ಮಂಗಳೂರು: ರಾಷ್ಟ್ರೀಯ ಹಾಗೂ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರಗಳ ನಿರ್ದೇಶನದ ಮೇರೆಗೆ ತ್ವರಿತ ನ್ಯಾಯಕ್ಕಾಗಿ, ಮಂಗಳೂರು, ಬಂಟ್ವಾಳ, ಬೆಳ್ತಂಗಡಿ, ಪುತ್ತೂರು ಮೂಡಬಿದ್ರಿ ಮತ್ತು ಸುಳ್ಯ ನ್ಯಾಯಾಲಯಗಳ ಆವರಣಗಳಲ್ಲಿ ಮಾರ್ಚ್ 14 ರಂದು ರಾಷ್ಟ್ರೀಯ ಲೋಕ್ ಅದಾಲತ್ ಅನ್ನು ಆಯೋಜಿಸಲಾಗಿದೆ ಎಂದು ದಕ್ಷಿಣ ಕನ್ನಡ ಜಿಲ್ಲೆಯ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಬಸವರಾಜ ತಿಳಿಸಿದರು .
ಅವರು ಜಿಲ್ಲಾ ನ್ಯಾಯಾಲಯ ಕಚೇರಿಯಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿಯನ್ನು ನೀಡಿ , “ರಾಷ್ಟ್ರಕ್ಕಾಗಿ ಮಧ್ಯಸ್ಥಿಕೆ 2.0” ಎಂಬ 90 ದಿನಗಳ 2ನೇ ವಿಶೇಷ ಮಧ್ಯಸ್ಥಿಕಾ ಅಭಿಯಾನವು ಗೌರವಾನ್ವಿತ ಸರ್ವೋಚ್ಚ ನ್ಯಾಯಾಲಯದ ಆದೇಶದ ಮೇರೆಗೆ ಹಮ್ಮಿಕೊಂಡಿದ್ದು, ಇದರಲ್ಲಿ ಜನವರಿ 2 ರಿಂದ ಪ್ರಕರಣಗಳ ಗುರುತಿಸುವಿಕೆ ಪ್ರಾರಂಭವಾಗಿದ್ದು ನಮ್ಮ ಜಿಲ್ಲೆಯ ಸುಮಾರು 87 ನುರಿತ ವಕೀಲರು ಮಧ್ಯಸ್ಥಗಾರರಾಗಿ ಮಧ್ಯಸ್ಥಿಕೆ ಪ್ರಕ್ರಿಯೆಗಳಲ್ಲಿ ಕಾರ್ಯನಿರ್ವಹಿಸುತ್ತಾರೆ ಎಂದು ತಿಳಿಸಿದರು .
ಮೇಲ್ಕಂಡ 90 ದಿನಗಳ ಮಧ್ಯಸ್ಥಿಕೆ ಅಭಿಯಾನ ಮತ್ತು ರಾಷ್ಟ್ರೀಯ ಲೋಕ ಅದಾಲತ್ ನಲ್ಲಿ ಸಾರ್ವಜನಿಕರು ನ್ಯಾಯಾಲಯದಲ್ಲಿ ದಾಖಲಾಗದೇ ಇರುವ ಹಾಗೂ ನ್ಯಾಯಾಲಯದಲ್ಲಿ ಇತ್ಯರ್ಥಕ್ಕೆ ಬಾಕಿ ಇರುವ ಪ್ರಕರಣಗಳನ್ನು ರಾಜೀ ಸಂಧಾನದ ಮೂಲಕ ಅತೀ ಶೀಘ್ರದಲ್ಲಿ ಇತ್ಯರ್ಥ ಪಡಿಸಿಕೊಳ್ಳಲು ಇದೊಂದು ಸುವರ್ಣಾವಕಾಶವಾಗಿದೆ ಎಂದರು .
ರಾಜಿ – ಸಂಧಾನದ ಮುಖಾಂತರ ಮೋಟಾರು ವಾಹನ ಅಪಘಾತ ಪ್ರಕರಣಗಳು. , ಚೆಕ್ಕು ಅಮಾನ್ಯ ಹಾಗೂ ಬ್ಯಾಂಕ್ ಸಾಲ ವಸೂಲಾತಿ ಪ್ರಕರಣಗಳು. , ಚೆಕ್ಕು ಅಮಾನ್ಯ ಹಾಗೂ ಬ್ಯಾಂಕ್ ಸಾಲ ವಸೂಲಾತಿ ಪ್ರಕರಣಗಳು , ಅಕ್ರಮ ಮರಳು ಸಾಗಾಣಿಕೆ ಪ್ರಕರಣಗಳು , ಕಾರ್ಮಿಕ ಹಾಗೂ ನಷ್ಟ ಪರಿಹಾರ ವಿವಾದಗಳಿಗೆ ಸಂಬಂಧಪಟ್ಟ ಪ್ರಕರಣಗಳು., ವಿಚ್ಛೇದನ ಪ್ರಕರಣವನ್ನು ಹೊರತುಪಡಿಸಿ ವೈವಾಹಿಕ ಹಾಗೂ ಜೀವನಾಂಶ ಪ್ರಕರಣಗಳು , ಗ್ರಾಹಕರ ವಿವಾದಗಳಿಗೆ ಸಂಬಂಧಪಟ್ಟ ಪ್ರಕರಣಗಳು , ಭೂಸ್ವಾಧೀನ ಹಾಗೂ ಭೂ ಸ್ವಾಧೀನ ಪರಿಹಾರ ಹಂಚಿಕೆ ಪ್ರಕರಣಗಳು , ವಿದ್ಯುತ್ ಹಾಗೂ ನೀರಿನ ಶುಲ್ಕಕ್ಕೆ ಸಂಬಂಧಪಟ್ಟ ಪ್ರಕರಣಗಳು , ವೇತನ ಭತ್ಯೆಗಳಿಗೆ ಸಂಬಂಧಿಸಿದ ಸೇವಾ ಪ್ರಕರಣಗಳ ಹಾಗೂ ಪಿಂಚಣಿ ಪ್ರಕರಣಗಳು ,ಜನನ ಪ್ರಮಾಣ ಪತ್ರಕ್ಕೆ ಸಂಬಂಧಿಸಿದ ಪ್ರಕರಣಗಳು, ಕಾನೂನಾತ್ಮಕವಾಗಿ ರಾಜೀಯಾಗಬಲ್ಲ ಎಲ್ಲಾ ರೀತಿಯ ಸಿವಿಲ್ ಹಾಗೂ ಕ್ರಿಮಿನಲ್ ಪ್ರಕರಣಗಳನ್ನು ಇತ್ಯರ್ಥ ಮಾಡಲಾಗುವುದೆಂದು ತಿಳಿಸಿದರು .
ಪತ್ರಿಕಾಗೋಷ್ಠಿಯಲ್ಲಿ ಹಿರಿಯ ಸಿವಿಲ್ ನ್ಯಾಯಾಧೀಶೆ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಜೈಬುನ್ನಿಸಾ ಉಪಸ್ಥಿತರಿದ್ದರು .