾದ ಪುರಾಣ ಪ್ರಸಿದ್ದ ಸಸಿಹಿತ್ಲು ಶ್ರೀ ಭಗವತೀ ಅಮ್ಮನವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ ಮಹೋತ್ಸವವು ಇದೇ ಬರುವ ಮಾ. 4 ರಿಂದ 8ರ ವರೆಗೆ ವಿಜೃಂಭಣೆಯಿಂದ ನಡೆಯಲಿದೆ ಎಂದು ಮಾಜಿ ಸಂಸದರು ಹಾಗೂ ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷರಾದ ನಳಿನ್ ಕುಮಾರ್ ಕಟೀಲ್ ತಿಳಿಸಿದರು .

ಅವರು ದೇವಾಲಯದ ಸಭಾಂಗಣದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ , ಶ್ರೀ ಭಗವತಿ ಮಾತೆಯು ಅನೇಕ ಕಾರಣಿಕ ಶಕ್ತಿಯನ್ನು ಈ ಮಣ್ಣಿನಲ್ಲಿ ಅವತರಿಸಿದ ಐತಿಹ್ಯ ಈ ಮಣ್ಣಿಗಿದೆ . ವಿದ್ವಾನ್ ವೇದಮೂರ್ತಿ ಶ್ರೀ ಕೃಷ್ಣಮೂರ್ತಿ ಭಟ್ ಹೊಯ್ಲಿಗುಡ್ಡೆ ಹಾಗೂ ಶ್ರೀಪತಿ ಭಟ್ ಹೊಯ್ಗೆಗುಡ್ಡೆ ಇವರ ನೇತೃತ್ವದಲ್ಲಿ ಮತ್ತು ವೇದಮೂರ್ತಿ ಶ್ರೀ ವೆಂಕಟೇಶ ತಂತ್ರಿ ಎಡಪದವು ಇವರ ಮಾರ್ಗದರ್ಶನದಲ್ಲಿ ಬ್ರಹ್ಮಕಲಶೋತ್ಸವ ಪೂಜಾದಿ ಕ್ರಮಗಳು ನಡೆಯಲಿದೆ ಎಂದರು .

ದೇವಸ್ಥಾನದಲ್ಲಿ ದೊಡ್ಡ ಮಟ್ಟದ ಅಭಿವೃದ್ಧಿಗೆ ಸರ್ಕಾರದ ಅನುದಾನ ಇಲ್ಲದೆ ದಾನಿಗಳ ಸಹಾಯದಿಂದ ನಡೆದಿದೆ ಅನೇಕ ದಾನಿಗಳು ಲಕ್ಷಾಂತರ ರೂಪಾಯಿಗಳನ್ನು ನೀಡಿದ್ದು, ಮುಂಬೈ ಸಮಿತಿಯ ಸಹಕಾರವೂ ಮಹತ್ವದ್ದಾಗಿದೆ ಇದರಲ್ಲಿ ಬ್ರಹ್ಮಕಲಶೋತ್ಸವ ಸಮಿತಿ ಮುಂಬೈ ಇದರ ಗೌರವಾಧ್ಯಕ್ಷರಾದ ಕನ್ಯಾನ ಸದಾಶಿವ ಶೆಟ್ಟರು ಈಗಾಗಲೇ ಹದಿನೆಂಟು ಲಕ್ಷ ರೂಪಾಯಿಗಳನ್ನು ಕೊಟ್ಟಿದ್ದಾರೆ ಇನ್ನೂ ಶ್ರೀ ಸನ್ನಿಧಿಯ ಜಿರ್ಣೋಧಾರಕ್ಕೆ ಧಾನ ನೀಡುವುದಾಗಿ ಭರವಸೆ ನೀಡಿದ್ದಾರೆ ಇದರ ಜೊತೆಗೆ ಅನೇಕ ಮಂದಿ ಧಾನಿಗಳ ಸಹಕಾರ ಕೂಡ ಇದೆ ಎಂದರು .

