ಅಗಲಿದ ಬಿಜೆಪಿ ಮುಖಂಡ ಸತೀಶ್ ಪ್ರಭುವಿಗೆ ಸಾರ್ವಜನಿಕ ಶ್ರದ್ಧಾಂಜಲಿ

ಮಂಗಳೂರು: ಇತ್ತೀಚೆಗೆ ಅಗಲಿದ ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿರಿಯ ಕಾರ್ಯಕರ್ತರು ಹಾಗೂ ಬಿಜೆಪಿ ಮುಖಂಡರಾದ ಶ್ರೀ ಸತೀಶ್ ಪ್ರಭು ಅವರಿಗೆ ಸಾರ್ವಜನಿಕ ಶ್ರದ್ಧಾಂಜಲಿ ಸಭೆಯು ಕಳೆದ ಶನಿವಾರ ನಗರದ ಟಿ.ವಿ. ರಮಣ ಪೈ ಸಭಾಂಗಣದಲ್ಲಿ ನಡೆಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಡಿ. ವೇದವ್ಯಾಸ ಕಾಮತ್ ಅವರು, ಸತೀಶ್ ಪ್ರಭು ಉತ್ತಮ ಸಂಘಟಕರಾಗಿದ್ದು, ಪಕ್ಷದ ವಿವಿಧ ಜವಾಬ್ದಾರಿಗಳನ್ನು ಯಶಸ್ವಿಯಾಗಿ ನಿರ್ವಹಿಸಿದ್ದರು ಎಂದು ಹೇಳಿದರು. ಸಾಮಾಜಿಕ ಹಾಗೂ ಧಾರ್ಮಿಕ ಕ್ಷೇತ್ರಗಳಲ್ಲಿಯೂ ಅವರು ಅವಿರತವಾಗಿ ಶ್ರಮಿಸಿ ಮಹತ್ವದ ಕೊಡುಗೆ ನೀಡಿದ್ದು, ಸಮಾಜಕ್ಕೆ ಮತ್ತು ನಾಡಿಗೆ ಅವರಿಂದ ಇನ್ನಷ್ಟು ಸೇವೆ ಅವಶ್ಯವಾಗಿತ್ತು. ಅವರ ಸಾಧನೆಗಳು ಎಂದಿಗೂ ಅವಿಸ್ಮರಣೀಯವಾಗಿರುತ್ತವೆ ಎಂದು ಅವರು ಹೇಳಿದರು.

ಬಾಲ್ಯದಿಂದಲೇ ಸಂಘದ ಪ್ರೇರಣೆಯಿಂದ ಸಮಾಜ ಸೇವೆಗೆ ತಮ್ಮ ಜೀವನವನ್ನು ಅರ್ಪಿಸಿದ ಸತೀಶ್ ಪ್ರಭು ಅವರು ರಾಷ್ಟ್ರಧರ್ಮ, ಸಾಮಾಜಿಕ, ಧಾರ್ಮಿಕ ಹಾಗೂ ರಾಜಕೀಯ ಕ್ಷೇತ್ರಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಕಾರ್ಯಕರ್ತರಾಗಿ ಸಮಾಜ ಸೇವೆ ಸಲ್ಲಿಸಿದ್ದ ಅವರು, ಬಳಿಕ ಭಾರತೀಯ ಜನತಾ ಪಾರ್ಟಿಯ ಮಂಡಲ ಹಾಗೂ ಜಿಲ್ಲಾ ಮಟ್ಟದ ಹಲವು ಜವಾಬ್ದಾರಿಗಳನ್ನು ನಿರ್ವಹಿಸಿದ್ದರು.

ಇದಲ್ಲದೆ ಮಂಗಳೂರಿನ ಶ್ರೀ ವೆಂಕಟರಮಣ ದೇವಸ್ಥಾನದ ವಿಶ್ವಸ್ಥರಾಗಿ ಸೇವೆ ಸಲ್ಲಿಸಿದ್ದ ಅವರು, ಸಂಘನಿಕೇತನ ಶ್ರೀ ಗಣೇಶೋತ್ಸವ ಸಮಿತಿಯ ಪ್ರಧಾನ ಕಾರ್ಯದರ್ಶಿಯಾಗಿಯೂ ಕಾರ್ಯನಿರ್ವಹಿಸಿದ್ದರು.

ಸಭೆಯಲ್ಲಿ ಆರೆಸ್ಸೆಸ್ ಪ್ರಾಂತ ಸಹ ಕಾರ್ಯವಾಹ ಪಿ. ಎಸ್. ಪ್ರಕಾಶ್, ಹೊಸದಿಗಂತ ಪತ್ರಿಕೆಯ ಸಿಇಒ, ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ, ಉದ್ಯಮಿ ಗುರುದತ್ ಕಾಮತ್, ಮಂಗಳೂರಿನ ಶ್ರೀ ವೆಂಕಟರಮಣ ದೇವಸ್ಥಾನದ ಟ್ರಸ್ಟಿ ಸಿ.ಎ. ಜಗನ್ನಾಥ ಕಾಮತ್ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದು ಪುಷ್ಪನಮನದೊಂದಿಗೆ ನುಡಿನಮನ ಸಲ್ಲಿಸಿದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!