ಬ್ರಹ್ಮರಕೂಟ್ಟು ಟೋಲ್ ಗೇಟ್ ಮುಚ್ಚಲು ಆಗ್ರಹಿಸಿ ಮಾರ್ಚ್ 03 ರಂದು ಸಾಮೂಹಿಕ ಧರಣಿ

ಬಂಟ್ವಾಳ: ಬ್ರಹ್ಮರಕೂಟ್ಟು ಟೋಲ್ ಗೇಟ್ ಮುಚ್ಚಲು ಆಗ್ರಹಿಸಿ ಮಾರ್ಚ್ 03 ರಂದು ಬೆಳಿಗ್ಗೆ 9.00 ರಿಂದ ಮಧ್ಯಾಹ್ನ 12.30 ರವರೆಗೆ ಸಮಾನ ಮನಸ್ಕ ಸಂಘಟನೆಗಳ ಸಹಭಾಗಿತ್ವದಲ್ಲಿ ‘ಬ್ರಹ್ಮರಕೂಟ್ಟು ಟೋಲ್ ಗೇಟ್ ತೆರವು ಹೋರಾಟ ಸಮಿತಿ’ ನೇತೃತ್ವದಲ್ಲಿ ಸಾಮೂಹಿಕ ಧರಣಿ ನಡೆಯಲಿದೆ ಎಂದು ಮಾಜಿ ಸಚಿವ ಹಾಗೂ ಬ್ರಹ್ಮರಕೂಟ್ಟು ಟೋಲ್ ಗೇಟ್ ತೆರವು ಹೋರಾಟ ಸಮಿತಿ’ಗೌರವಾಧ್ಯಕ್ಷ ಬಿ.ರಮಾನಾಥ ರೈ ಅವರು ತಿಳಿಸಿದರು.ಅವರು ಬಿಸಿರೋಡಿನ ಪ್ರೆಸ್ ಕ್ಲಬ್ ನಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.

ಟೋಲ್ ಸಂಗ್ರಹಕ್ಕೆ ಸಂಬಂಧಪಟ್ಟಂತೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ರೂಪಿಸಿರುವ ಹಲವು ನಿಯಮಗಳನ್ನು ಉಲ್ಲಂಘಿಸಿ ಕಾರ್ಯಾಚರಿಸುತ್ತಿರುವ ಬ್ರಹ್ಮರಕೂಟ್ಟು ಟೋಲ್ ಕೇಂದ್ರದಲ್ಲಿ ಟೋಲ್ ಸಂಗ್ರಹ ಸ್ಥಗಿತಗೊಳಿಸಬೇಕು, ಟೋಲ್ ಗೇಟ್ ಅನ್ನು ತೆರವುಗೊಳಿಸಬೇಕು ಎಂಬುದು ನಮ್ಮ ಅಭಿಪ್ರಾಯ ಎಂದರು.

ಎರಡು ಟೋಲ್ ಗೇಟ್ ಗಳ ನಡುವೆ ಇರಬೇಕಾದ ಕನಿಷ್ಟ ಅಂತರ, ಸರ್ವೀಸ್ ರಸ್ತೆಗಳು, ತಡೆಯಿಲ್ಲದ ಸಂಚಾರದ ಅವಕಾಶ ಸಹಿತ ಹಲವು ಪ್ರಧಾನ ನಿಯಮಗಳನ್ನು ಉಲ್ಲಂಘಿಸಿ ಬ್ರಹ್ಮರಕೂಟ್ಟು ಟೋಲ್ ಗೇಟ್ ನಲ್ಲಿ ಸುಂಕ ಸಂಗ್ರಹ ನಡೆಸಲಾಗುತ್ತಿದೆ. ಬಿ ಸಿ ರೋಡ್ – ನಂತೂರು ರಸ್ತೆ ಅಭಿವೃದ್ಧಿಗೆ ಹೂಡಿರುವ ಬಂಡವಾಳವನ್ನು ಸಂಗ್ರಹಿಸಿ ಕೆಲವೇ ವರ್ಷಗಳಲ್ಲಿ ಟೋಲ್ ಗೇಟ್ ಮುಚ್ಚವ ಭರವಸೆಯೊಂದಿಗೆ ಬ್ರಹ್ಮರಕೂಟ್ಲುವಿನಲ್ಲಿ ಟೋಲ್ ಸಂಗ್ರಹ ಆರಂಭಿಸಲಾಗಿತ್ತು.

