ಮಂಗಳೂರು: ಹಿಂದೂ ಬಾಂಧವರ ಐಕ್ಯತೆ ಮತ್ತು ಏಳಿಗೆಯ ಮಹಾ ಸಂಕಲ್ಪದಲ್ಲಿ 19 ಅಡಿ ಎತ್ತರದ ಶ್ರೀ ಮುಖ್ಯಪ್ರಾಣನ ಶಿಲಾಮೂರ್ತಿ ಪ್ರತಿಷ್ಠೆ ಹಾಗೂ ಬ್ರಹ್ಮಕಲಶೋತ್ಸವದ ಪ್ರಯುಕ್ತ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳು ಮಾ. 31 ರಿಂದ ಎ.2 ರವರೆಗೆ ಶ್ರೀ ಕ್ಷೇತ್ರ ಶಂಕರಪುರದಲ್ಲಿ ಜರಗಲಿದೆ ಎಂದು ಶ್ರೀ ಕ್ಷೇತ್ರ ಶಂಕರಪುರ ದ್ವಾರಕಾಮಯಿ ಮಠದ ಪೀಠಾಧಿಪತಿ ಶ್ರೀ ಸಾಯಿ ಈಶ್ವರ್ ಗುರೂಜಿ ಹೇಳಿದರು.
ಅವರು ನಗರದ ಪತ್ರಿಕಾ ಭವನಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ , ಸುಮಾರು 11 ವರ್ಷಗಳಿಂದ ಧಾರ್ಮಿಕ, ಸಾಮಾಜಿಕ ಸೇವಾ ಕಾರ್ಯಕ್ರಮಗಳನ್ನು ಶ್ರೀ ಕ್ಷೇತ್ರದಲ್ಲಿ ಮಾಡಿಕೊಂಡು ಬರಲಾಗುತ್ತಿದೆ. ಶ್ರೀ ಕ್ಷೇತ್ರ ಆವರಣದಲ್ಲಿ ಸುಮಾರು 60 ಲಕ್ಷ ರೂಪಾಯಿ ವೆಚ್ಚದಲ್ಲಿ 19 ಅಡಿ ಎತ್ತರದ ಏಕ ಶಿಲಾ ಶ್ರೀ ಮುಖ್ಯಪ್ರಾಣನ ಮೂರ್ತಿ ಸ್ಥಾಪನೆಯನ್ನು 2026 ಎಪ್ರಿಲ್ 02 ರಂದು ಮಾಡಲಾಗುವುದೆಂದರು .
ಶ್ರೀ ಮುಖ್ಯಪ್ರಾಣನ ಮೂರ್ತಿಯನ್ನು ಮಾರ್ಚ್ 14 ರಂದು ಉಡುಪಿ ಜೋಡುಕಟ್ಟೆಯಿಂದ ಭವ್ಯ ಮೆರವಣಿಗೆಯಲ್ಲಿ ಶ್ರೀ ಕ್ಷೇತ್ರಕ್ಕೆ ತರಲಾಗುವುದು. ಮಾರ್ಚ್ 26 ರಂದು ಹನುಮ ಜನ್ಮ ಭೂಮಿಯಿಂದ ರಾಮನವಮಿಯಂದು ಹನುಮ ಜ್ಯೋತಿ ಮತ್ತು ಹನುಮ ಧ್ವಜವು ಹೊರಟು ಮಾರ್ಚ್ 29ಕ್ಕೆ ಉಡುಪಿ ತಲುಪಲಿದೆ. ಉಡುಪಿ ಜೋಡುಕಟ್ಟೆಯಿಂದ ಭವ್ಯ ಮೆರವಣಿಗೆಯಿಂದ ಹನುಮ ಜ್ಯೋತಿ, ಹನುಮಧ್ವಜ ಹಾಗೂ ಅವಧೂತ ಭಗವಾನ್ ನಿತ್ಯಾನಂದ ಸ್ವಾಮಿಯ 200 ಕೆಜಿ ತೂಕದ ಪಂಚಲೋಹ ಮೂರ್ತಿಯು ಶ್ರೀ ಕ್ಷೇತ್ರಕ್ಕೆ ತರಲಾಗುದೆಂದರು .
ಮಾರ್ಚ್ 31 ರಿಂದ ಎಪ್ರಿಲ್ 2ರ ವರೆಗೆ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ. ಮೂರ್ತಿ ಸ್ಥಾಪನೆ ಹಾಗೂ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ನಡೆಯಲಿದೆ ಎಂದರು.ಪತ್ರಿಕಾಗೋಷ್ಠಿಯಲ್ಲಿ ಸಮಿತಿಯ ಸದಸ್ಯರಾದ ಕಿರಣ್ ಜೋಗಿ , ಸುಧಾಕರ್ ರಾವ್ ಪೇಜಾವರ , ಗೀತಾಂಜಲಿ ಎಂ ಸುವರ್ಣ , ವಿಜಯ ಕೊಡೆವೂರು ಉಪಸ್ಥಿತರಿದ್ದರು .