ಅಮೆರಿಕಾ ನೀತಿಯಿಂದ ಜಾಗತಿಕ ಸಂಕಷ್ಟ: ಪ್ರಧಾನಿ ನಡೆ ಟೀಕಿಸಿದ ಹರೀಶ್ ಕುಮಾರ್

ಮಂಗಳೂರು: ಇರಾನ್–ಅಮೆರಿಕಾ–ಇಸ್ರೇಲ್ ನಡುವಿನ ಉದ್ವಿಗ್ನತೆ ಜಾಗತಿಕ ಮಟ್ಟದಲ್ಲಿ ಸಂಕಷ್ಟ ಉಂಟುಮಾಡುವ ಸಾಧ್ಯತೆ ಇದೆ. ಅಮೆರಿಕಾದ ಉದ್ದಟ ನೀತಿಯಿಂದ ವಿಶ್ವಕ್ಕೆ ದೊಡ್ಡ ಕಂಟಕ ಎದುರಾಗಿದ್ದು, ತೈಲ ರಾಷ್ಟ್ರಗಳನ್ನು ತನ್ನ ಹತೋಟಿಯಲ್ಲಿ ಇಟ್ಟುಕೊಳ್ಳುವ ಪ್ರಯತ್ನ ನಡೆಯುತ್ತಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ. ಹರೀಶ್ ಕುಮಾರ್ ಆರೋಪಿಸಿದರು.

ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಪರಿಸ್ಥಿತಿಯಿಂದ ಜಾಗತಿಕ ತೈಲ ಮತ್ತು ಅನಿಲ ಮಾರುಕಟ್ಟೆ ಮೇಲೆ ಪರಿಣಾಮ ಬಿದ್ದು ಗ್ಯಾಸ್ ಸಿಲಿಂಡರ್ ಬೆಲೆ ಏರಿಕೆ ಕಾಣುತ್ತಿದೆ ಎಂದು ಹೇಳಿದರು. ಆದರೆ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ನಿರ್ಧಾರಗಳಿಂದ ಈ ಪರಿಸ್ಥಿತಿ ಉಂಟಾದರೂ, ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಅದನ್ನು ಪ್ರಶ್ನಿಸದೆ ಟ್ರಂಪ್ ಹಾಕಿದ ತಾಳಕ್ಕೆ ಕುಣಿಯುತ್ತಿದ್ದಾರೆ ಎಂದು ಟೀಕಿಸಿದರು.

ದೇಶದಲ್ಲಿ ಗ್ಯಾಸ್ ಸಿಲಿಂಡರ್ ಕೊರತೆ ಉಂಟಾಗಿದ್ದರೂ ಪ್ರಧಾನಿ, ಕೇಂದ್ರ ಸಚಿವರು ಅಥವಾ ಸಂಸದರು ಈ ಬಗ್ಗೆ ಮಾತನಾಡುತ್ತಿಲ್ಲ ಎಂದು ಅವರು ಆರೋಪಿಸಿದರು. ಕಮರ್ಷಿಯಲ್ ಸಿಲಿಂಡರ್ ಪೂರೈಕೆ ತಾತ್ಕಾಲಿಕವಾಗಿ ನಿಂತ ಕಾರಣ ಅನೇಕ ಹೋಟೆಲ್‌ಗಳು ಮುಚ್ಚಲ್ಪಟ್ಟಿದ್ದು, ಹಲವಾರು ಕಾರ್ಮಿಕರು ಉದ್ಯೋಗ ಕಳೆದುಕೊಂಡಿದ್ದಾರೆ. ದೇವಾಲಯಗಳು ಮತ್ತು ಕಾರ್ಖಾನೆಗಳಿಗೂ ಇದರ ಪರಿಣಾಮ ಈಗಾಗಲೇ ತಟ್ಟಿದೆ ಎಂದು ಹೇಳಿದರು.

ಕೇಂದ್ರ ಸರ್ಕಾರವು ತೊಘಲಕ್ ದರ್ಬಾರ್ ನಡೆಸುತ್ತಿರುವಂತಾಗಿದೆ. ಅದಾನಿ ಮತ್ತು ಅಂಬಾನಿ ಮುಂತಾದ ದೊಡ್ಡ ಉದ್ಯಮಿಗಳಿಗೆ ಮಾತ್ರ “ಅಚ್ಚೇ ದಿನ್” ಇದ್ದು, ಸಾಮಾನ್ಯ ಜನರಿಗೆ ಅಚ್ಚೇ ದಿನ್ ಇಲ್ಲ ಎಂದು ಹರೀಶ್ ಕುಮಾರ್ ಕಿಡಿಕಾರಿದರು.

ಕೇಂದ್ರ ಪೆಟ್ರೋಲಿಯಂ ಸಚಿವರು ದೇಶದಲ್ಲಿ ಅನಿಲದ ಸಾಕಷ್ಟು ದಾಸ್ತಾನು ಇದೆ ಎಂದು ಹೇಳುತ್ತಿದ್ದರೂ ಗ್ಯಾಸ್ ಪೂರೈಕೆ ಏಕೆ ನಿಲ್ಲಿಸಲಾಗಿದೆ ಎಂಬುದನ್ನು ಸ್ಪಷ್ಟಪಡಿಸಬೇಕು. ಬಿಕ್ಕಟ್ಟು ಇಲ್ಲವೆಂದು ಹೇಳುತ್ತಿದ್ದರೆ ಎಸ್ಮಾ ಕಾಯ್ದೆ ಜಾರಿಗೆ ತಂದಿರುವುದೇಕೆ ಎಂದು ಅವರು ಪ್ರಶ್ನಿಸಿದರು.

ಈ ಎಲ್ಲಾ ಸಮಸ್ಯೆಗಳ ಮೂಲ ಕಾರಣ ಅಮೆರಿಕಾದ ನಿರ್ಧಾರಗಳಿಗೆ ಭಾರತ ಸರ್ಕಾರ ಮಣಿಯುತ್ತಿರುವುದೇ ಎಂದು ಆರೋಪಿಸಿದ ಅವರು, “ನಮ್ಮ ದೇಶದ ಪ್ರಧಾನಿ ನರೇಂದ್ರ ಮೋದಿ ಅವರೇ ಅಥವಾ ಡೊನಾಲ್ಡ್ ಟ್ರಂಪ್ ಅವರೇ ಎಂದು ಅನುಮಾನ ಮೂಡುತ್ತಿದೆ” ಎಂದು ಟೀಕಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡರಾದ ಸದಾಶಿವ ಉಳ್ಳಾಲ್, ಅಪ್ಪಿಲತಾ, ಶುಭೋದಯ ಆಳ್ವ, ಸಲೀಮ್, ನೀರಜ್ ಪಾಲ್, ಸುಹಾನ್ ಆಳ್ವ ಸೇರಿದಂತೆ ಹಲವರು ಉಪಸ್ಥಿತರಿದ್ದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!