ಇದೀಗ ಟೋಲ್ ಸಂಗ್ರಹ ಆರಂಭಗೊಂಡು 23 ವರ್ಷಗಳ ದೀರ್ಘ ಅವಧಿ ದಾಟಿದೆ. ಯಾವುದೆ ಬೈಪಾಸ್ ಗಳು, ಮೇಲ್ಸ್ತುವೆ, ಕೆಳ ಸೇತುವೆಗಳು, ಸರ್ವೀಸ್ ರಸ್ತೆಗಳು, ಗುಣಮಟ್ಟದ ನಿರ್ವಹಣೆ ಸಹಿತ ಇರಲೇಬೇಕಾದ ಮೂಲಭೂತ ಸೌಲಭ್ಯಗಳು ಇಲ್ಲದ ಸಾಧಾರಣ ಹೂಡಿಕೆಯ ರಸ್ತೆಗೆ 23 ವರ್ಷಗಳ ದೀರ್ಘ ಅವಧಿಗೆ ಟೋಲ್ ಸಂಗ್ರಹ ಮುಂದುವರಿಸುವುದು ಯಾವುದೇ ಕಾರಣಕ್ಕೂ ನ್ಯಾಯಯುತ ಅಲ್ಲ. ಹೂಡಿಕೆ ಮಾಡಿರುವ ಬಂಡವಾಳ, ಸಂಗ್ರಹ ಆಗಿರುವ ಮೊತ್ತದ ವಿವರಗಳೂ ಸಾರ್ವಜನಿಕರಿಗೆ ಲಭ್ಯ ಇಲ್ಲ. ಆರಂಭದ ವರ್ಷಗಳಲ್ಲಿ ಸ್ಥಳೀಯ ವಾಹನಗಳಿಗೆ ನೀಡುತ್ತಿದ್ದ ಉಚಿತ ಓಡಾಟದ ಅವಕಾಶವನ್ನು ಫಾಸ್ಟ್ ಟ್ಯಾಗ್ ಬಂದ ತರುವಾಯ ರದ್ದುಗೊಳಿಸಲಾಗಿದೆ ಎಂದು ತಿಳಿಸಿದರು.

ಎಲ್ಲಾ ಸಕಾರಣಗಳನ್ನು ಮುಂದಿಟ್ಟು, ಬ್ರಹ್ಮರಕೂಟ್ಟು ಟೋಲ್ ಗೇಟ್ ಅನ್ನು ತಕ್ಷಣ ತೆರವುಗೊಳಿಸಬೇಕು ಎಂಬ ಬೇಡಿಕೆಯೊಂದಿಗೆ ಸಮಾನ ಮನಸ್ಕ ಸಂಘಟನೆಗಳು ಒಂದಾಗಿ ‘ಬ್ರಹ್ಮರಕೂಟ್ಟು ಟೋಲ್ ಗೇಟ್ ತೆರವು ಹೋರಾಟ ಸಮಿತಿ’ ನೇತೃತ್ವದಲ್ಲಿ ಹೋರಾಟವನ್ನು ನಡೆಸಲು ತೀರ್ಮಾನಿಸಲಾಗಿದೆ. ಈಗಾಗಲೆ ಬಂಟ್ವಾಳ ಸೇರಿದಂತೆ ಜಿಲ್ಲೆಯ ಹಲವಾರು ಸಂಘ ಸಂಸ್ಥೆಗಳು ಟೋಲ್ ತೆರವು ಹೋರಾಟಕ್ಕೆ ಬೆಂಬಲ ಸೂಚಿಸಿವೆ. ಮಾರ್ಚ್ 3 ರಂದು ಸಾಮೂಹಿಕ ಧರಣಿಯ ಮೂಲಕ ಹೋರಾಟಕ್ಕೆ ಚಾಲನೆ ನೀಡುತ್ತಿದ್ದೇವೆ. ಬ್ರಹ್ಮರಕೂಟ್ಟು ಟೋಲ್ ಗೇಟ್ ತೆರವುಗೊಳ್ಳುವವರೆಗೂ ಹಲವು ಹಂತಗಳಲ್ಲಿ ಹೋರಾಟ ಮುನ್ನಡೆಯಲಿದೆ. ಪಕ್ಷಾತೀತವಾಗಿ ನಡೆಯುವ ಈ ಹೋರಾಟವನ್ನು ನಾಗರಿಕರು, ಸಂಘ ಸಂಸ್ಥೆಗಳು ಬೆಂಬಲಿಸಬೇಕು, ಸಾಮೂಹಿಕ ಧರಣಿಯಲ್ಲಿ ಭಾಗಿಗಳಾಗಬೇಕು ಎಂದು ವಿನಂತಿಸುತ್ತಿದ್ದೇವೆ ಎಂದು ಅವರು ತಿಳಿಸಿದರು.

