“ಆದಿದ್ರಾವಿಡವು ಪ್ರತ್ಯೇಕ ಜಾತಿಯಲ್ಲ ಎಂಬ ಹೇಳಿಕೆಯಿಂದ ಅಸಮಾಧಾನ”: ಅನಿಲ್ ಕುಮಾರ್

ಮಂಗಳೂರು: ನ್ಯಾಯಮೂರ್ತಿ ನಾಗ್ ಮೋಹನ್‌ದಾಸ್ ಅವರು “ಆದಿದ್ರಾವಿಡವು ಪ್ರತ್ಯೇಕ ಜಾತಿಯಲ್ಲ, ಜಾತಿಗಳ ಗುಂಪು” ಎಂದು ನೀಡಿರುವ ಹೇಳಿಕೆಯಿಂದ ಸಮುದಾಯದಲ್ಲಿ ಅಸಮಾಧಾನ ಉಂಟಾಗಿದೆ ಎಂದು ಆದಿದ್ರಾವಿಡ ಸಮುದಾಯದ ಮುಖಂಡ ಹಾಗೂ ಸಮಿತಿಯ ಸಲಹೆಗಾರ ಅನಿಲ್ ಕುಮಾರ್ ತಿಳಿಸಿದ್ದಾರೆ. ಮಂಗಳೂರಿನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕರ್ನಾಟಕ ರಾಜ್ಯ ಸರ್ಕಾರ ಜಾರಿಗೆ ತಂದಿರುವ ಒಳಮೀಸಲಾತಿ ಕ್ರಮದಲ್ಲಿ ಹಿಂದಿನ 101 ಜಾತಿಗಳನ್ನು ಪ್ರವರ್ಗ ಎ, ಬಿ, ಸಿ ಎಂದು ಮರುವರ್ಗೀಕರಿಸಿರುವುದರಿಂದ ಹಲವು ಗೊಂದಲಗಳು ಉಂಟಾಗಿವೆ ಎಂದು ಹೇಳಿದರು.

ಹಲವು ದಶಕಗಳಿಂದ ಸರ್ಕಾರವೇ “ಆದಿದ್ರಾವಿಡ” ಎಂದು ಜಾತಿ ಪ್ರಮಾಣಪತ್ರ ನೀಡುತ್ತಾ ಬಂದಿರುವಾಗ ಈಗ ಅದನ್ನು ಜಾತಿಗಳ ಗುಂಪು ಎಂದು ಹೇಳುವುದು ಸಮುದಾಯದಲ್ಲಿ ಆತಂಕಕ್ಕೆ ಕಾರಣವಾಗಿದೆ ಎಂದು ಅವರು ಕಳವಳ ವ್ಯಕ್ತಪಡಿಸಿದರು. ಆರು ಜಿಲ್ಲೆಗಳಲ್ಲಿ ಸುಮಾರು 8 ಲಕ್ಷ ಜನಸಂಖ್ಯೆ ಹೊಂದಿರುವ ನಮ್ಮ ಸಮುದಾಯದವರು ಅಸಲರು, ಕಲ್ಲಾಡಿ, ಮುಂದಾಲ, ಮುಗೇರ, ಹೊಳೆಯ, ಆದಿಕರ್ನಾಟಕ ಮೊದಲಾದ ವಿವಿಧ ಹೆಸರಿನಲ್ಲಿ ಜಾತಿ ಪ್ರಮಾಣಪತ್ರ ಪಡೆದಿದ್ದಾರೆ. ಕೃಷಿಯೇ ಕುಲಕಸುಬಾಗಿದ್ದು, ಬಹುತೇಕರು ಕೃಷಿ ಕಾರ್ಮಿಕರಾಗಿ ಜೀವನ ಸಾಗಿಸುತ್ತಿದ್ದಾರೆ ಎಂದು ಅವರು ತಿಳಿಸಿದರು. ಬಲಗೈ ಹಾಗೂ ಎಡಗೈ ಗುಂಪುಗಳಲ್ಲಿ ಶಕ್ತಿಶಾಲಿ ಸಮುದಾಯಗಳು ಸೇರಿರುವುದರಿಂದ ನಮ್ಮ ಜನಸಂಖ್ಯೆಗೆ ಅನುಗುಣವಾದ ಮೀಸಲಾತಿ ದೊರೆಯುತ್ತಿಲ್ಲ.

ರಾಜಕೀಯ, ಆರ್ಥಿಕ ಹಾಗೂ ಶೈಕ್ಷಣಿಕವಾಗಿ ಹಿಂದುಳಿದಿರುವ ನಮ್ಮ ಸಮುದಾಯಕ್ಕೆ ಒಳಮೀಸಲಾತಿಯಿಂದಲೂ ಪ್ರಯೋಜನವಾಗುತ್ತಿಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.

ಸಮುದಾಯಕ್ಕೆ ಪ್ರತ್ಯೇಕ ಉಪಜಾತಿ ಮಾನ್ಯತೆ ನೀಡುವಂತೆ ಹಾಗೂ “ಸಾರಮಣಿ ಸಮಾಜ” ಎಂದು ಗುರುತಿಸಿ ಜಾತಿ ಪ್ರಮಾಣಪತ್ರ ನೀಡುವಂತೆ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ. ಪರಿಶಿಷ್ಟ ಪಂಗಡದಲ್ಲಿ ವಾಲ್ಮೀಕಿ ಸಮುದಾಯ, ಕ್ಷೌರಿಕರನ್ನು ಸವಿತಾ ಸಮಾಜ ಹಾಗೂ ವಿಶ್ವಕರ್ಮ ಸಮಾಜಕ್ಕೆ ನೀಡಿರುವ ಮಾನ್ಯತೆಯಂತೆಯೇ ಆದಿದ್ರಾವಿಡ ಉಪಜಾತಿಯಾಗಿ ಸಾರಮಣಿ ಸಮಾಜವನ್ನು ಗುರುತಿಸಿ ಶೇಕಡಾ 2ರಷ್ಟು ಮೀಸಲಾತಿ ಕಲ್ಪಿಸಬೇಕು ಎಂದು ಅವರು ಆಗ್ರಹಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಸಮುದಾಯದ ಸದಸ್ಯರಾದ ಮೋಹನ್, ಶಿವರಾಜ್, ಸೂರಜ್ ಬಳ್ಳಾಳ್ಭಾಗ್, ವಿಜಯ್ ಕುಮಾರ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!