ಈ ಬಾರಿಯ ಬ್ರಹ್ಮಕಲಶೋತ್ಸವಕ್ಕಾಗಿ ದೇವಸ್ಥಾನದಲ್ಲಿ ಕೋಟ್ಯಂತರ ರೂಪಾಯಿ ವೆಚ್ಚದ ಅಭಿವೃದ್ಧಿ ಕಾರ್ಯಗಳು ಪೂರ್ಣಗೊಂಡಿವೆ. ಎರಡು ಪ್ರಧಾನ ಗೋಪುರಗಳ ಪುನರ್ ನವೀಕರಣ, ಗರ್ಭಗುಡಿಗೆ ಬೆಳ್ಳಿ ಹಾಗೂ ತಾಮ್ರದ ಹೊದಿಕೆ ಮತ್ತು ಸುಂದರ ಶಿಲ್ಪಕಲಾಕೃತಿಗಳ ರಚನೆಯೊಂದಿಗೆ ಕ್ಷೇತ್ರವು ನವವಧುವಿನಂತೆ ಕಂಗೊಳಿಸುತ್ತಿದೆ. ಭಕ್ತರ ಅನುಕೂಲಕ್ಕಾಗಿ 10 ಎಕರೆ ವಿಸ್ತೀರ್ಣದ ಪಾರ್ಕಿಂಗ್, ಅಶಕ್ತರಿಗೆ ಇವಿ ವಾಹನ ಸೌಲಭ್ಯ ಹಾಗೂ ಪ್ಲಾಸ್ಟಿಕ್ ಮುಕ್ತ ಪರಿಸರದಲ್ಲಿ ನಿರಂತರ ಅನ್ನಸಂತರ್ಪಣೆಯ ವ್ಯವಸ್ಥೆ ಮಾಡಲಾಗಿದ್ದು ಸುಮಾರು 2 ಲಕ್ಷಕ್ಕೂ ಅಧಿಕ ಮಂದಿ ಭಕ್ತರು ಭಾಗವಹಿಸುವ ನಿರೀಕ್ಷೆಯಿದೆ. ಭವಿಷ್ಯದಲ್ಲಿ ಸನ್ನಿಧಿಯನ್ನು ಧಾರ್ಮಿಕ ಹಾಗೂ ಪ್ರವಾಸೋದ್ಯಮದ ಕ್ಷೇತ್ರವಾಗಿ ಮಾಡುವ ಗುರಿ ಇದೆ ಎಂದರು .

ಬ್ರಹ್ಮಕಲಶೋತ್ಸವದ ನಿಮಿತ್ತ ಮಾರ್ಚ್ 8ರಂದು ಸಂಜೆ ಸಸಿಹಿತ್ಲು ಸಮುದ್ರ ತೀರದಲ್ಲಿ ಕಾಶಿಯ ಗಂಗಾರತಿಯ ಮಾದರಿಯಲ್ಲೇ ಭವ್ಯ ‘ಸಮುದ್ರ ಆರತಿ’ ನಡೆಯಲಿದೆ. ಚಕ್ರವರ್ತಿ ಸೂಲಿಬೆಲೆಯವರ ಮಾರ್ಗದರ್ಶನದಲ್ಲಿ ನಡೆಯುವ ಈ ಸಾಮೂಹಿಕ ಆರಾಧನೆಯಲ್ಲಿ ನೂರಾರು ಅರ್ಚಕರು ಏಕಕಾಲದಲ್ಲಿ ಕಡಲ ಮಾತೆಗೆ ದೀಪಾರತಿ ಬೆಳಗಲಿದ್ದಾರೆ. ಕರಾವಳಿಯ ಇತಿಹಾಸದಲ್ಲೇ ಅತ್ಯಂತ ಅಪರೂಪದ ಈ ಕ್ಷಣಕ್ಕೆ ಸಾಕ್ಷಿಯಾಗಲು ಸಾವಿರಾರು ಭಕ್ತರು ಆಗಮಿಸುವ ನಿರೀಕ್ಷೆಯಿದೆ ಎಂದು ನಳಿನ್ ಕುಮಾರ್ ಹೇಳಿದರು.ಮಾರ್ಚ್ 4ರಂದು ಭವ್ಯ ಹೊರಕಾಣಿಕೆ ಮೆರವಣಿಗೆಯೊಂದಿಗೆ ಕಾರ್ಯಕ್ರಮಗಳು ಚಾಲನೆ ಪಡೆಯಲಿದ್ದು, ಮಾರ್ಚ್ 6ರಂದು ಆಯುತ ಕದಳಿ ಯಾಗ ಹಾಗೂ ಸಾಮೂಹಿಕ ಕುಂಕುಮಾರ್ಚನೆ ನಡೆಯಲಿದೆ ಎಂದರು .

