ಮಂಗಳೂರಿನಲ್ಲಿ ಸೌಹಾರ್ದ ಇಫ್ತಾರ್ ಕೂಟ ಮಾರ್ಚ್ 10ರಂದು

ಮಂಗಳೂರು: ಸಂತ ಮದರ್ ತೆರೇಸಾ ವಿಚಾರ ವೇದಿಕೆಯ ಆಶ್ರಯದಲ್ಲಿ “ಪ್ರೀತಿ ಹರಡಲಿ ಎಲ್ಲೆಡೆ” ಎಂಬ ಘೋಷವಾಕ್ಯದೊಂದಿಗೆ ಹಾಗೂ ಸರ್ವ ಧರ್ಮದ ಹಬ್ಬಗಳು ಸರ್ವ ಜನತೆಯ ಹಬ್ಬವಾಗಲಿ ಎಂಬ ಆಶಯದೊಂದಿಗೆ ರಂಜಾನ್ ಹಬ್ಬದ ಪ್ರಯುಕ್ತ ಸೌಹಾರ್ದ ಇಫ್ತಾರ್ ಕೂಟವನ್ನು ಮಾರ್ಚ್ 10, 2026ರಂದು ಸಂಜೆ 5.15ಕ್ಕೆ ಆಯೋಜಿಸಲಾಗಿದೆ. ಬಾವುಟಗುಡ್ಡದಲ್ಲಿರುವ ಸಂತ ಅಲೋಶಿಯಸ್ ಕಾಲೇಜಿನ ಸಹೋದಯ ಸಭಾಂಗಣದಲ್ಲಿ ನಡೆಯುವ ಈ ಕಾರ್ಯಕ್ರಮದ ಕುರಿತು ವೇದಿಕೆಯ ಅಧ್ಯಕ್ಷರಾದ ರೋಯ್ ಕ್ಯಾಸ್ಟಲಿನೋ ಪತ್ರಿಕಾಹೇಳಿಕೆಯಲ್ಲಿ ತಿಳಿಸಿದ್ದಾರೆ.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಚೊಕ್ಕಬೆಟ್ಟುವಿನ ಮೊಹಿಯುದ್ದೀನ್ ಜುಮಾ ಮಸ್ಜಿದ್‌ನ ಧರ್ಮಗುರುಗಳಾದ ಮೌಲಾನಾ ಯು.ಕೆ. ಅಬ್ದುಲ್ ಅಜೀಜ್ ದಾರಿಮಿ, ಸಂತ ಅಲೋಶಿಯಸ್ ಶಿಕ್ಷಣ ಸಂಸ್ಥೆಯ ಸಹ ಉಪಕುಲಪತಿಗಳಾದ ಡಾ. ಮೆಲ್ವಿನ್ ಡಿ ಕುನ್ನಾ ಎಸ್‌ಜೆ, ನಾಡಿನ ಹಿರಿಯ ಸಾಹಿತಿಗಳೂ ನಿವೃತ್ತ ಶಿಕ್ಷಕರಾದ ಬಿ.ಎಂ. ರೋಹಿಣಿ ಹಾಗೂ ಬಾವುಟಗುಡ್ಡ ಝೀನತ್ ಭಕ್ಷ್ ಜುಮಾ ಮಸ್ಜಿದ್‌ನ ಉಪಾಧ್ಯಕ್ಷರಾದ ಕೆ. ಆಶ್ರಫ್ ಭಾಗವಹಿಸಿ ಸೌಹಾರ್ದ ಸಂದೇಶಗಳನ್ನು ನೀಡಲಿದ್ದಾರೆ. ಸಭೆಯ ಅಧ್ಯಕ್ಷತೆಯನ್ನು ವೇದಿಕೆಯ ಅಧ್ಯಕ್ಷರಾದ ರೋಯ್ ಕ್ಯಾಸ್ಟಲಿನೋ ವಹಿಸಲಿದ್ದಾರೆ.

ಕಳೆದ ಎಂಟು ವರ್ಷಗಳಿಂದ ಜಿಲ್ಲೆಯಲ್ಲಿ ಶಾಂತಿ ಮತ್ತು ಸೌಹಾರ್ದತೆಯನ್ನು ಕಾಪಾಡುವಲ್ಲಿ ಸಂತ ಮದರ್ ತೆರೇಸಾ ವಿಚಾರ ವೇದಿಕೆ ಅವಿರತವಾಗಿ ಕಾರ್ಯನಿರ್ವಹಿಸುತ್ತಿದ್ದು, ಪ್ರೀತಿ ಮತ್ತು ಸೇವೆಯ ಮೂಲಕ ಜಗತ್ತಿನಾದ್ಯಂತ ಕೋಟ್ಯಾಂತರ ಹೃದಯಗಳನ್ನು ಗೆದ್ದಿರುವ ಮದರ್ ತೆರೇಸಾ ಅವರ ವಿಚಾರಧಾರೆಯನ್ನು ವಿದ್ಯಾರ್ಥಿ ಹಾಗೂ ಯುವಜನರ ನಡುವೆ ಪರಿಚಯಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆ ಎಂದು ತಿಳಿಸಲಾಗಿದೆ.

ಪ್ರತಿಯೊಂದು ಧರ್ಮದ ಹಬ್ಬಗಳನ್ನು ಸರ್ವ ಧರ್ಮದ ಜನತೆ ಒಗ್ಗೂಡಿ ಆಚರಿಸಿದಾಗ ಮಾತ್ರವೇ ಸಮಾಜದಲ್ಲಿ ಸೌಹಾರ್ದತೆ ಬಲಗೊಳ್ಳಲು ಸಾಧ್ಯವೆಂಬ ನಂಬಿಕೆಯಿಂದ ಈ ಸೌಹಾರ್ದ ಇಫ್ತಾರ್ ಕೂಟವನ್ನು ಆಯೋಜಿಸಲಾಗಿದೆ. ಈ ಮಹತ್ವದ ಕಾರ್ಯಕ್ರಮದಲ್ಲಿ ಸರ್ವ ಧರ್ಮದ ಜನತೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ವೇದಿಕೆಯ ಪ್ರಧಾನ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್ ಮಂಗಳೂರಿನ ಜನತೆಗೆ ಮನವಿ ಮಾಡಿದ್ದಾರೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!