ತುಳು ಅಧಿಕೃತ ಭಾಷೆ ಕುರಿತು ಅಧ್ಯಯನ ವರದಿ ಸರಕಾರಕ್ಕೆ ಸಲ್ಲಿಕೆ

ಮಂಗಳೂರು: ತುಳು ಭಾಷೆಯನ್ನು ರಾಜ್ಯದ ಎರಡನೇ ಅಧಿಕೃತ ಭಾಷೆಯಾಗಿ ಘೋಷಿಸುವ ಪ್ರಸ್ತಾಪದ ಹಿನ್ನೆಲೆಯಲ್ಲಿ ಆಂಧ್ರಪ್ರದೇಶದಲ್ಲಿ ಹೆಚ್ಚುವರಿ ಅಧಿಕೃತ ಭಾಷೆಯನ್ನು ಘೋಷಿಸುವಾಗ ಅನುಸರಿಸಿರುವ ಮಾನದಂಡಗಳ ಕುರಿತು ಅಧ್ಯಯನ ನಡೆಸಲು ರಚಿಸಲಾಗಿದ್ದ ಸಮಿತಿಯು ತನ್ನ ವರದಿಯನ್ನು ರಾಜ್ಯ ಸರ್ಕಾರಕ್ಕೆ ಸಲ್ಲಿಸಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಅಂದಿನ ನಿರ್ದೇಶಕಿ ಕೆ.ಎಂ. ಗಾಯತ್ರಿ ಅವರ ಅಧ್ಯಕ್ಷತೆಯಲ್ಲಿ, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ತಾರಾನಾಥ ಗಟ್ಟಿ ಕಾಪಿಕಾಡ್ ಅವರ ಉಪಸ್ಥಿತಿಯಲ್ಲಿ ಆರು ಸದಸ್ಯರ ಅಧ್ಯಯನ ಸಮಿತಿಯನ್ನು ಸರ್ಕಾರ ನೇಮಿಸಿತ್ತು.

ಈ ಸಮಿತಿ ಜನವರಿ 19 ಮತ್ತು 20ರಂದು ಆಂಧ್ರಪ್ರದೇಶ ರಾಜ್ಯದ ಸಚಿವಾಲಯ ಹಾಗೂ ವಿವಿಧ ಇಲಾಖೆ ಮತ್ತು ಕಚೇರಿಗಳಿಗೆ ಭೇಟಿ ನೀಡಿ, ಅಲ್ಲಿ ಉರ್ದು ಭಾಷೆಯನ್ನು ಎರಡನೇ ಅಧಿಕೃತ ಭಾಷೆಯಾಗಿ ಘೋಷಿಸುವ ಸಂದರ್ಭದಲ್ಲಿ ಅನುಸರಿಸಿದ ಮಾನದಂಡಗಳು ಹಾಗೂ ವಿಧಿವಿಧಾನಗಳ ಬಗ್ಗೆ ಅಧ್ಯಯನ ನಡೆಸಿ ವರದಿ ಸಿದ್ಧಪಡಿಸಿತು. ಸಮಿತಿಯು ತಯಾರಿಸಿದ ವರದಿಯನ್ನು ಬೆಂಗಳೂರಿನ ವಿಕಾಸ ಸೌಧದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕಾರ್ಯದರ್ಶಿ ಜೆ. ಮಂಜುನಾಥ್ ಅವರಿಗೆ ಸಲ್ಲಿಸಲಾಯಿತು. ವರದಿಯ ಜೊತೆಗೆ ತುಳು ಭಾಷೆಯ ಹಿನ್ನೆಲೆ ಹಾಗೂ ಇತಿಹಾಸದ ಕುರಿತು ಪ್ರಸ್ತಾವನೆಯನ್ನು ಕೂಡ ಸೇರಿಸಲಾಗಿದೆ.

ಈ ಸಂದರ್ಭದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕ ಡಾ. ಬಿ.ಎಸ್. ಮಂಜುನಾಥ ಸ್ವಾಮಿ, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ತಾರಾನಾಥ ಗಟ್ಟಿ ಕಾಪಿಕಾಡ್, ಅಧ್ಯಯನ ಸಮಿತಿ ಸದಸ್ಯರಾದ ಯಕ್ಷಗಾನ ಅಕಾಡೆಮಿಯ ಸದಸ್ಯ ಸುಧಾಕರ ಶೆಟ್ಟಿ, ಕಾನೂನು ಇಲಾಖೆಯ ಉಪಕಾರ್ಯದರ್ಶಿ ವನಿತಾ, ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯ ಉಪಕಾರ್ಯದರ್ಶಿ ಮೂರ್ತಿ ಕೆ.ಎನ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಅಧೀನ ಕಾರ್ಯದರ್ಶಿ ಕೆ.ಎಂ. ಶುಭಶ್ರೀ ಹಾಗೂ ಕರ್ನಾಟಕ ಸಾಹಿತ್ಯ ಅಕಾಡೆಮಿ ರಿಜಿಸ್ಟ್ರಾರ್ ಕರಿಯಪ್ಪ ಎನ್. ಉಪಸ್ಥಿತರಿದ್ದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!