ಬ್ರಹ್ಮಕಲಶೋತ್ಸವ ಸಮಿತಿಯ ಕಾರ್ಯಾಧ್ಯಕ್ಷ ವಾಮನ ಇಡ್ಯಾ ಮಾತನಾಡಿ , “ಭಕ್ತರ ಅಭೀಷ್ಟೆಗಳನ್ನು ಈಡೇರಿಸಲು ಭೂಮಿಯಲ್ಲಿ ಭದ್ರಕಾಲಿಯಾಗಿ ಅವತರಿಸಿದ ತಾಯಿ ಭಗವತಿಯು, ದಾರಿಗಾಸುರನೆಂಬ ದಾನವನ ಸಂಹಾರಕ್ಕಾಗಿ ಸಪ್ತಕನ್ನಿಕೆಯರ ಜೊತೆಗೂಡಿ ಬಂದು ಲೋಕಕಲ್ಯಾಣ ಮಾಡಿದಳು ಎಂಬ ಪುರಾಣ ಹಿನ್ನೆಲೆ ಈ ಕ್ಷೇತ್ರಕ್ಕಿದೆ. ಸಮುದ್ರ ಮಾರ್ಗವಾಗಿ ನಾವೆಯಲ್ಲಿ ಪ್ರಯಾಣ ಬೆಳೆಸಿದ ದೇವಿ, ಸಸಿಹಿತ್ತಿನ ಪ್ರಶಸ್ತ ಭೂಮಿಯಲ್ಲಿ ವಿಶ್ರಾಂತಿಗಾಗಿ ಕುಳಿತಾಗ ಇಲ್ಲಿನ ಭಕ್ತಿಗೆ ಒಲಿದು ನೆಲೆಯಾದಳು ಎನ್ನಲಾಗುತ್ತದೆ. ಮಲಯಾಳಂನ “ದಾರುಕವಧಂ ಪಾಟ್ಟು” ಮತ್ತು ಮಾರ್ಕಂಡೇಯ ಪುರಾಣಗಳಲ್ಲಿ ದೇವಿಯ ಈ ಮಹಿಮೆಯ ವರ್ಣನೆಗಳಿವೆ ಎಂದರು .

ಪತ್ರಿಕಾಗೋಷ್ಠಿಯಲ್ಲಿ ದೇವಸ್ಥಾನದ ಪ್ರಧಾನ ಅರ್ಚಕರು, ಅನುವಂಶಿಕ ಮೊಕೇಸರರಾದ ಶ್ರೀನಿವಾಸ ಯಾನೆ ಅಪ್ಪು ಪೂಜಾರಿ, ಗಂಪಮನೆ ಕಟೀಲು ಆಡಳಿತ ಮೊಕ್ತಸರ ಚಂದ್ರಶೇಖರ ಬೆಳ್ಳಡ ಆಡಳಿತ ಸಮಿತಿ ಮತ್ತು ಬ್ರಹ್ಮಕಲಶೋತ್ಸವ ಸಮಿತಿಯ ಪ್ರಧಾನ ಕಾರ್ಯದರ್ಶಿ ರಮೇಶ ಬಂಗೇರ ಕರಿತೋಟ, ಮಾತೃ ಮಂಡಳಿ ಅಧ್ಯಕ್ಷೆ ಕಸ್ತೂರಿ ಪಂಜ, ಸ್ವಯಂಸೇವಕರ ಸಮಿತಿಯ ಸಂಚಾಲಕ ವಿನೋದ್ ಸಾಲಿಯಾನ್ ಬೆಳ್ಳಾಯರು ಮತ್ತಿತರರು ಉಪಸ್ಥಿತರಿದ್ದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!