ಟೋಲ್ ಗೇಟ್ ವಿರೋಧಿ ಹೋರಾಟಗಾರ ಮುನೀರ್ ಕಾಟಿಪಳ್ಳ ಮಾತನಾಡಿ, ಮುನೀರ್ ಕಾಟಿಪಳ್ಳ ಮಾತನಾಡಿ, ಹೆದ್ದಾರಿ ಪ್ರಾಧಿಕಾರದ ಸಭೆ ನಡೆಸಬೇಕು, ಸಾರ್ವಜನಿಕರಿಗೆ ಹೂಡಿಕೆ ಮತ್ತು ಸಂಗ್ರಹವಾದ ಬಗ್ಗೆ ಮಾಹಿತಿ ನೀಡಬೇಕು.ಸುರತ್ಕಲ್ ಹೋರಾಟದ ಹಾದಿಯಲ್ಲಿ ಬೇರೆ ಬೇರೆ ಸಂಘಟನೆಗಳ ಬೆಂಬಲ ವ್ಯಕ್ತವಾಗುತ್ತಿದ್ದು ಗಂಭೀರ ಸ್ವರೂಪದ ಹೋರಾಟಕ್ಕೆ ನಾವು ಸಿದ್ದತೆ ನಡೆಸುತ್ತಿದ್ದೇವೆ ಎಂದು ತಿಳಿಸಿದರು.


ಬ್ರಹ್ಮರಕೂಟ್ಟು ಟೋಲ್ ಗೇಟ್ ನಿರ್ಮಾಣದ ದಶಕದ ತರುವಾಯ ಆರಂಭಗೊಂಡ ತಲಪಾಡಿ ಟೋಲ್ ಗೇಟ್ ನ ಅಂತರ ಬ್ರಹ್ಮರಕೂಟ್ಲುವಿನಿಂದ ಕೇವಲ 32 ಕಿ ಮೀ ಮಾತ್ರ. ಹೆಜಮಾಡಿ ಟೋಲ್ ಗೇಟ್ 44 ಕೀ ಮೀ ದೂರದಲ್ಲಿದೆ. ಈಗ ವಳಾಲು, ಪಣಕಜೆ, ಗಂಜಿಮಠದಲ್ಲಿ ಮೂರು ಹೊಸ ಟೋಲ್ ಗೇಟ್ ಗಳು ನಿರ್ಮಾಣ ಹಂತದಲ್ಲಿದೆ. ಈ ಮೂರೂ ಟೋಲ್ ಗೇಟ್ ಗಳಿಗೆ ಬ್ರಹ್ಮರಕೋಟ್ಲು ಟೋಲ್ ಗೇಟ್ ನಿಂದ ಇರುವ ಅಂತರ ಸರಾಸರಿ 30 ಕಿ ಮೀ ಗಳು ಮಾತ್ರ. ಇದೆಲ್ಲವೂ ಟೋಲ್ ಗೇಟ್ ಗಳ ನಡುವೆ ಇರಬೇಕಾದ ಕನಿಷ್ಟ ಅಂತರದ ನಿಯಮವಾದ 60 ಕಿ ಮೀ ನ ಅರ್ಧದಷ್ಟು ಮಾತ್ರ. ಇಂತಹ ಗಂಭೀರವಾದ ನಿಯಮ ಉಲ್ಲಂಘನೆಗಳೊಂದಿಗೆ ಟೋಲ್ ಸಂಗ್ರಹವನ್ನು ಮುಂದುವರಿಸುವುದನ್ನು ಒಪ್ಪಲು ಸಾಧ್ಯವಿಲ್ಲ ಎಂದ ಅವರು ನಿಯಮಗಳನ್ನು ಉಲ್ಲಂಘಿಸಿ ಟೋಲ್ ಕಾರ್ಯಚರಿಸುತ್ತಿದ್ದು,ಇದರ ವಿರುದ್ಧ ಶಾಂತಿಯುತವಾಗಿ ಕಾನೂನು ಕೈಗೆತ್ತಿಕೊಳ್ಳದೆ ಹೋರಾಟ ನಡೆಯಲಿದೆ ಎಂದು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಸಮಿತಿ ಸಂಚಾಲಕ ಬಿ.ಶೇಖರ್, ಮೋಹನ್ ಶೆಟ್ಟಿ, ಪಿಯೂಸ್ ಎಲ್ ರೊಡ್ರಿಗಸ್, ಕೋಶಾಧಿಕಾರಿ ಬೇಬಿಕುಂದರ್ ಉಪಸ್ಥಿತರಿದ್ದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!